ಸಾರಾಂಶ
‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ಯಶಸ್ಸಿನ ಹಿನ್ನೆಲೆಯಲ್ಲಿ ತುಮಕೂರು, ಬೆಳಗಾವಿ ಸೇರಿ ರಾಜ್ಯದ ವಿವಿಧೆಡೆ ಭಾನುವಾರ ತಿರಂಗಾಯಾತ್ರೆ ನಡೆಯಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ಯಶಸ್ಸಿನ ಹಿನ್ನೆಲೆಯಲ್ಲಿ ತುಮಕೂರು, ಬೆಳಗಾವಿ ಸೇರಿ ರಾಜ್ಯದ ವಿವಿಧೆಡೆ ಭಾನುವಾರ ತಿರಂಗಾಯಾತ್ರೆ ನಡೆಯಿತು.ತುಮಕೂರಿನಲ್ಲಿ ಎಸ್‌ಐಟಿ ಕಾಲೇಜು ಮುಂಭಾಗದಿಂದ ಹೊರಟ ತಿರಂಗಾ ಯಾತ್ರೆ, ಭೈರವೈಶ್ವರ ಬ್ಯಾಂಕ್ ಮುಂಭಾಗದಲ್ಲಿ ಅಂತ್ಯಗೊಂಡಿತು. ಮಠಾಧೀಶರಾದ ವೀರೇಶಾನಂದ ಸರಸ್ವತಿ ಸ್ವಾಮೀಜಿ, ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ವಿ. ಸೋಮಣ್ಣ, ರಾಜ್ಯಸಭಾ ಸದಸ್ಯ ಜಗ್ಗೇಶ್, ಶಾಸಕರಾದ ಜ್ಯೋತಿಗಣೇಶ್, ಬಿ. ಸುರೇಶ್‌ಗೌಡ ಮತ್ತಿತರರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಬೆಳಗಾವಿಯಲ್ಲಿ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ನಗರದ ಹೊಸೂರು ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಯಾತ್ರೆ ನಡೆಯಿತು. ಮೆರವಣಿಗೆಯಲ್ಲಿ ತ್ರಿವರ್ಣ ಧ್ವಜ, ಭಾರತಾಂಬೆ ಫೋಟೊ, ಸೈನಿಕರ ಭಾವಚಿತ್ರ, ಪ್ರಧಾನಿ ಮೋದಿಯವರ ಫೋಟೊಗಳು ರಾರಾಜಿಸಿದವು. ಸ್ಕೇಟಿಂಗ್ ಪಟುಗಳು ಪಾಲ್ಗೊಂಡು, ಯಾತ್ರೆಗೆ ಮೆರಗು ತಂದರು.ಬೀದರ್ ಜಿಲ್ಲೆ ಹುಮನಾಬಾದ್‌ನಲ್ಲಿ ಶಾಸಕ ಡಾ.ಸಿದ್ದು ಪಾಟೀಲ್ ನೇತೃತ್ವದಲ್ಲಿ ತಿರಂಗಾ ಯಾತ್ರೆ ನಡೆಯಿತು. ಬಸವೇಶ್ವರ ವೃತ್ತದಿಂದ ಪ್ರವಾಸಿ ಮಂದಿರದವರೆಗೆ ನಡೆದ ಯಾತ್ರೆಯಲ್ಲಿ ಭಾರತ್ ಮಾತಾ ಕಿ ಜೈ ಘೋಷಣೆಗಳನ್ನು ಕೂಗಿ, ಭಾರತೀಯ ಸೇನೆಗೆ ಅಭಿನಂದನೆ ಸಲ್ಲಿಸಲಾಯಿತು.