ನೇಹಾ ಹಿರೇಮಠ್ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ

| Published : Apr 25 2024, 01:01 AM IST

ಸಾರಾಂಶ

ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಖಂಡಿಸಿ ನಗರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಸಂಘಟನೆಗಳ ವತಿಯಿಂದ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಖಂಡಿಸಿ ನಗರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಸಂಘಟನೆಗಳ ವತಿಯಿಂದ ಬೃಹತ್‌ ಪ್ರತಿಭಟನೆ ನಡೆಸಲಾಯಿತು.ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಸಾವಿರಾರು ಪ್ರತಿಭಟನಾಕಾರರು ಅಲ್ಲಿಂದ ಭುವನೇಶ್ವರಿ ವೃತ್ತದ ಮೂಲಕ ಜಿಲ್ಲಾಡಳಿತ ಭವನದ ಪ್ರವೇಶದ್ವಾರದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು,ಮೆರವಣಿಗೆಯುದ್ದಕ್ಕೂರಾಜ್ಯ ಸರ್ಕಾರದ ವಿರುದ್ಧ, ಮುಖ್ಯಮಂತ್ರಿ ಮತ್ತು ಗೃಹಸಚಿವರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಚುನಾವಣಾ ನೀತಿ ಸಂಹಿತೆ ಪ್ರಯುಕ್ತ ಮೆರವಣಿಗೆಯನ್ನು ಭುವನೇಶ್ವರಿ ವೃತ್ತದವರೆಗೆ ಮಾತ್ರ ನಡೆಸಬೇಕು, ನಿಮ್ಮ ಮನವಿಯನ್ನು ಸಂಬಂಧಪಟ್ಟವರು ಇಲ್ಲೇ ಮನವಿ ಸ್ವೀಕರಿಸುತ್ತಾರೆ ಎಂದು ಪೊಲೀಸರು ಹೇಳಿದರೂ ಬಿಡದೇ ನಾವು ಜಿಲ್ಲಾಡಳಿತ ಭವನದ ಪ್ರವೇಶದ್ವಾರದವರೆಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಬೇಕು ಎಂದು ಹಠ ಹಿಡಿದರು. ರಸ್ತೆಯ ಅಡ್ಡ ಪೊಲೀಸ್ ವ್ಯಾನ್‌ ತಂದು ನಿಲ್ಲಿಸಿದರೂ ಬಿಡದೆ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಜಿಲ್ಲಾಡಳಿತ ಭವನದ ಪ್ರವೇಶದ್ವಾರದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಮರಿಯಾಲ ಮಠದ ಇಮ್ಮಡಿ ಮುರುಘಾರಾಜೇಂದ್ರಸ್ವಾಮೀಜಿ, ಹರವೆ ವಿರಕ್ತ ಮಠದ ಸರ್ಪಭೂಷಣಸ್ವಾಮೀಜಿ, ನಗರದ ವಿರಕ್ತ ಮಠದಚನ್ನಬಸವಸ್ವಾಮೀಜಿ ಇದೊಂದು ಅತ್ಯಂತ ಅಮಾನುಷ ಘಟನೆಯಾಗಿದೆ ಎಂದರು.ಮುಖ್ಯಮಂತ್ರಿಗಳು, ಗೃಹ ಸಚಿವರು ಹಾಗೂ ಕೆಲ ಸಚಿವರುಘಟನೆಯ ಕುರಿತು ಲಘುವಾಗಿ ಪ್ರತಿಕ್ರಿಯಿಸಿರುವುದು ಸರಿಯಲ್ಲ, ಇದು ಬೇಜವಾಬ್ದಾರಿಯನ್ನು ತೋರಿಸುತ್ತದೆ ಎಂದರು. ನೇಹಾ ಹಿರೇಮಠ್‌ರನ್ನು ಹಾಡುಹಗಲೇ ಕಾಲೇಜ್‌ ಕ್ಯಾಂಪಸ್‌ನಲ್ಲಿ ಬರ್ಬವಾಗಿ ಕೊಲೆ ಮಾಡಿರುವುದು ನಾಗರೀಕ ಸಮಾಜ ತಲೆತಗ್ಗಿಸುವಂತಹ ಕೃತ್ಯವಾಗಿದೆ, ಆರೋಪಿಗೆ ಕಠಿಣ ಶಿಕ್ಷಯಾಗಬೇಕು, ಇಂತಹ ಹೇಯ ಕೃತ್ಯ ಎಸಗಿರುವ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು ಎಂದರು.ಮುಂದಿನ ದಿನಗಳಲ್ಲಿ ರಾಜ್ಯದಲ್ಲಿರುವ ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆಗಾಗಿ ಕಾನೂನು ತರಬೇಕು, ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಅಖಿಲ ಭಾರತ ವೀರಶೈವ, ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಭೋಗಾಪುರ, ಜಿಲ್ಲಾ ಉಪಾಧ್ಯಕ್ಷ ರತ್ನಮ್ಮ, ಜಿ.ಎಂ.ಪ್ರಭುಸ್ವಾಮಿ, ಪುಟ್ಟಣ್ಣ ಮತ್ತು ಪದಾಧಿಕಾರಿಗಳು ತಾಲೂಕು ಘಟಕದ ಅಧ್ಯಕ್ಷ ನಟೇಶ್, ಕುಮಾರಸ್ವಾಮಿ, ಆರ್. ವಿ.ಮಹದೇವಸ್ವಾಮಿ, ಪುಟ್ಟಮಲ್ಲಪ್ಪ, ಮಲ್ಲಪ್ಪ, ಲೋಕೇಶ್, ಪುರುಷೋತ್ತಮ್, ಶಿವಮಲ್ಲಪ್ಪ, ಬಸವರಾಜು, ಮಲ್ಲೇಶಪ್ಪ, ವೀರಭದ್ರಸ್ವಾಮಿ, ವಿಶ್ವನಾಥ್, ಗುರುಪ್ರಸಾದ್ ಹಾಗೂ ಸಾವಿರಾರು ಜನರು ಭಾಗವಹಿಸಿದ್ದರು.