ಸಾರಾಂಶ
ಮಡಿಕೇರಿ: ಜಿಲ್ಲಾ ವ್ಯಾಪ್ತಿಯ ಸಿ ಮತ್ತು ಡಿ ವರ್ಗದ ಭೂಮಿಯಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ಬದುಕು ಕಟ್ಟಿಕೊಂಡಿರುವ ಬಡ ಕೃಷಿಕರ ಕೃಷಿ ಭೂಮಿಯನ್ನು ಮೀಸಲು ಅರಣ್ಯವೆಂದು ಘೋಷಿಸದಂತೆ ಆಗ್ರಹಿಸಿ ‘ನಮ್ಮ ಭೂಮಿ ನಮ್ಮ ಹಕ್ಕು’ ಘೋಷಣೆಯಡಿ ಸೋಮವಾರಪೇಟೆಯ ರೈತ ಹೋರಾಟ ಸಮಿತಿಯಿಂದ ಡಿ.20 ರಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಸುರೇಶ್ ಚಕ್ರವರ್ತಿ ತಿಳಿಸಿದ್ದಾರೆ.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ ಮತ್ತು ಡಿ ಜಮೀನುಗಳನ್ನು ಈ ಹಿಂದೆಯೇ ಕ್ರಮಬದ್ಧವಲ್ಲದ ರೀತಿಯಲ್ಲಿ ಅರಣ್ಯ ಇಲಾಖೆಗೆ ವರ್ಗಾಯಿಸಲಾಗಿದೆ. ಇದೀಗ ಈ ಜಾಗವನ್ನು ಮೀಸಲು ಅರಣ್ಯವೆಂದು ಘೋಷಣೆ ಮಾಡುವ ಆದೇಶ ಹೊರಡಿಸುವ ಪ್ರಯತ್ನ ನಡೆದಿದೆ. ಇದನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು. ಈ ಸಮಸ್ಯೆ ಕೇವಲ ಸೋಮವಾರಪೇಟೆ ತಾಲೂಕಿಗೆ ಮಾತ್ರ ಸೀಮಿತವಾಗಿಲ್ಲ. ಜಿಲ್ಲೆಯ ಎಲ್ಲ ಭಾಗಗಳಲ್ಲೂ ಈ ಸಂಕಷ್ಟವನ್ನು ಕೃಷಿಕರು ಎದುರಿಸುತ್ತಿದ್ದಾರೆ. ಸಿ ಮತ್ತು ಡಿ ಭೂಮಿಯನ್ನು ಮೀಸಲು ಅರಣ್ಯವೆಂದು ಘೋಷಿಸಿದಲ್ಲಿ ಕೊಡಗಿನ ಸುಮಾರು 20 ರಿಂದ 25 ಸಾವಿರ ಎಕರೆ ಕೃಷಿ ಭೂಮಿ ಕೃಷಿಕರ ಕೈ ತಪ್ಪಿ ಹೋಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.ಸಮಸ್ಯೆಯ ಗಂಭೀರತೆಯನ್ನು ಅರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆಗ್ರಹಿಸಿ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಲಾಗುವುದು. ಪಕ್ಷಾತೀತವಾಗಿ ಜಿಲ್ಲಾ ವಿವಿಧ ಸಂಘಟನೆಗಳು ಪಾಲ್ಗೊಳ್ಳಲಿದ್ದು, ಈ ವ್ಯಾಪ್ತಿಯ ಸುಮಾರು 5 ಸಾವಿರಕ್ಕೂ ಹೆಚ್ಚಿನ ಜನರು ಪಾಲ್ಗೊಳ್ಳಲಿದ್ದಾರೆ. ಅಂದು ಬೆಳಗ್ಗೆ ನಗರದ ಸುದರ್ಶನ ವೃತ್ತದಿಂದ ಗಾಂಧಿ ಮೈದಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಬಳಿಕ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದರು.
ಸಮಿತಿಯ ಸಂಚಾಲಕ ಕೆ.ಎಂ. ಲೋಕೇಶ್ ಮಾತನಾಡಿ, ಸಿ ಮತ್ತು ಡಿ ಜಮೀನಿಗೆ ಸಂಬಂಧಿಸಿದಂತೆ ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗೆಹರಿಕೆಗೆ ರೈತ ಹೋರಾಟ ಸಮಿತಿಯಿಂದ ಈಗಾಗಲೆ ಪ್ರತಿಭಟನೆಗಳು ನಡೆದಿವೆಯಾದರೂ ಸಮಸ್ಯೆ ಬಗೆಹರಿದಿಲ್ಲ. ಪ್ರಸ್ತುತ ಜಿಲ್ಲಾ ವ್ಯಾಪ್ತಿಯಲ್ಲಿ ಸಿ ಮತ್ತು ಡಿ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಬದುಕು ನಡೆಸುತ್ತಿರುವ 15 ಸಾವಿರಕ್ಕೂ ಹೆಚ್ಚಿನ ಕೃಷಿಕರಿದ್ದಾರೆ. ಕೃಷಿ ಮಾಡುತ್ತಿರುವ ಜಮೀನನ್ನು ಕನಿಷ್ಠ ಗುತ್ತಿಗೆ ಆಧಾರದಲ್ಲಾದರೂ ನೀಡಲು ಕ್ರಮ ವಹಿಸುವ ಅಗತ್ಯವಿದೆ ಎಂದರು.ಸುದ್ದಗೋಷ್ಠಿಯಲ್ಲಿ ಸಮಿತಿಯ ಸಂಚಾಲಕರಾದ ಎಸ್.ಬಿ. ಭರತ್ ಕುಮಾರ್, ಆದಿತ್ಯ ಹಾಗೂ ಕಾನೂನು ಸಲಹೆಗಾರ ದೀಪಕ್ ಬಿ.ಜೆ. ಹಾಜರಿದ್ದರು.