ಸಾರಾಂಶ
ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಕ್ಕೆ ಒತ್ತಾಯ । ಮಲೆ ಮಹದೇಶ್ವರ ಬೆಟ್ಟದಿಂದ ನಡೆಯಲಿರುವ 4 ದಿನಗಳ ಪಾದಯಾತ್ರೆ
ಕನ್ನಡಪ್ರಭ ವಾರ್ತೆ ಚಾಮರಾಜನಗರಜಿಲ್ಲೆಯ ರೈತರ ಸಮಸ್ಯೆಗಳು, ಬರ ಪರಿಹಾರ, ಹಾಡಿ ಜನರಿಗೆ ಮೂಲಭೂತ ಸೌಕರ್ಯ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರ ಜನಪ್ರತಿನಿಧಿಗಳ ಗಮನಕ್ಕೆ ತರಲು ಜ. 23ರಂದು ಮಹದೇಶ್ವರ ಬೆಟ್ಟದಿಂದ ಚಾಮರಾಜನಗರ ಜಿಲ್ಲಾ ಅಂಬೇಡ್ಕರ್ ಕ್ರೀಡಾಂಗಣದವರೆಗೆ ಸಾಮೂಹಿಕ ರೈತ ಸಂಘದಿಂದ ಹಮ್ಮಿಕೊಂಡಿರುವ ಬೃಹತ್ ಪಾದಯಾತ್ರೆಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಾಲೂಕು ಸಾಮೂಹಿಕ ರೈತ ಸಂಘದ ಮುಖಂಡರು ಹೇಳಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ಸಂಚಾಲಕ ಬಂದಿಗೌಡನಹಳ್ಳಿ ನಟರಾಜು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು ನಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೊಡಿಸುವಲ್ಲಿ ವಿಫಲರಾಗಿರುವುದರಿಂದ ಈ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದ್ದು, ಇದಕ್ಕೆ ನಮ್ಮ ಸಂಪೂರ್ಣ ಬೆಂಬಲ ನೀಡಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದರು.
ಜ. 23ರ ಮಂಗಳವಾರ ಬೆಳಗ್ಗೆ 8 ಗಂಟೆಗೆ ಮಲೆಮಹದೇಶ್ವರ ಬೆಟ್ಟದ ದೇವಸ್ಥಾನದ ಮುಂಭಾಗದಿಂದ ಹೊರಡಲಿರುವ ನಾಲ್ಕು ದಿನಗಳ ಈ ಪಾದಯಾತ್ರೆಗೆ ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು, ರೈತ ಸಂಘದ ಪ್ರಮುಖರಾದ ಚುಕ್ಕಿ ನಂಜುಂಡಸ್ವಾಮಿ, ಕೆ.ಟಿ. ಗಂಗಾಧರ, ಸಹಜ ಕೃಷಿ ವಿಜ್ಞಾನಿ ಡಾ. ಮಂಜುನಾಥ ಎಚ್, ಇನ್ನಿತರ ರೈತ ಮುಖಂಡರು ಚಾಲನೆ ನೀಡಲಿದ್ದಾರೆ ಎಂದರು.ಜ. 26ರಂದು ಬೆಳಗ್ಗೆ 8 ಗಂಟೆಗೆ ಚಾಮರಾಜನಗರದ ನಡೆಯುವ ಜಿಲ್ಲಾ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯುವ ಗಣರಾಜ್ಯೋತ್ಸವ ಧ್ವಜಾಹೋರಣ ಸ್ಥಳಕ್ಕೆ ಪಾದಯಾತ್ರೆ ಬರಲಿದೆ ಎಂದರು. ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನ ಬೆಟ್ಟ ಸಮಸ್ಯೆ ಬಗೆಹರಿದಿಲ್ಲ, ಇಲ್ಲಿನ ರೈತರು ಮೂಲತಳಿಗಳನ್ನು ಉಳಿಸಿಕೊಂಡು ಬೆಳೆಯುತ್ತಾರೆ. ಆದರೆ, ಹೆಚ್ಚಿನ ಬೆಲೆ ನೀಡಿ ಖರೀದಿಸಲು ಸರ್ಕಾರ ಯೋಜನೆ ರೂಪಿಸಲು ಮುಂದಾಗುತ್ತಿಲ್ಲ. ವನ್ಯಜೀವಿ ಸಂಘರ್ಷ ತಪ್ಪಿಲ್ಲ, ಹಂದಿ ದಾಳಿಗೆ ಪರಿಹಾರ ಸಿಗುತ್ತಿಲ್ಲ. ಸರ್ಕಾರದಿಂದ ಬೆಳೆ ಹಾನಿಗೆ ಸರಿಯಾದ ರೀತಿ ಪರಿಹಾರ ಸಿಗುತ್ತಿಲ್ಲ. ಕಾರ್ಬನ್ ಕ್ರಿಡಿಟ್ ರೈತನಿಗೆ ಸಿಗಬೇಕು.
