ಸಾರಾಂಶ
ಅರಕಲಗೂಡು ತಾಲೂಕಿನ ಕೊಣನೂರು ಬಿಎಂಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಪ್ರಥಮ ಬಾರಿಗೆ ಬೃಹತ್ ಉದ್ಯೋಗ ಮೇಳವನ್ನು ಫೆ.22ರಂದು ಹಮ್ಮಿಕೊಳ್ಳಲಾಗಿದೆ. ತಾಲೂಕು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ನಿರುದ್ಯೋಗಿ ಯುವಕ, ಯುವತಿಯರು, ಮಹಿಳೆಯರು, ಪುರುಷರು ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕೆಂದು ಶಾಸಕ ಎ.ಮಂಜು ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಅರಕಲಗೂಡು
ತಾಲೂಕಿನ ಕೊಣನೂರು ಬಿಎಂಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಪ್ರಥಮ ಬಾರಿಗೆ ಬೃಹತ್ ಉದ್ಯೋಗ ಮೇಳವನ್ನು ಫೆ.22ರಂದು ಹಮ್ಮಿಕೊಳ್ಳಲಾಗಿದೆ. ತಾಲೂಕು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ನಿರುದ್ಯೋಗಿ ಯುವಕ, ಯುವತಿಯರು, ಮಹಿಳೆಯರು, ಪುರುಷರು ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕೆಂದು ಶಾಸಕ ಎ.ಮಂಜು ಮನವಿ ಮಾಡಿದರು.ಬಿಎಂ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉದ್ಯೋಗ ಮೇಳಗಳು ನಗರ ಪ್ರದೇಶಕ್ಕೆ ಸೀಮಿತವಾಗಿ ನಡೆಯುತ್ತವೆ. ಈ ಕಾಲೇಜಿನ ಅಧ್ಯಾಪಕವರ್ಗ ಸೇರಿಕೊಂಡು ಗ್ರಾಮೀಣ ಭಾಗದ ಎಲ್ಲಾ ವಯಸ್ಸಿನ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಈ ವಿನೂತನ ಮತ್ತು ಅವಶ್ಯಕವಾಗಿರುವ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು ಶ್ಲಾಘನೀಯವಾಗಿದೆ ಎಂದರು.
ಉದ್ಯೋಗಮೇಳ ಸಂಯೋಜಕ ಸುನೀಲ್ ಮಾತನಾಡಿ, ಬೆಂಗಳೂರಿನ ಅನೇಕ ಪ್ರಖ್ಯಾತ ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿವೆ. ಸುಮಾರು 50ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳುತ್ತಿವೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಗ್ರಿ, ಸ್ನಾತಕೋತ್ತರ ಪದವಿ, ಎಂಜಿನಿಯರ್ ಪದವೀಧರರು, ಎಂಬಿಎ, ಬಿಬಿಎಂ, ಡಿಪ್ಲೊಮೋ, ಐಟಿಐ ಇತರೆ ಶಿಕ್ಷಣ ಮುಗಿಸಿರುವವರು ಭಾಗವಹಿಸಿ ಉದ್ಯೋಗ ಪಡೆದುಕೊಳ್ಳಬಹುದಾಗಿದೆ. ಮೇಳದಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ನಾಲ್ಕು ಪಾಸ್‌ಪೋರ್ಟ್ ಭಾವಚಿತ್ರ, ಮಾರ್ಕ್ಸಕಾರ್ಡ್ ಜತೆಗೆ ಸ್ವವಿವರ ಇರುವ ಅರ್ಜಿ ಹಾಗೂ ಯಾವುದಾದರೂ ಉದ್ಯೋಗದಲ್ಲಿ ಅನುಭವ ಇದ್ದರೇ ಒಳ್ಳೆಯದು. ಈ ಎಲ್ಲಾ ವಿವರಗಳೊಂದಿಗೆ ಹೆಸರು ನೊಂದಾಯಿಸಿಕೊಳ್ಳಬೇಕಿದೆ. ವಿಶೇಷವಾಗಿ ಮಹಿಳೆಯರಿಗೆ ಹೊಸ ರೀತಿಯಲ್ಲಿ ಅವಕಾಶ ಕೊಡಲು ಉದ್ದೇಶಿಸಲಾಗಿದೆ. 35ವರ್ಷ ಮೀರಿರುವವರಿಗೆ ಹಾಸ್ಪೆಟಾಲಿಟಿ, ಓಲ್ಡೇಜ್ ಇಂತಹ ಕ್ಷೇತ್ರದಲ್ಲಿ ತರಬೇತಿ ನೀಡಿ ಉದ್ಯೋಗ ಕೊಡಲು ಕಂಪನಿಗಳು ಮುಂದೆ ಬಂದಿವೆ. ಅಲ್ಲದೆ ಮುಂದೆಯೂ ಕೂಡ ಕಾಲೇಜಿನಲ್ಲಿ ಉದ್ಯೋಗ ಮೇಳ ಆಯೋಜನೆ ಮಾಡಲು ಉದ್ದೇಶಿಸಲಾಗಿದೆ. ಕೊಣನೂರು ಕಾಲೇಜಿನಲ್ಲಿ ಓದಿದ ನಿರುದ್ಯೋಗಿ ಯುವಕ, ಯುವತಿಯರು ಕಡ್ಡಾಯವಾಗಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕೆಂದು ಅವರು ವಿನಂತಿಸಿದರು.ಪ್ರಾಂಶುಪಾಲ ರಾಜೀವ್, ಸಿಡಿಸಿ ಉಪಾಧ್ಯಕ್ಷ ಚೌಡೇಗೌಡ ಅವರು ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಮಿಸ್ಬಾ ರಿಜ್ವಾನ್, ಅಧ್ಯಾಪಕರು, ಪ್ರಮುಖರು ಹಾಜರಿದ್ದರು.