ಸಾರಾಂಶ
ವೆಬ್‌ವರ್ಕ್ಸ್ ಕಂಪನಿಯಿಂದ ಬೆಂಗಳೂರಲ್ಲಿ ಬೃಹತ್ ಡೇಟಾ ಪಾರ್ಕ್ ನಿರ್ಮಾಣಕ್ಕೆ ಹೂಡಿಕೆಯೂ ಸೇರಿದಂತೆ ರಾಜ್ಯಕ್ಕೆ ದಾವೊಸ್ ಶೃಂಗದಲ್ಲಿ ಬೃಹತ್ ಹೂಡಿಕೆಗಳು ಹರಿದುಬಂದಿವೆ. ಮೈಕ್ರೋಸಾಫ್ಟ್, ಹಿಟಾಚಿ, ಲುಲು, ಎಚ್‌ಪಿಯಿಂದ ಕರ್ನಾಟಕದಲ್ಲಿ ಹೂಡಿಕೆ ಮಾಡುವುದಾಗಿ ಸಚಿವ ಎಂಬಿ ಪಾಟೀಲ್ ತಿಳಿಸಿದ್ದು, ಸಿಎಂ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸ್ವಿಟ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗದಲ್ಲಿ ಮಂಗಳವಾರ ಕರ್ನಾಟಕಕ್ಕೆ ಭಾರೀ ಪ್ರಮಾಣದ ಬಂಡವಾಳ ಹರಿದು ಬಂದಿದ್ದು, 22 ಸಾವಿರ ಕೋಟಿ ರು. ಹೂಡಿಕೆ ಪ್ರಸ್ತಾವನೆಗೆ ವಿವಿಧ ಸಂಸ್ಥೆಗಳೊಂದಿಗೆ ಒಂಡಂಬಡಿಕೆ ಮಾಡಿಕೊಳ್ಳಲಾಗಿದೆ.ಈ ಕುರಿತು ಮಾಹಿತಿ ನೀಡಿರುವ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ರಾಜ್ಯದಲ್ಲಿ ಬಂಡವಾಳ ಹೂಡಲು ಹಲವು ಸಂಸ್ಥೆಗಳು ಆಸಕ್ತಿ ವಹಿಸಿ ಒಡಂಬಡಿಕೆ ಮಾಡಿಕೊಂಡಿವೆ. ಪ್ರಮುಖವಾಗಿ ವೆಬ್‌ವರ್ಕ್ಸ್ ಸಂಸ್ಥೆಯು ಬೆಂಗಳೂರಿನಲ್ಲಿ 100 ಮೆಗಾವ್ಯಾಟ್ ಸಾಮರ್ಥ್ಯದ 20 ಸಾವಿರ ಕೋಟಿ ರು. ಬಂಡವಾಳ ಹೂಡಿಕೆಯ ಡೇಟಾ ಸೆಂಟರ್ ಪಾರ್ಕ್ ಯೋಜನೆಗೆ ಒಡಂಬಡಿಕೆ ಮಾಡಿಕೊಂಡಿದೆ. ಅದರ ಜತೆಗೆ ಮೈಕ್ರೋಸಾಫ್ಟ್, ಹಿಟಾಚಿ, ಲುಲು ಗ್ರೂಪ್, ಹ್ಯೂಲೆಟ್ ಪೆಕಾರ್ಡ್ (ಎಚ್‌ಪಿ), ಹನಿವೆಲ್, ಐನಾಕ್ಸ್, ವೋಲ್ವೋ, ನೆಸ್ಲೆ, ಕಾಯಿನ್ ಬೇಸ್, ಬಿಎಲ್ ಆಗ್ರೋ, ಟಕೇಡಾ ಫಾರ್ಮಾ ಸೇರಿದಂತೆ ಇನ್ನಿತರ ಸಂಸ್ಥೆಗಳು 2 ಸಾವಿರ ಕೋಟಿ ರು. ಮೌಲ್ಯದ ಹೂಡಿಕೆಗೆ ಒಪ್ಪಂದ ಮಾಡಿಕೊಂಡಿವೆ ಎಂದರು.