ಸಾರಾಂಶ
ಕಾರವಾರ: ತರಕಾರಿ ಧಾರಣೆ ವಾರದಿಂದ ವಾರಕ್ಕೆ ಹೆಚ್ಚುತ್ತಿದೆ. ತರಕಾರಿ ಮಾರುಕಟ್ಟೆಗೆ ಹೋದ ಗ್ರಾಹಕರು ದರ ಕೇಳಿ ಹೌಹಾರುತ್ತಿದ್ದಾರೆ. ಉತ್ತರ ಕನ್ನಡದಲ್ಲಿ ತರಕಾರಿ ಬೆಳೆ ತುಂಬ ಕಡಿಮೆ. ಅದೂ ಒಂದು ಸೀಜನ್‌ಗೆ ಮಾತ್ರ ಕೆಲವೆಡೆ ಸೀಮಿತವಾಗಿ ಬೆಳೆಯಲಾಗುತ್ತದೆ. ಜಿಲ್ಲೆಗೆ ಬೆಳಗಾವಿ, ಹಾವೇರಿ, ಧಾರವಾಡ, ಗದಗ ಮತ್ತಿತರ ಜಿಲ್ಲೆಗಳಿಂದ ತರಕಾರಿ ಬರುತ್ತಿದೆ. ಈ ಬಾರಿ ತರಕಾರಿ ಬೆಳೆಯುವಲ್ಲಿ ಭಾರಿ ಮಳೆ. ಈಗಲೂ ಮಳೆ ಮುಂದುವರಿದಿದೆ. ಕಾಯಿಪಲ್ಲೆಗಳು ಮಳೆಗೆ ಸಿಲುಕಿ ಕೊಳೆತುಹೋಗುತ್ತಿವೆ. ಬೇಡಿಕೆ ಇರುವಷ್ಟು ತರಕಾರಿಗಳು ಲಭ್ಯವಿಲ್ಲ. ಹೀಗಾಗಿ ಧಾರಣೆ ವಾರದಿಂದ ವಾರಕ್ಕೆ ಏರುತ್ತಿದೆ. ದೀಪಾವಳಿ ಹಬ್ಬದಲ್ಲಿ ತರಕಾರಿಗೆ ಬೇಡಿಕೆ ಹೆಚ್ಚು. ಆದರೆ ಇಳುವರಿ ಕಡಿಮೆ. ಮಾರುಕಟ್ಟೆಗೆ ಬಂದ ಗ್ರಾಹಕರು ದರ ಕೇಳಿ ಕಂಗಾಲಾಗಿದ್ದಾರೆ. ಕೆಜಿಯೊಂದಕ್ಕೆ ₹30, ₹40ಕ್ಕೆ ಮಾರಾಟವಾಗುತ್ತಿದ್ದ ಕಾಯಿಪಲ್ಲೆಗಳ ದರ ₹80 ಗಳಿಗೇರಿದೆ. ತಿಂಗಳ ಹಿಂದಿನ ದರಕ್ಕೆ ಹೋಲಿಸಿದರೆ ಡಬಲ್ ಆಗಿದೆ. ನಿಂಬೆಹಣ್ಣಿನ ದರವೂ ಭಾರಿ ಏರಿಕೆಯಾಗಿದೆ. ಒಂದು ಲಿಂಬು ₹5ಕ್ಕೆ ಒಂದರಂತೆ ಮಾರಾಟವಾಗುತ್ತಿದೆ. ಬೆಳೆಯೇ ಇಲ್ಲ. ಬೆಳೆಗಾರರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ದರ ಹೆಚ್ಚಳವಾಗದೆ ಮತ್ತೇನು ಎಂದು ಮಾರಾಟಗಾರರು ಹೇಳುತ್ತಿದ್ದಾರೆ. ಹವಾಮಾನ ವೈಪರೀತ್ಯ, ಬೇಸಿಗೆಯಲ್ಲೂ ಕಾಡುವ ಮಳೆ, ಮಳೆಗಾಲದಲ್ಲಿ ಬರುವ ಪ್ರವಾಹ ಮತ್ತಿತರ ಕಾರಣಗಳಿಂದ ತರಕಾರಿ ಬೆಳೆಗಾರರೂ ಬೇರೆ ಬೇರೆ ಬೆಳೆಯತ್ತ ಹೊರಳುತ್ತಿದ್ದಾರೆ. ಇದರಿಂದ ವರ್ಷದಿಂದ ವರ್ಷಕ್ಕೆ ತರಕಾರಿ ಬೆಳೆಗಾರರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಬೆಳಗಾವಿಯ ತರಕಾರಿ ಮಾರಾಟಗಾರ ಹನುಮಂತಪ್ಪ ಹೇಳುತ್ತಾರೆ. ಎಷ್ಟು ಬೆಲೆ?:
ಬೀನ್ಸ್(ಕೆಜಿಗೆ) ₹160, ಕ್ಯಾರೆಟ್ ₹100, ತೊಂಡೆಕಾಯಿ ₹90, ಟೊಮೇಟೊ ₹80, ಬದನೆಕಾಯಿ ₹80, ಚೌಳಿಕಾಯಿ ₹80, ಈರುಳ್ಳಿ ₹80, ಬಟಾಟೆ ₹60, ಹಿರೇಕಾಯಿ ₹60, ಎಲೆಕೋಸು ₹40, ಕೊತ್ತಂಬರಿ 1 ಕಟ್ಟಿಗೆ ₹40 ಇದೆ.ಇಂದು, ನಾಳೆ ನೀರು ಸರಬರಾಜಿನಲ್ಲಿ ವ್ಯತ್ಯಯ
ಕಾರವಾರ: ಕಾರವಾರ- ಅಂಕೋಲಾ ಮತ್ತು ಮಾರ್ಗ ಮಧ್ಯದ ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಯೋಜನೆಯ ಸರಳೆಬೈಲ್‌ನಲ್ಲಿ ನೀರು ಸೋರಿಕೆಯಾಗುತ್ತಿದ್ದು, ದುರಸ್ತಿ ಕಾಮಗಾರಿ ಹಿನ್ನೆಲೆ ಬುಧವಾರ ಹಾಗೂ ಗುರುವಾರ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ನ. 6 ಮತ್ತು ನ. 7ರಂದು ಕಾರವಾರ- ಅಂಕೋಲಾ, ಸೀಬರ್ಡ್ ನೌಕಾನೆಲೆ, ಮತ್ತು ಗ್ರಾಸಿಮ್ ಇಂಡಸ್ಟ್ರೀಸ್ ಲಿ. ಬಿಣಗಾ ಹಾಗೂ ಮಾರ್ಗ ಮಧ್ಯದ ಹಳ್ಳಿಗಳಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕಾರವಾರ ಉಪವಿಭಾಗದ ಕನನೀಸ ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.