ಬೈಲೂರಿನ ಉಮಿಕ್ಕಳ ಬೆಟ್ಟದಲ್ಲಿರುವ ಪರಶುರಾಮ ಥೀಂ ಪಾರ್ಕ್ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸುವಂತೆ ಆಗ್ರಹಿಸಿ ಭಾನುವಾರ ಬೆಂಗಳೂರಿನಿಂದ ಬೈಲೂರಿಗೆ ಬೃಹತ್ ವಾಹನ ರ್ಯಾಲಿ ಹಾಗೂ ಜನಾಗ್ರಹ ಸಭೆ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರು ; ಬೈಲೂರಿನ ಉಮಿಕ್ಕಳ ಬೆಟ್ಟದಲ್ಲಿರುವ ಪರಶುರಾಮ ಥೀಂ ಪಾರ್ಕ್ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸುವಂತೆ ಆಗ್ರಹಿಸಿ ಭಾನುವಾರ ಬೆಂಗಳೂರಿನಿಂದ ಬೈಲೂರಿಗೆ ಬೃಹತ್ ವಾಹನ ರ್ಯಾಲಿ ಹಾಗೂ ಜನಾಗ್ರಹ ಸಭೆ ಹಮ್ಮಿಕೊಳ್ಳಲಾಗಿದೆ. ಪರಶುರಾಮ ಥೀಂ ಪಾರ್ಕ್ ಹೋರಾಟ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಈ ಹೋರಾಟಕ್ಕೆ ಮುಂದಾಗಿರುವುದಾಗಿ ಕಾರ್ಕಳ ಪರಶುರಾಮ ಥೀಂ ಪಾರ್ಕ್ ಜನಾಗ್ರಹ ಸಮಿತಿಯ ಸಂಚಾಲಕ ಸಚ್ಚಿದಾನಂದ ತಿಳಿಸಿದ್ದಾರೆ.ಭಾನುವಾರ ಬೆಳಗ್ಗೆ ಬೆಂಗಳೂರಿನಿಂದ ವಾಹನ ರ್ಯಾಲಿ ಆರಂಭವಾಗಲಿದ್ದು, ಮಧ್ಯಾಹ್ನ 3 ಗಂಟೆಗೆ ಬೈಲೂರಿನಲ್ಲಿ ಜನಾಗ್ರಹ ಸಭೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕಾರ್ಕಳವನ್ನು ಪ್ರವಾಸೋದ್ಯಮದ ಭೂಪಟದಲ್ಲಿ ಗುರುತಿಸುವ ಉದ್ದೇಶದಿಂದ ಶಾಸಕ ವಿ. ಸುನಿಲ್ ಕುಮಾರ್ ರೂಪಿಸಿದ್ದ ಮಹತ್ವಾಕಾಂಕ್ಷಿ ಯೋಜನೆ ಕಳೆದ ನಾಲ್ಕು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ತನಿಖೆಯ ಹೆಸರಿನಲ್ಲಿ ಸರ್ಕಾರ ಕಾಲಹರಣ ಮಾಡುತ್ತಿದ್ದು, ಯೋಜನೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಸ್ಥಳೀಯ ಕಾಂಗ್ರೆಸ್ ನಾಯಕರ ರಾಜಕೀಯ ಸ್ವಾರ್ಥ ಮತ್ತು ದ್ವೇಷದ ಕಾರಣದಿಂದ ಕಾರ್ಕಳದ ಪ್ರವಾಸೋದ್ಯಮ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಈ ಯೋಜನೆಯಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಹಾಗೂ ಆರ್ಥಿಕ ಪ್ರಗತಿಗೆ ಅವಕಾಶವಿತ್ತು. ಆದರೆ ಅಭಿವೃದ್ಧಿ ಯೋಜನೆಯನ್ನು ವಿವಾದದ ಕೇಂದ್ರವನ್ನಾಗಿ ಮಾಡಿ ಮೂಲೆಗುಂಪು ಮಾಡಲಾಗಿದೆ ಎಂದು ಟೀಕಿಸಿದ್ದಾರೆ.ಈ ಹಿಂದೆ ಹಲವು ಪ್ರತಿಭಟನೆಗಳ ಮೂಲಕ ಸರ್ಕಾರದ ಗಮನ ಸೆಳೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮುಂದಿನ ಮಹಾಮಸ್ತಕಾಭಿಷೇಕಕ್ಕೂ ಮುನ್ನ ಥೀಂ ಪಾರ್ಕ್ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಬೇಕು ಎಂಬುದು ಸಮಿತಿಯ ಪ್ರಮುಖ ಆಗ್ರಹವಾಗಿದೆ.ಯೋಜನೆ ವಿವಾದಕ್ಕೆ ಕಾರಣವೇನು, ನಾಲ್ಕು ವರ್ಷಗಳಿಂದ ತನಿಖೆ ಪೂರ್ಣಗೊಳಿಸದೆ ವಿಳಂಬ ಮಾಡುತ್ತಿರುವುದೇಕೆ ಹಾಗೂ ಕಾರ್ಕಳದ ಪ್ರವಾಸೋದ್ಯಮಕ್ಕೆ ಆಗಿರುವ ನಷ್ಟಕ್ಕೆ ಹೊಣೆ ಯಾರು ಎಂಬುದಕ್ಕೆ ಸರ್ಕಾರ ಮತ್ತು ಸ್ಥಳೀಯ ಕಾಂಗ್ರೆಸ್ ನಾಯಕರು ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.22ರ ಜನಾಗ್ರಹ ಸಭೆಯ ಮೂಲಕ ಸರ್ಕಾರದ ಮೇಲೆ ಜನಶಕ್ತಿಯ ಒತ್ತಡ ತರಲಾಗುವುದು. ಸಾರ್ವಜನಿಕರ ಪ್ರವೇಶಕ್ಕೆ ಪಾರ್ಕ್ ಅನ್ನು ತಕ್ಷಣ ಮುಕ್ತಗೊಳಿಸದಿದ್ದರೆ ಹೋರಾಟ ರಾಜ್ಯಾದ್ಯಂತ ತೀವ್ರಗೊಳಿಸಲಾಗುವುದು ಎಂದು ಸಚ್ಚಿದಾನಂದ ಮನವಿ ಮಾಡಿದ್ದಾರೆ.