ಎಂಎಸ್‌ಪಿಗಿಂತ ಸಾವಯವ ಕೃಷಿ ಉತ್ಪನ್ನಗಳಿಗೆ ಹೆಚ್ಚುವರಿ ಶೇ. 30ರಷ್ಟು ಹೆಚ್ಚಿನ ದರ ನೀಡಿ ಖರೀದಿ ಮಾಡಬೇಕು. ಜಿಲ್ಲೆಯಲ್ಲಿ ನಡೆಯುವ ಕಪ್ಪು ಮತ್ತು ಬಿಳಿಕಲ್ಲು ದಂದೆ ಅಕ್ರಮವಾಗಿ ನಡೆಯುತ್ತಿದ್ದು, ಕೆಲವು ಗಣಿ ಉದ್ಯಮಿಗಳ ಅನುಕೂಲಕ್ಕಾಗಿ ಗೋಮಾಳಗಳನ್ನು ಸರ್ಕಾರ ನೀಡಿದೆ. ಮಿತಿ ಮೀರಿ ಕಲ್ಲು ಸಾಗಾಣೆ ಮಾಡುತ್ತಿರುವುದರಿಂದ ರಸ್ತೆಗಳೆಲ್ಲಾ ಹಾಳಾಗುತ್ತಿವೆ ಇದರ ಕ್ರಮಕೈಗೊಳ್ಳಬೇಕು,ಎನ್‌ಆರ್‌ಇಜಿಯನ್ನು ಕೃಷಿಗೆ ಅಳವಡಿಸಬೇಕು. ಇದರಿಂದ ರೈತರಿಗೆ ಕೂಲಿ ಹಣ ಸಿಗುತ್ತದೆ. ಹನೂರು ಮತ್ತು ಗುಂಡ್ಲುಪೇಟೆ ಭಾಗದಲ್ಲಿ ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಬಸ್ ವ್ಯವಸ್ಥೆ ಇಲ್ಲ. ಇದರಿಂದ ವಿದ್ಯಾರ್ಥಿಗಳು ಶಾಲೆಗೆ ನಿಗಧಿತ ವೇಳೆಗೆ ಶಾಲೆಗೆ ಹೋಗಲು ಆಗುತ್ತಿಲ್ಲ ಇದರ ಬಗ್ಗೆ ಗಮನಹರಿಸಬೇಕು, ಚಂಗಡಿ ಗ್ರಾಮ ಸ್ಥಳಾಂತರ ಮಾಡಲು ಅನುದಾನ ಬಿಡುಗಡೆಯಾಗಿಲ್ಲ, ಮಳೆಯಾಶ್ರಿತ ಕೃಷಿ ಪ್ರದೇಶಕ್ಕೆ ವಿಶೇಷ ಮಹತ್ವವನ್ನು ಕೊಟ್ಟು ಘೋಷಿತ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಕೊಟ್ಟು ಫಸಲು ಸಂಗ್ರಹಣೆ ಮಾಡುವ ಕೆಲಸದ ನಿರ್ವಹಣೆ. ಬರದಿಂದ ಬಾಧಿತರಾಗಿರುವ ರೈತರಿಗೆ ತುರ್ತಾಗಿ ಎಕರೆಗೆ 25000ರು. ಅನುದಾನ ಬಿಡುಗಡೆ ಗೊಳಿಸಬೇಕು. ಮಲೆಮಹದೇಶ್ವರ ಬೆಟ್ಟದ ವ್ಯಾಪ್ತಿಯ ಹಾಡಿ, ಗ್ರಾಮಗಳಲ್ಲಿ ವಾಸವಿರುವ ಬುಡಕಟ್ಟು, ಬೇಡಗಂಪಣ ಮತ್ತು ಇತರ ಜನಾಂಗದ ಎಲ್ಲಾ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಖಾತರಿಪಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಈ ಪಾದಯಾತ್ರೆ ನಡೆಯುತ್ತಿದೆ ಎಂದರು ಪತ್ರಿಕಾಗೋಷ್ಠಿಯಲ್ಲಿ ಸಂಘದ ಶರವಣ, ಪಾಪು ಕಲ್ಪುರ, ಮಲ್ಲೇಶ್, ಶಿವಸ್ವಾಮಿ ಇದ್ದರು.