ಇಲ್ಲಿನ ಪ್ರಸಿದ್ಧ ಹುಕ್ಕೇರಿಮಠದ ಜಾತ್ರಾ ಮಹೋತ್ಸವ, ಶ್ರೀಮಠದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸುವರ್ಣ ಮಹೋತ್ಸವ, ಪ್ರಸಾದ ನಿಲಯದ ಅಮೃತ ಮಹೋತ್ಸವ, ಪ್ರಸಾದ ನಿಲಯದ ಹಳೆ ವಿದ್ಯಾರ್ಥಿಗಳ ಸಂಘದ ಸುವರ್ಣ ಮಹೋತ್ಸವ, ಶಿವಬಸವ ಜಾನುವಾರು ಜಾತ್ರೆಯ ಸುವರ್ಣ ಮಹೋತ್ಸವ, ಸದಾಶಿವ ಶ್ರೀಗಳ 15ನೇ ವರ್ಷದ ಪಟ್ಟಾಧಿಕಾರದ ಸವಿನೆನಪಿಗಾಗಿ ರಜತ ತುಲಾಭಾರದ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಆರಂಭಗೊಂಡಿವೆ ಎಂದು ಶೇಗುಣಿಸಿಯ ಡಾ. ಮಹಾಂತಪ್ರಭು ಸ್ವಾಮೀಜಿ ಹೇಳಿದರು.
ಹಾವೇರಿ: ಇಲ್ಲಿನ ಪ್ರಸಿದ್ಧ ಹುಕ್ಕೇರಿಮಠದ ಜಾತ್ರಾ ಮಹೋತ್ಸವ, ಶ್ರೀಮಠದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸುವರ್ಣ ಮಹೋತ್ಸವ, ಪ್ರಸಾದ ನಿಲಯದ ಅಮೃತ ಮಹೋತ್ಸವ, ಪ್ರಸಾದ ನಿಲಯದ ಹಳೆ ವಿದ್ಯಾರ್ಥಿಗಳ ಸಂಘದ ಸುವರ್ಣ ಮಹೋತ್ಸವ, ಶಿವಬಸವ ಜಾನುವಾರು ಜಾತ್ರೆಯ ಸುವರ್ಣ ಮಹೋತ್ಸವ, ಸದಾಶಿವ ಶ್ರೀಗಳ 15ನೇ ವರ್ಷದ ಪಟ್ಟಾಧಿಕಾರದ ಸವಿನೆನಪಿಗಾಗಿ ರಜತ ತುಲಾಭಾರದ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಆರಂಭಗೊಂಡಿವೆ ಎಂದು ಶೇಗುಣಿಸಿಯ ಡಾ. ಮಹಾಂತಪ್ರಭು ಸ್ವಾಮೀಜಿ ಹೇಳಿದರು.ಇಲ್ಲಿನ ಹುಕ್ಕೇಮಠದ ಆವರಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸದಾಶಿವ ಸ್ವಾಮೀಜಿ ಅವರು ಶ್ರೀಮಠದ ಪೀಠ ಅಲಂಕರಿಸಿ 15ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ ಶ್ರೀಗಳ ಬೆಳ್ಳಿಯ ತುಲಾಭಾರ ನಡೆಸಲು ಭಕ್ತರು ನಿರ್ಧರಿಸಿದ್ದಾರೆ. ಆ ಬೆಳ್ಳಿಯನ್ನು ಬಡ ಮಕ್ಕಳ ಕಲ್ಯಾಣಕ್ಕಾಗಿ ಉಪಯೋಗಿಸಲು ಶ್ರೀಗಳು ನಿರ್ಧರಿಸಿದ್ದಾರೆ ಎಂದರು.ಪ್ರಸ್ತುತ ಯುವಕರು ದುಶ್ಚಟಗಳಿಗೆ ದಾಸರಾಗಿ ದಾರಿ ತಪ್ಪುತ್ತಿದ್ದು, ಅವರಿಗೆ ಸನ್ಮಾರ್ಗ ತೋರುವ ನಿಟ್ಟಿನಲ್ಲಿ ಸದಾಶಿವ ಶ್ರೀಗಳ ನೇತೃತ್ವದಲ್ಲಿ ಯುವ ಸ್ವಾಮೀಜಿಯವರು ಈಗಾಗಲೇ ಸುಮಾರು 75 ಹಳ್ಳಿಗಳಲ್ಲಿ ಪಾದಯಾತ್ರೆ ಮಾಡಿದ್ದು, ಸದೃಢ ಸಮಾಜ ನಿರ್ಮಾಣಕ್ಕಾಗಿ ದುಶ್ಚಟಗಳನ್ನು ಜೋಳಿಗೆಯಲ್ಲಿ ಹಾಕಿರಿ ಎಂಬ ಸಂದೇಶ ಕೊಟ್ಟಿದ್ದಾರೆ ಎಂದರು.ಇದೇ ಸಂದರ್ಭದಲ್ಲಿ 5 ಲಕ್ಷ ಜನರಿಗೆ ರುದ್ರಾಕ್ಷಿ ದೀಕ್ಷಾ ಮಾಡುವ ಉದ್ದೇಶ ಹೊಂದಲಾಗಿದ್ದು, ಪಾದಯಾತ್ರೆ ಸಂದರ್ಭದಲ್ಲಿ ಈಗಾಗಲೇ 4 ಲಕ್ಷ ಜನರಿಗೆ ರುದ್ರಾಕ್ಷಿ ದೀಕ್ಷೆ ನೀಡಲಾಗಿದೆ. ಡಿ. 