ಸಾರಾಂಶ
ಶಾಲಾ ಶಿಕ್ಷಣ ಇಲಾಖೆಯು ಶಿಕ್ಷಕರ ದಿನಾಚರಣೆ ಅಂಗವಾಗಿ 2025ನೇ ಸಾಲಿನ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಹುಕ್ಕೇರಿ ತಾಲೂಕಿನ ಪ್ರಾಥಮಿಕ ವಿಭಾಗದಲ್ಲಿ ಇಬ್ಬರು, ಪ್ರೌಢ ವಿಭಾಗದಲ್ಲಿ ಓರ್ವ ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಶಾಲಾ ಶಿಕ್ಷಣ ಇಲಾಖೆಯು ಶಿಕ್ಷಕರ ದಿನಾಚರಣೆ ಅಂಗವಾಗಿ 2025ನೇ ಸಾಲಿನ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಹುಕ್ಕೇರಿ ತಾಲೂಕಿನ ಪ್ರಾಥಮಿಕ ವಿಭಾಗದಲ್ಲಿ ಇಬ್ಬರು, ಪ್ರೌಢ ವಿಭಾಗದಲ್ಲಿ ಓರ್ವ ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಾಥಮಿಕ ವಿಭಾಗದಲ್ಲಿ ಮದಮಕ್ಕನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಶಿವಾನಂದ ಪಾಟೀಲ, ಸಿದ್ಧಾಪೂರ-ಚಿಕ್ಕಲದಿನ್ನಿ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯ ಪರಸಪ್ಪ ಬಿರನೋಳಿ ಹಾಗೂ ಪ್ರೌಢ ವಿಭಾಗದಲ್ಲಿ ಪರಕನಹಟ್ಟಿ ಬಸವಜ್ಯೋತಿ ಪ್ರೌಢಶಾಲೆಯ ಸಂಜೀವ ಕಟ್ಟೆಣ್ಣವರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಯನ್ನು ಸೆ.5 ರಂದು ಚಿಕ್ಕೋಡಿ ಪರಟೆ ನಾಗಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.ಇಂಗ್ಲಿಷ್ ಶಿಕ್ಷಕನಿಗೆ ಒಲಿದ ಪ್ರಶಸ್ತಿ:
ತಾಲೂಕಿನ ಮದಮಕ್ಕನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶಿವಾನಂದ ಪಾಟೀಲರು ಈ ಹಿಂದೆ 6 ವರ್ಷ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿಭಾಯಿಸಿದ್ದಾರೆ. ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ, ಚುನಾವಣಾ ತರಬೇತಿ ನೀಡುವಲ್ಲಿ ನೈಪುಣ್ಯತೆ ಹೊಂದಿದ್ದಾರೆ. ಎಂ.ಎ, ಬಿ.ಇಡಿ ಪದವೀಧರರಾಗಿದ್ದು 2010 ರಿಂದ ಶಿಕ್ಷಕರಾಗಿ ಸೇವೆಯಲ್ಲಿದ್ದಾರೆ.ಅರಣ್ಯ ಪ್ರದೇಶದಲ್ಲಿ ಅಕ್ಷರ ಕ್ರಾಂತಿಗೈದ ಶಿಕ್ಷಕ :ಸಿದ್ದಾಪೂರ-ಚಿಕ್ಕಲದಿನ್ನಿ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯ ಪರಸಪ್ಪ ಬಿರನೋಳಿ ಪ್ರಭಾರಿ ಮುಖ್ಯ ಶಿಕ್ಷಕರಾಗಿದ್ದಾರೆ. ಸುತ್ತ-ಮುತ್ತ ಅರಣ್ಯ, ಗುಡ್ಡುಗಾಡು ಪ್ರದೇಶದಿಂದ ಆವೃತ್ತವಾದ ಈ ತೋಟದ ಶಾಲೆಯಲ್ಲಿ 2010ರಲ್ಲಿ ಕೇವಲ 16 ಮಕ್ಕಳಿದ್ದ ಶಾಲೆಯಲ್ಲಿ ಇದೀಗ 125 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಇಲ್ಲಿ ಕಲಿತ ಬಹುತೇಕ ಮಕ್ಕಳು ಮೊರಾರ್ಜಿ ದೇಸಾಯಿ, ನವೋದಯ ಶಾಲೆಗೆ ಸೇರ್ಪಡೆಯಾಗಿದ್ದಾರೆ. ಶಾಲೆಯಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಪೋಷಿಸುವುದರ ಜತೆಗೆ ಭೌತಿಕ ಬೆಳವಣಿಗೆಗೂ ಕಾಳಜಿ ವಹಿಸಿದ್ದಾರೆ. ಬಹುಮುಖ ಪ್ರತಿಭೆ ಸಂಜೀವ:
ಪರಕನಹಟ್ಟಿ ಬಸವಜ್ಯೋತಿ ಪ್ರೌಢಶಾಲೆಯ ಸಂಜೀವ ಕಟ್ಟೆಣ್ಣವರ 2012 ರಿಂದ ಸಮಾಜ ವಿಜ್ಞಾನ ಸಹಶಿಕ್ಷಕರಾಗಿದ್ದಾರೆ. ಎಂ.ಎ, ಬಿ.ಇಡಿ ಪದವೀಧರರಾಗಿದ್ದಾರೆ. ಶಾಲೆಯಲ್ಲಿ ಕಳೆದ ವರ್ಷ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಘಟಕ ಆರಂಭಿಸುವಲ್ಲಿ ಪ್ರಮುಖ ಪಾತ್ರವಿದ್ದು, ಜಲಜಾಗೃತಿ, ಮೂಢನಂಬಿಕೆ ಮತ್ತಿತರ ಸಾಮಾಜಿಕ ಕಾರ್ಯದಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ.