ಸಾರಾಂಶ
ಹಂಡ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ 600 ವರ್ಷಗಳಷ್ಟು ಇತಿಹಾಸ ಹೊಂದಿರುವ ಹುಲುಕೋಡು ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಜಾತ್ರಾ ಮಹೋತ್ಸವ ಬುಧವಾರ ನೆರವೇರಿತು. ಬೆಂಬಳೂರು ಶ್ರೀ ಬಾಣಂತಮ್ಮ ದೇವಿಯ 7 ಮಂದಿ ಪುತ್ರರಲ್ಲಿ ಕುಮಾರಲಿಂಗೇಶ್ವರನು ಮೂರನೇ ಪುತ್ರನಾಗಿದ್ದು, ಈತ ಹುಲುಕೋಡು ಗ್ರಾಮದಲ್ಲಿ ನೆಲಸಿರುವ ಹಿನ್ನೆಲೆಯಲ್ಲಿ ಬೆಂಬಳೂರು ಬಾಣಂತಮ್ಮ ಜಾತ್ರಾ ಮಹೋತ್ಸವದ ಮರುದಿನ ಹುಲುಕೋಡು ಕುಮಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಜಾತ್ರಾ ಮಹೋತ್ಸವವನ್ನು ಆಚರಿಸುವುದು ಇಲ್ಲಿನ ಇತಿಹಾಸ
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಸೋಮವಾರಪೇಟೆ ತಾಲೂಕಿನ ಹಂಡ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ 600 ವರ್ಷಗಳಷ್ಟು ಇತಿಹಾಸ ಹೊಂದಿರುವ ಹುಲುಕೋಡು ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಜಾತ್ರಾ ಮಹೋತ್ಸವ ಬುಧವಾರ ವಿಜೃಂಬಣೆಯಿಂದ ನೆರವೇರಿತು.ಬೆಂಬಳೂರು ಶ್ರೀ ಬಾಣಂತಮ್ಮ ದೇವಿಯ 7 ಮಂದಿ ಪುತ್ರರಲ್ಲಿ ಕುಮಾರಲಿಂಗೇಶ್ವರನು ಮೂರನೇ ಪುತ್ರನಾಗಿದ್ದು, ಈತ ಹುಲುಕೋಡು ಗ್ರಾಮದಲ್ಲಿ ನೆಲಸಿರುವ ಹಿನ್ನೆಲೆಯಲ್ಲಿ ಬೆಂಬಳೂರು ಬಾಣಂತಮ್ಮ ಜಾತ್ರಾ ಮಹೋತ್ಸವದ ಮರುದಿನ ಹುಲುಕೋಡು ಕುಮಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಜಾತ್ರಾ ಮಹೋತ್ಸವವನ್ನು ಆಚರಿಸಲಾಗುತ್ತದೆ. ಬುಧವಾರ ಬೆಳಗ್ಗೆ 7 ಗಂಟೆಗೆ ಗ್ರಾಮದ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ದೇವರಿಗೆ ಗಂಗಾಸ್ನಾನ ಮಾಡಿಸಲು ಕಳಸದೊಂದಿಗೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ನಂತರ ಆರತಿ ಪೂಜೆ, ದೇವರಿಗೆ ಈಡುಗಾಯಿ ಒಡೆಯುವುವ ಮೂಲಕ ಹಾಗೂ ಸಾಂಪ್ರದಾಯಕ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ದೇವರನ್ನು ದೇವಸ್ಥಾನದ ಒಳಗೆ ಬರ ಮಾಡಿಕೊಳ್ಳಲಾಯಿತು. ನಂತರ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿಸಲಾಯಿತು. ಮಧ್ಯಾಹ್ನ 12 ಗಂಟೆಗೆ ಪಕ್ಕದ ಕಿತ್ತೂರು ಗ್ರಾಮದಿಂದ ಶ್ರೀ ಕುಮಾರಲಿಂಗೇಶ್ವರ ದೇವರ ಅಡ್ಡಪಲ್ಲಕಿ ಮೆರವಣಿಗೆಯು ಹುಲುಕೋಡು ಗ್ರಾಮಕ್ಕೆ ಆಗಮಿಸಿದ ಬಳಿಕ ಹುಲುಕೋಡಿನ ಶ್ರೀ ಕುಮಾರಲಿಂಗೇಶ್ವರ ದೇವರನ್ನು ಅಡ್ಡಪಲ್ಲಕ್ಕಿಯ ಉತ್ಸವ ಮೆರವಣಿಗೆ ಮಂಗಳ ವಾದ್ಯಗೋಷ್ಟಿಯೊಂದಿಗೆ ಜಾತ್ರಾ ಬನಕ್ಕೆ ಕರೆತರಲಾಯಿತು. ತದ ನಂತರ ಜಾತ್ರಾ ಬನದಲ್ಲಿರುವ ಗುಡಿಯಲ್ಲಿ ದೇವರನ್ನು ಇಡಲಾಯಿತು. ಭಕ್ತರು ಶ್ರೀ ಕುಮಾರಲಿಂಗೇಶ್ವರ ಸ್ವಾಮಿಗೆ ಪೂಜೆ, ಈಡುಗಾಯಿ ಒಡೆಯುವ ಮೂಲಕ ಹರಿಕೆ ಸಲ್ಲಿಸಿದರು. ಸಂಜೆ 5 ಗಂಟೆ ವರೆಗೆ ಜಾತ್ರಾ ಬನದಲ್ಲಿ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವನ್ನು ನಡೆಸಲಾಯಿತು. ತದ ನಂತರ ಸಂಜೆ 5 ಗಂಟೆಗೆ ಶ್ರೀ ಸ್ವಾಮಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಜಾತ್ರಾ ಮನದಿಂದ ತನ್ನ ಮೂಲ ಸ್ಥಾನಕ್ಕೆ ಕರೆತರಲಾಯಿತು.ಸಂಜೆ 7 ಗಂಟೆಗೆ ಕಿತ್ತೂರು ಗ್ರಾಮದ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ಮತ್ತು ಹುಲುಕೋಡು ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ಈ ಸಹೋದರ ದೇವರುಗಳ ಜೋಡಿ ಅಡ್ಡಪಲ್ಲಕ್ಕಿ, ಉತ್ಸವ ಮೆರವಣಿಗೆ, ಉತ್ಸವ ಮೆರವಣಿಗೆ ನಡೆಯಿತು. ಜಾತ್ರೋತ್ಸವದಲ್ಲಿ ಹುಲುಕೋಡು, ಕಿತ್ತೂರು ಗ್ರಾಮಗಳು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಂದ ನೂರಾರು ಭಕ್ತರು ಪಾಲ್ಗೊಂಡಿದ್ದರು. ಜಾತ್ರೋತ್ಸವದಲ್ಲಿ ಹೆಗ್ಗಡಹಳ್ಳಿ ಮಠಾಧೀಶ ಶ್ರೀ ಷಡ್ಪಾವರ ಹಿತೇಶ್ವರ ಶಿವಾಚಾರ್ಯ ಸ್ವಾಮೀಜಿ ಭಕ್ತರಿಗೆ ಆಶೀವರ್ಚಿಸಿದರು. ಭಕ್ತರಿಗೆ ಜಾತ್ರಾ ಸಮಿತಿಯಿಂದ ಅನ್ನಸಂತರ್ಪಣೆ ನಡೆಯಿತು. ಜಾತ್ರೋತ್ಸವದಲ್ಲಿ ಜಾತ್ರಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಗ್ರಾಮದ ಪ್ರಮುಖರು ಪಾಲ್ಗೊಂಡಿದ್ದರು.