ನೂತನ ಒಪ್ಪಂದದಿಂದ ಮೈಕ್ರೋಸಾಫ್ಟ್ ಸಂಸ್ಥೆಯು ಡಿಜಿಟಲ್ ಉತ್ಪಾದಕತೆ, ಉದ್ಯಮಶೀಲತೆ ಮತ್ತು ಸಂವಹನಕ್ಕೆ ಸಂಬಂಧಿಸಿದಂತೆ ಮೈಕ್ರೋಸಾಫ್ಟ್ ರೈಸ್ ಡಿಜಿಟಲ್ ಸ್ಕಿಲ್ಲಿಂಗ್ ಸೌಲಭ್ಯದ ಮೂಲಕ 70 ಗಂಟೆಗಳ ವರ್ಚುವಲ್ ತರಬೇತಿ ನೀಡಲಿದೆ. ಅದರಿಂದ ರಾಜ್ಯದ ಯುವಜನರಿಗೆ ಕ್ಲೌಡ್, ಎಐ, ಸೈಬರ್ ಭದ್ರತೆ ಕ್ಷೇತ್ರಗಳಲ್ಲಿ ಅವಕಾಶ ಸಿಗಲಿದೆ. ಹನಿವೆಲ್ ಸಂಸ್ಥೆಯು ಐಒಟಿ ಮೂಲಕ ಸಂಚಾರ ನಿರ್ವಹಣೆ, ತ್ಯಾಜ್ಯ ನಿರ್ವಹಣೆ ಸೇರಿದಂತೆ ಇನ್ನಿತರ ವಿಚಾರಗಳನ್ನು ನಿಭಾಯಿಸಲಿದೆ. ಹಿಟಾಚಿಯು ರಾಜ್ಯದ ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆ, ಶಿಕ್ಷಣ ಮತ್ತು ಇ-ಗವರ್ನೆನ್ಸ್ ಕ್ಷೇತ್ರಗಳಲ್ಲಿ ಬಂಡವಾಳ ಹೂಡಲಿದೆ. ಅದರಿಂದ ಗ್ರಾಮೀಣ ಪ್ರದೇಶದಲ್ಲಿ ಹೇರಳ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ ಎಂದು ತಿಳಿಸಿದರು. ದಾವೋಸ್‌ಗೆ ತೆರಳಿರುವ ನಿಯೋಗದಲ್ಲಿ ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಐಟಿಬಿಟಿ ಇಲಾಖೆ ಕಾರ್ಯದರ್ಶಿ ಏಕರೂಪ್ ಕೌರ್, ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಮಹೇಶ್ ಇದ್ದರು.ವಿಜಯಪುರದಲ್ಲಿ ಲುಲು 300 ಕೋಟಿ ರು. ಹೂಡಿಕೆದಾವೋಸ್‌ನಲ್ಲಿ ಮಾಡಿಕೊಳ್ಳಲಾದ ಒಪ್ಪಂದದಂತೆ ಲುಲು ಗ್ರೂಪ್, ಬಿಎಲ್ ಆಗ್ರೋ ಸಂಸ್ಥೆಗಳು ವಿಜಯಪುರದಲ್ಲಿ ಹೂಡಿಕೆಗೆ ಆಸಕ್ತಿವಹಿಸಿವೆ. ಲುಲು ಸಂಸ್ಥೆಯು ವಿಜಯಪುರದಲ್ಲಿ 300 ಕೋಟಿ ರು. ಹೂಡಿಕೆ ಮಾಡಿ, ಹಣ್ಣು ಮತ್ತು ತರಕಾರಿ ಸಂಸ್ಕರಣಾ ಘಟಕಗಳನ್ನು ಆರಂಭಿಸಲಿದೆ. ಅದರ ಜತೆಗೆ ಬಿಎಲ್ ಗ್ರೂಪ್ ಸಂಸ್ಥೆಯು ವಿಜಯಪುರದಲ್ಲಿ ಆಹಾರ ಸಂಸ್ಕರಣಾ ಘಟಕ ಆರಂಭಿಸಲು ಮುಂದೆ ಬಂದಿದೆ.