ಸೆಸ್ಕ್ ಅಧಿಕಾರಿಗಳ ವಿರುದ್ಧ ಹುಳಗನಹಳ್ಳಿ ಗ್ರಾಮಸ್ಥರ ಪ್ರತಿಭಟನೆ

| Published : Sep 11 2024, 01:12 AM IST

ಸಾರಾಂಶ

ಸೆಸ್ಕ್ ಅಧಿಕಾರಿಗಳು, ಗ್ರಾಮಸ್ಥರ ಪ್ರತಿಭಟನೆ, ಜೋತು ಬಿದ್ದ ವಿದ್ಯತ್ ತಂತಿ, ದುರಸ್ತಿಗೆ ಆಗ್ರಹ, ಮಂಡ್ಯಬರಗಾಲದಲ್ಲಿ ಹಾಗೂ ಕೂಲಿ ಆಳುಗಳ ಸಮಸ್ಯೆಗಳ ನಡೆವೆಯೂ ಕಬ್ಬಿನ ಬೆಳೆಯನ್ನು ಕಷ್ಟಪಟ್ಟು ಬೆಳೆಯಲಾಗಿತ್ತು. ಜಮೀನಿನಲ್ಲಿ ಹಾದು ಹೋಗಿದ್ದ ಜೋತು ಬಿದ್ದ ವಿದ್ಯುತ್ ತಂತಿಗಳನ್ನು ಸರಿಪಡಿಸುವಂತೆ ಹಲವಾರು ಬಾರಿ ಸೆಸ್ಕ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಕನ್ನಡಪ್ರಭ ವಾರ್ತೆ ಮದ್ದೂರು

ಜಮೀನುಗಳಲ್ಲಿ ಜೋತು ಬಿದ್ದ ವಿದ್ಯುತ್ ತಂತಿಗಳನ್ನು ಸೆಸ್ಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸರಿಪಡಿಸದ ಕಾರಣ ರೈತರು ಕಷ್ಟಪಟ್ಟು ಬೆಳೆದ ಲಕ್ಷಾಂತರ ಬೆಲೆ ಬಾಳುವ ಫಸಲು ಹಾಳಾಗುತ್ತಿದೆ ಎಂದು ಆರೋಪಿಸಿ ಹುಳಗನಹಳ್ಳಿ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ಮಾಡಿದರು.

ತಾಲೂಕಿನಾದ್ಯಂತ ಜಮೀನುಗಳಲ್ಲಿ ಜೋತು ಬಿದ್ದ ವಿದ್ಯತ್ ತಂತಿಗಳನ್ನು ಸರಿಪಡಿಸದ ಸೆಸ್ಕ್ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ಪ್ರಭಾಕರ್ ಮಾತನಾಡಿ, ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಹಲವು ರೈತರ ಸುಮಾರು 6 ಎಕರೆ ಪ್ರದೇಶದ ಕಟಾವಿಗೆ ಬಂದಿದ್ದ ಕಬ್ಬು ಹಾಗೂ 10 ತೆಂಗಿನ ಮರಗಳು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಂಪೂರ್ಣ ನಾಶವಾಗಿ ರೈತರಿಗೆ ಲಕ್ಷಾಂತರ ರು.ನಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.

ಬರಗಾಲದಲ್ಲಿ ಹಾಗೂ ಕೂಲಿ ಆಳುಗಳ ಸಮಸ್ಯೆಗಳ ನಡೆವೆಯೂ ಕಬ್ಬಿನ ಬೆಳೆಯನ್ನು ಕಷ್ಟಪಟ್ಟು ಬೆಳೆಯಲಾಗಿತ್ತು. ಜಮೀನಿನಲ್ಲಿ ಹಾದು ಹೋಗಿದ್ದ ಜೋತು ಬಿದ್ದ ವಿದ್ಯುತ್ ತಂತಿಗಳನ್ನು ಸರಿಪಡಿಸುವಂತೆ ಹಲವಾರು ಬಾರಿ ಸೆಸ್ಕ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬೆಳೆ ನಾಶದಕ್ಕೆ ಅಧಿಕಾರಿಗಳೇ ನೇರಹೊಣೆ ಎಂದು ಆರೋಪಿಸಿದರು.

ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡದೆ ಹೋದರೆ ಮುಂದಿನ ದಿನಗಳಲ್ಲಿ ರೈತರ ಜತೆಗೂಡಿ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ರವಿಕುಮಾರ್, ಪ್ರಕಾಶ್, ಕುಮಾರ್, ಶಿವರಾಜು, ಪ್ರಭಾಕರ್, ಕೃಷ್ಣೇಗೌಡ, ಲಿಂಗಯ್ಯ, ಸವಿತಾ, ಮೀನಾಕ್ಷಿ, ಸುಜಾತ ಸೇರಿಂತೆ ಇತರರು ಇದ್ದರು.

ಶಾರ್ಟ್ ಸರ್ಕ್ಯೂಟ್ ಲಕ್ಷಾಂತರ ಮೌಲ್ಯದ ಕಬ್ಬು ನಾಶಮದ್ದೂರು:ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ 6 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬಿನ ಫಸಲು, 10 ತೆಂಗಿನ ಮರಗಳು ಬೆಂಕಿಗಾಹುತಿಯಾಗಿ, ಲಕ್ಷಾಂತರ ರು. ನಷ್ಟ ಸಂಭವಿಸಿರುವ ಘಟನೆ ತಾಲೂಕಿನ ಹುಳಗನಹಳ್ಳಿಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.

ಗ್ರಾಮದ ಎಚ್.ಇ.ಪ್ರತಿಭಾ, ಶಿವರಾಜ್, ಕೆ.ಪಿ.ಗೀತಾ, ಪುಟ್ಟಮಾಸ್ತಿ ಎಂಬುವವರಿಗೆ ಸೇರಿದ ಕಬ್ಬಿನ ಫಸಲು ಹಾಗೂ ಚೆನ್ಮಮ್ಮ ಅವರಿಗೆ ಸೇರಿದ್ದ ಸುಮಾರು 9 ತೆಂಗಿನ ಮರಗಳು ಸುಟ್ಟು ಕರಕಲಾಗಿದೆ. ಇದರಿಂದ 15 ರಿಂದ 20 ಲಕ್ಷ ರು. ನಷ್ಟವಾಗಿದೆ.ಅಗ್ನಿ ಶಾಮಕ ದಳದವರು ಬಂದರು ಕೂಡ ಹೆಚ್ಚಿನ ಪ್ರಮಾಣದಲ್ಲಿ ಬೆಂಕಿ ಹರಡಿದ್ದ ಪರಿಣಾಮ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ ಎಂದು ಗ್ರಾಮಸ್ಥರು ಅಳಲು ತೊಂಡಿಕೊಂಡಿದ್ದಾರೆ.

ಈ ಸಂಬಂಧ ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.