27ರಂದು ಮುನ್ಸಿಪಲ್ ಮೈದಾನದಲ್ಲಿ 50ಸಾವಿರ ಜನರನ್ನು ಸೇರಿಸಿ ವಚನ ಗುರುವಂದನ ಕಾರ್ಯಕ್ರಮ ನಡೆಸಲಾಗುವುದು, ಅಲ್ಲದೇ ರಕ್ತದಾನ, ನೇತ್ರದಾನ, ಆರೋಗ್ಯ ಮೇಳಗಳು ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳು ಆಯೋಜಿಸಲಾಗುವುದು ಎಂದರು.ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ಶ್ರೀಮಠದ ಕಾರ್ಯಕ್ರಮಗಳಿಗೆ ಸಿಎಂ, ಡಿಸಿಎಂ ಸೇರಿದಂತೆ ಹಲವು ಸಚಿವರಿಗೆ ಆಹ್ವಾನ ನೀಡಿದ್ದೇವೆ. ಡಿ.29ರಂದು ನಡೆಯಲಿರುವ ಶ್ರೀಗಳ ಬೆಳ್ಳಿ ತುಲಾಭಾರದ ನಿಮಿತ್ತ ಈಗಾಗಲೇ 101 ಕೆಜಿ ಬೆಳ್ಳಿಯನ್ನು ಸಂಗ್ರಹ ಮಾಡಲಾಗಿದೆ. ಲಿಂ. ಶಿವಲಿಂಗ ಸ್ವಾಮೀಜಿ ಅವರಿಗೆ 37 ಕೆಜಿ ಬಂಗಾರ ಸಂಗ್ರಹಿಸಿ ತುಲಾಭಾರ ಮಾಡಲಾಗಿತ್ತು. ಅದರಲ್ಲಿ ಶ್ರೀಮಠಕ್ಕೆ 49.11 ಎಕರೆ ಜಮೀನು ಖರೀದಿ ಮಾಡಲಾಗಿದ್ದು, 24 ಎಕರೆ ಕೋರ್ಟ್ ವ್ಯಾಜ್ಯದಲ್ಲಿದೆ. ಬೆಳ್ಳಿ ತುಲಾಭಾರದ ಬೆಳ್ಳಿಯ ಹಣವೂ ಯಾವುದೇ ಪೋಲಾಗದಂತೆ ನೋಡಿಕೊಳ್ಳಲಾಗುವುದು. ಎರಡು ಸಾವಿರ ಮಕ್ಕಳಿಗೆ ಉಚಿತ ಪ್ರಸಾದ ನಿಲಯ ಕಟ್ಟುವ ಸಂಕಲ್ಪ ಶ್ರೀಗಳದ್ದಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಮಣಕವಾಡದ ಅಭಿನವ ಮೃತುಂಜಯ್ಯ ಸ್ವಾಮೀಜಿ, ಹುಬ್ಬಳ್ಳಿಯ ಅಭಿನವ ಸಿದ್ಧಾರೂಢ ಸ್ವಾಮೀಜಿ, ಮೂಲೆಗದ್ದೆಯ ಅಭಿನವ ಚನ್ನಬಸವ ಸ್ವಾಮೀಜಿ, ಶಿರಾಳಕೊಪ್ಪದ ವೀರಬಸವ ದೇವರು, ವಿರೂಪಾಕ್ಷ ದೇವರು, ಘನಲಿಂಗ ದೇವರು, ಪ್ರಭುಲಿಂಗದ ದೇವರು, ರಾಜಶೇಖರ ಮಾಗನೂರು, ಮಹೇಶ ಚಿನ್ನಿಕಟ್ಟಿ, ವೀರಣ್ಣ ಅಂಗಡಿ, ಶಿವಯೋಗಿ ವಾಲಿಶೆಟ್ಟರ, ಸಂಪತ್ ಕುಮಾರ ಜೈನ್, ಶಿವರಾಜ ಮರ್ತೂರ, ಮಲ್ಲಿಕಾರ್ಜುನ ಹಂದ್ರಾಳ, ಜಿ.ಕೆ. ಹೂಗಾರ ಬಿ.ಬಸವರಾಜ ಇತರರು ಇದ್ದರು.ಶ್ರೀಮಠದ ಆವರಣದಲ್ಲಿ ಡಿ. 9ರಿಂದ ಶೇಗುಣಿಸಿಯ ಡಾ. ಮಹಾಂತಪ್ರಭು ಸ್ವಾಮೀಜಿ ಅವರಿಂದ ಆಧ್ಯಾತ್ಮಿಕ ಪ್ರವಚನ ಆರಂಭವಾಗಿದ್ದು, 25ರಂದು ಪ್ರವಚನ ಮಂಗಲಗೊಳ್ಳಲಿದೆ. ಡಿ. 30ರಂದು ಶ್ರೀಮಠದ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ. ಉತ್ತರ ಕರ್ನಾಟಕದ ಅತಿದೊಡ್ಡ ಜಾನುವಾರು ಜಾತ್ರೆ ಎಂಬ ಖ್ಯಾತಿಯೂ ನಮ್ಮ ಜಾತ್ರೆಗಿದ್ದು, ಅದಕ್ಕೀಗ ಸುವರ್ಣ ಮಹೋತ್ಸವದ ಸಂಭ್ರಮ. ಶ್ರೀಮಠದಲ್ಲಿ ಆರಂಭವಾಗಿರುವ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.