ಸಾರಾಂಶ
ಕನ್ನಡಪ್ರಭ ವಾರ್ತೆ ಹುಲಸೂರ
ಹುಲಸೂರಿನಲ್ಲಿ ಹೆಸರಿಗೆ ಮಾತ್ರ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿ ಆರಂಭಿಸಲಾಗಿದ್ದು, ಗುತ್ತಿಗೆದಾರರು ಹಣ ಲೂಟಿ ಹೊಡೆಯುವ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕೆಂದು ಗುರು ಬಸವೇಶ್ವರ ಅಭಿವೃದ್ಧಿ ಟ್ರಸ್ಟ್ ಸದಸ್ಯರು ಹಾಗೂ ಸಾರ್ವಜನಿಕರು ಮನವಿ ಮಾಡಿದ್ದಾರೆ.ಈ ಕುರಿತು ಉಪ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿ, ಹುಲಸೂರ ತಾಲೂಕು ಕೇಂದ್ರದಲ್ಲಿ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿ ಆರಂಭಿಸಿದ್ದು ಈ ಯೋಜನೆಯ ಕುರಿತು ಯಾವುದೇ ಕ್ರಿಯಾಯೋಜನೆ ರೂಪಿಸಿಲ್ಲ, ಕಾಟಾಚಾರಕ್ಕೆ ಕಾಮಗಾರಿ ಪೂರ್ಣಗೊಳಿಸಿ ಗುತ್ತಿಗೆದಾರರು ಹಣ ಲೂಟಿ ಹೊಡೆಯುವ ಕಾಮಗಾರಿಯಾಗಿದ್ದು, ಸಮರ್ಪಕ ಕ್ರಿಯಾಯೋಜನೆ ರೂಪಿಸದೆ ಕಾಮಗಾರಿ ಆರಂಭಿಸಬಾರದು ಎಂದು ಆಗ್ರಹಿಸಿದ್ದಾರೆ.
ಜಲಶಕ್ತಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ ಇಲಾಖೆಯಿಂದ ಆಯೋಜಿಸಿದ್ದ ಜಲ ಜೀವನ ಮಿಷನ್ 2024 ರ ವೇಳೆಗೆ ಗ್ರಾಮೀಣ ಭಾರತದ ಎಲ್ಲಾ ಮನೆಗಳಿಗೆ ವೈಯಕ್ತಿಕ ಮನೆಯ ಟ್ಯಾಪ್ ಸಂಪರ್ಕಗಳ ಮೂಲಕ ಸುರಕ್ಷಿತ ಮತ್ತು ಸಮರ್ಪಕ ಕುಡಿಯುವ ನೀರು ಒದಗಿಸಲು ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜೆಜೆಎಂ ಯೋಜನೆ ಹಾಕಿಕೊಂಡಿದೆ.ಈ ಹಿಂದೆ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಜಿಲ್ಲಾಧಿಕಾರಿಗಳ ಜನತಾ ದರ್ಶನ ಕಾರ್ಯಕ್ರಮದ ವೇಳೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಕಾಮಗಾರಿ ತಡೆಯುವಂತೆ ಮನವಿ ಸಲ್ಲಿಸಲಾಗಿತ್ತು. ಅರ್ಜಿ ಸ್ವೀಕರಿಸಿದ ಬಳಿಕ ಅದರ ಹಿಂಬರಹವು ನೀಡದೆ ಅರ್ಜಿದಾರರ ಗಮನಕ್ಕೂ ತರದೆ ಯತಾವತ್ತಾಗಿ ಕಾಮಗಾರಿ ಆರಂಭಿಸಲಾಗಿದೆ.
ಈ ರೀತಿ ಅವೈಜ್ಞಾನಿಕ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿ ಮುಂದುವರಿಸಿದರೆ ಸಾರ್ವಜನಿಕರೊಂದಿಗೆ ಬಿದಿಗೆ ಇಳಿದು ಪ್ರತಿಭಟನೆ ನಡೆಸುವುದಾಗಿ ಶ್ರೀಗುರು ಬಸವೇಶ್ವರ ಅಭಿವೃದ್ಧಿ ಟ್ರಸ್ಟ್ ಕಾರ್ಯದರ್ಶಿ ಪ್ರವೀಣ್ ಕಾಡಾದಿ ಎಚ್ಚರಿಸಿದ್ದಾರೆ.ಈ ವೇಳೆ ಶ್ರೀ ಗುರು ಬಸವೇಶ್ವರ ಅಭಿವೃದ್ಧಿ ಟ್ರಸ್ಟ್ ರಿ.ಉಪಾಧ್ಯಕ್ಷ ಆಕಾಶ ಖಂಡಾಳೆ, ಸದಸ್ಯರಾದ ಶಿವರಾಜ ಖಫಲೆ, ಸುನೀಲ ಕಾಡಾದಿ, ಲೊಕೇಶ ಧಬಾಲೆ, ದಯಾನಂದ ನಿಮ್ಮಾಣೆ, ಗುಲಾಮ್ ಬಡಾಯಿ, ನಾಗರಾಜ ಕೋರೆ, ನಾಗರಾಜ ಪಾರಶೆಟ್ಟೆ, ಸಚೀನ ವಗ್ಗೆ, ಜಗದೀಶ ಟೊಂಪೆ, ಶಂಕರ ಗೌಡಗಾಂವೆ, ನಾಗೇಶ ನಿಲಂಗೆ, ಸುಜೀತ್ ಹಾರಕುಡೆ, ಸಂತೋಷ ಗಾಯಕವಾಡ, ಯುನೀಸ್ ಹೆಡೆ ಸೇರಿದಂತೆ ಇನ್ನಿತರರು ಇದ್ದರು.