ಕೊಪ್ಪಳ: ನಗರಕ್ಕೆ ಹೊಂದಿಕೊಂಡಿರುವ ಹುಲಿಕೆರೆ ಒತ್ತುವರಿ ಮಾಡಿ ದರ್ಗಾಗೆ ರಸ್ತೆ ನಿರ್ಮಾಣ ಮಾಡಿದ್ದಾರೆಂಬ ಆರೋಪದ ಮೇಲೆ ನಗರಸಭೆ ಸಿಬ್ಬಂದಿ ಹುಲಿಕೆರೆಯಲ್ಲಿ ನಿರ್ಮಾಣವಾದ ರಸ್ತೆ ತೆರವಿಗೆ ಬುಧವಾರ ಮುಂದಾಗಿದ್ದರು. ಮುಸ್ಲಿಂ ಸಮುದಾಯದವರು ರಸ್ತೆ ತೆರವುಗೊಳಿಸಲು ಅಡ್ಡಪಡಿಸಿ ಅಧಿಕಾರಿಗಳನ್ನು ವಾಪಸ್ ಕಳುಹಿಸಿದ್ದಾರೆ.
ರಸ್ತೆ ತೆರವು ಮಾಡುತ್ತಿದ್ದ ನಗರಸಭೆ ಸಿಬ್ಬಂದಿಗಳನ್ನು ಮುಸ್ಲಿಂ ಸಮುದಾಯದ ಯುವಕರು ವಾಪಸ್ ಕಳುಹಿಸಿದ್ದಾರೆ. ಕಳೆದ ಐದು ದಿನಗಳ ಹಿಂದೆ ಹುಲಿಕೆರೆ ಒತ್ತುವರಿ ಮಾಡಿ ದರ್ಗಾಗೆ ರಸ್ತೆ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದ್ದರು. ರಸ್ತೆ ತೆರವು ಮಾಡುವುದಾಗಿ ಜಿಲ್ಲಾಡಳಿತ ಭರವಸೆ ನೀಡಿತ್ತು. ಈ ಹಿನ್ನೆಲೆಯಲ್ಲಿ ದರ್ಗಾಗೆ ನಿರ್ಮಾಣ ಮಾಡಿದ್ದ ರಸ್ತೆ ತೆರವು ಮಾಡಲು ನಗರಸಭೆ ಅಧಿಕಾರಿಗಳು ಮುಂದಾಗಿದ್ದರು. ಐದು ದಿನಗಳಿಂದಲೇ ತೆರವು ಕಾರ್ಯಾಚರಣೆ ನಡೆದಿತ್ತಾದರೂ ಬುಧವಾರ ಮುಸ್ಲಿಂ ಯುವಕರು ವಿರೋಧ ವ್ಯಕ್ತಪಡಿಸಿದರು. ಸರ್ವೆ ಮಾಡಿ ಆ ಮೇಲೆ ತೆರವು ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲು ಕೆರೆ ಸರ್ವೆ ಮಾಡಿ, ಆ ಮೇಲೆ ರಸ್ತೆ ತೆರವು ಮಾಡಿ ಎಂದು ಹೇಳಿದ್ದಾರೆ. ಜೆಸಿಬಿ ಸಮೇತ ನಗರಸಭೆ ಅಧಿಕಾರಿಗಳು ವಾಪಸ್ ಹೋದರು.ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಇದಲ್ಲದೇ ಯುವಕರ ವಿರೋಧಕ್ಕೆ ಸಮುದಾಯದ ಮುಖಂಡರು ಬೆಂಬಲ ನೀಡಿದ್ದು, ತೆರವು ಮುನ್ನ ಸಮೀಕ್ಷೆಯಾಗಬೇಕು ಎಂದು ಹೇಳಿದ್ದಾರೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಆಗಮಿಸಿದರು. ಸರ್ವೇ ಇಲಾಖೆಯಿಂದ ಸಮೀಕ್ಷೆ ವರದಿಯ ಆನಂತರ ಒತ್ತುವರಿಯಾಗಿದ್ದರೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಹೇಳಿದರು. ಡಿವೈಎಸ್ಪಿ ಮುತ್ತಣ್ಣ ಸವರಗೋಳ ಹಾಗೂ ಅಧಿಕಾರಿ ವರ್ಗದವರಿದ್ದರು.