ಹುಲ್ಲಂಬಿ: ಸೌರಶಕ್ತಿ ಆಧಾರಿತ ಸಿರಿಧಾನ್ಯ ಸಂಸ್ಕರಣ ಘಟಕ

| Published : Jul 10 2024, 12:33 AM IST

ಹುಲ್ಲಂಬಿ: ಸೌರಶಕ್ತಿ ಆಧಾರಿತ ಸಿರಿಧಾನ್ಯ ಸಂಸ್ಕರಣ ಘಟಕ
Share this Article
  • FB
  • TW
  • Linkdin
  • Email

ಸಾರಾಂಶ

ರೈತರು ಈ ಸಂಸ್ಕರಣ ಘಟಕದ ಉಪಯೋಗ ಮಾಡಿಕೊಂಡು ವಹಿವಾಟು ಹೆಚ್ಚಿಸಲು ಶ್ರಮಿಸಿ ಮುಂದಿನ ದಿನಗಳಲ್ಲಿ ಸಿರಿಧಾನ್ಯದಿಂದ ಸೆಕೆಂಡರಿ ಉತ್ಪನ್ನಗಳನ್ನು ತಯಾರಿಸಬಹುದು.

ಧಾರವಾಡ:

ಕೃಷಿ ಜ್ಯೋತಿ ರೈತ ಉತ್ಪಾದಕರ ಕಂಪನಿಯು ಸ್ಕೋಪ್‌ ಸಂಸ್ಥೆಯ ತಾಂತ್ರಿಕ ನೆರವಿನೊಂದಿಗೆ ಕಲಘಟಗಿ ತಾಲೂಕು ಹುಲ್ಲಂಬಿ ಗ್ರಾಮದ ಸುತ್ತಲಿನ ಗ್ರಾಮಗಳಲ್ಲಿ ರೈತರಿಂದ ಪಡೆದ ಸಿರಿಧಾನ್ಯವನ್ನು ಸಂಸ್ಕರಿಸಲು ಸೌರಶಕ್ತಿ ಆಧಾರಿತ ಸಮುದಾಯ ಸಿರಿಧಾನ್ಯ ಸಂಸ್ಕರಣ ಘಟಕ ಆರಂಭಿಸಿದೆ.

ಘಟಕಕ್ಕೆ ಚಾಲನೆ ನೀಡಿದ ನಬಾರ್ಡ್ ಧಾರವಾಡ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಮಯೂರ ಕಾಂಬಳೆ, ನಬಾರ್ಡ್‌ ಪ್ರವರ್ತಿತ ಕೃಷಿ ಜ್ಯೋತಿ ರೈತ ಉತ್ಪಾದಕರ ಕಂಪನಿಯು ಈ ಕಾರ್ಯ ಮಾಡಿದ್ದು ಶ್ಲಾಘನೀಯ. ಘಟಕ ಸ್ಥಾಪನೆಗೆ ಬೆಂಗಳೂರಿನ ಸೋಲ್ಕೋ ಪ್ರತಿಷ್ಠಾನ ಸಹಾಯ ಒದಗಿಸಿದ್ದು ಸಂಸ್ಕರಣ ಘಟಕದ ನಿರ್ವಹಣೆಯನ್ನು ದುರ್ಗಾದೇವಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ವಹಿಸಲಾಗಿದೆ. ಘಟಕ ಸ್ಥಾಪನೆಗೆ ₹ 10 ಲಕ್ಷ ವೆಚ್ಚವಾಗಿದ್ದು, ಘಟಕ ನಿರ್ವಹಿಸಲು ತರಬೇತಿಯನ್ನು ಸಹಜ ಸಮೃದ್ಧ ಸಂಸ್ಥೆ ನೀಡಿದೆ. ಘಟಕವು ಪ್ರತಿ ದಿನ 5ರಿಂದ 6 ಕ್ವಿಂಟಲ್ ದಷ್ಟು ಸಿರಿಧಾನ್ಯ ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ ಎಂದರು.

ರೈತರು ಈ ಸಂಸ್ಕರಣ ಘಟಕದ ಉಪಯೋಗ ಮಾಡಿಕೊಂಡು ವಹಿವಾಟು ಹೆಚ್ಚಿಸಲು ಶ್ರಮಿಸಿ ಮುಂದಿನ ದಿನಗಳಲ್ಲಿ ಸಿರಿಧಾನ್ಯದಿಂದ ಸೆಕೆಂಡರಿ ಉತ್ಪನ್ನಗಳನ್ನು ತಯಾರಿಸಲು ಸಲಹೆ ನೀಡಿದರು.

ಸೋಲ್ಕೋ ಪ್ರತಿಷ್ಠಾನದ ವೀರೇಶ ತಡಹಾಳ ಮಾತನಾಡಿ, ಸೋಲ್ಕೋ ಪ್ರತಿಷ್ಠಾನದಿಂದ ಮುಂದಿನ ದಿನಗಳಲ್ಲಿ ಮಹಿಳೆಯರ ಆರ್ಥಿಕ ಅಭಿವೃದ್ಧಿಗೋಸ್ಕರ ಸೌರಶಕ್ತಿ ಆಧಾರಿತ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದರು.

ತುಮರಿಕೊಪ್ಪ ಶಾಖೆಯ ಐಒಬಿ ಬ್ಯಾಂಕ್ ಮ್ಯಾನೇಜರ್‌ ವಿನಾಯಕ ತೋಟಗೇರ, ಸಹಜ ಸಮೃದ್ಧಿ ಸಂಸ್ಥೆ ಶಾಂತಕುಮಾರ, ಸ್ಕೋಪ್ ಸಂಸ್ಥೆ ಮುಖ್ಯಸ್ಥ ಬಂಡೇರಾವ ಪಟವಾರಿ, ಬೇಗೂರು ಗ್ರಾಪಂ ಸದಸ್ಯರು, ರೈತರ ಕಂಪನಿ ನಿರ್ದೇಶಕರು, ಗ್ರಾಮದ ಹಿರಿಯರು, ಮಹಿಳಾ ಸಂಘದ ಸದಸ್ಯರು ಇದ್ದರು. ಕಲ್ಲಪ್ಪ ಕಟ್ಟಿಮನಿ ನಿರ್ವಹಿಸಿದರು. ಚನ್ನಬಸಪ್ಪ ಶೀಗಟ್ಟಿ ವಂದಿಸಿದರು.