ಮನುಷ್ಯನ ಅಂಗರಚನೆ ಸಸ್ಯಹಾರಕ್ಕೆ ಪೂರಕ: ಸುಮಂಗಲಿ ಸಾಲಿಮಠ್

| Published : Nov 10 2024, 01:53 AM IST

ಮನುಷ್ಯನ ಅಂಗರಚನೆ ಸಸ್ಯಹಾರಕ್ಕೆ ಪೂರಕ: ಸುಮಂಗಲಿ ಸಾಲಿಮಠ್
Share this Article
  • FB
  • TW
  • Linkdin
  • Email

ಸಾರಾಂಶ

ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯ ಇನ್ನೊಂದಿಲ್ಲ. ನಮ್ಮ ಪೂರ್ವಿಕರು ಶೇಕಡ 90 ರಷ್ಟು ಸಸ್ಯಜನ್ಯ ಪದಾರ್ಥಗಳನ್ನೆ ಸೇವಿಸುತ್ತಿದ್ದರು. ಆರೋಗ್ಯವಂತರಾಗಿ ನೂರಾರು ವರ್ಷಗಳ ಕಾಲ ಬದುಕುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಶೇ.10ರ ಸ್ಥಾನದಲ್ಲಿದ್ದ ಮಾಂಸಾಹಾರ ಶೇ.50ರ ಗಡಿ ತಲುಪಿದೆ. ಆದ್ದರಿಂದ ಎಲ್ಲಾ ಪ್ರತಿಷ್ಠಿತ ಆಸ್ಪತ್ರೆಗಳು ಗಿಜಿಗುಡುತ್ತಿವೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸಸ್ಯಹಾರ ಮಾನವನ ಆಹಾರ ಪದ್ಧತಿಯಲ್ಲಿ ವಿಶೇಷ ಸ್ಥಾನ ಪಡೆದಿದೆ. ಮನುಷ್ಯನ ಅಂಗರಚನೆ ಕೂಡಾ ಸಸ್ಯಹಾರಕ್ಕೆ ಪೂರಕವಾಗಿದೆ ಎಂದು ಪತ್ರೀಜಿ ವೆಜಿಟೇರಿಯನ್ ಮೂವ್‌ಮೆಂಟ್‌ನ ಸಂಚಾಲಕಿ ಸುಮಂಗಲಿ ಸಾಲಿಮಠ್ ತಿಳಿಸಿದರು.

ಪಟ್ಟಣದ ಮೈಸೂರು ರಸ್ತೆಯ ಜಯಮ್ಮ ಶಿವಲಿಂಗೇಗೌಡ ಕಲ್ಯಾಣ ಮಂಟಪದಲ್ಲಿ ಡಾ.ಬ್ರಹ್ಮರ್ಷಿ ಪಿತಾಮಹ ಪತ್ರೀಜಿಯವರ ಆಶೀರ್ವಾದದಿಂದ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್ ಮೆಂಟ್ (ಭಾರತ) ಪತ್ರೀಜಿ ವೆಜಟೇರಿಯನ್ ಮೂವ್ ಮೆಂಟ್ ಕರ್ನಾಟಕ ವತಿಯಿಂದ ನಡೆದ ಸಸ್ಯಹಾರ ಜಾಗೃತಿ, ಧ್ಯಾನಪ್ರಚಾರ ಮತ್ತು ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯ ಇನ್ನೊಂದಿಲ್ಲ. ನಮ್ಮ ಪೂರ್ವಿಕರು ಶೇಕಡ 90 ರಷ್ಟು ಸಸ್ಯಜನ್ಯ ಪದಾರ್ಥಗಳನ್ನೆ ಸೇವಿಸುತ್ತಿದ್ದರು. ಆರೋಗ್ಯವಂತರಾಗಿ ನೂರಾರು ವರ್ಷಗಳ ಕಾಲ ಬದುಕುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಶೇ.10ರ ಸ್ಥಾನದಲ್ಲಿದ್ದ ಮಾಂಸಾಹಾರ ಶೇ.50ರ ಗಡಿ ತಲುಪಿದೆ. ಆದ್ದರಿಂದ ಎಲ್ಲಾ ಪ್ರತಿಷ್ಠಿತ ಆಸ್ಪತ್ರೆಗಳು ಗಿಜಿಗುಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಧ್ಯಾನ, ಯೋಗ, ಸಸ್ಯಾಹಾರದ ಶೈಲಿಗೆ ಒಗ್ಗಿಕೊಂಡರೆ ಎಲ್ಲರೂ ಆರೋಗ್ಯವಂತರಾಗಿ ಇರಬಹುದು. ಎಲ್ಲಾ ದಾನಗಳಿಗಿಂತ ಶ್ರೇಷ್ಠವಾದುದ್ದು ಜ್ಞಾನ. ಧ್ಯಾನದಿಂದ ಜ್ಞಾನದಿಂದ ಮುಕ್ತಿ ಎಂದರು.

ಧ್ಯಾನವೆಂದರೆ ಶ್ವಾಸದ ಮೇಲೆ ಗಮನ. ಕೋಟಿ ಪೂಜೆಗಳು ಒಂದು ಸ್ತೋತ್ರಕ್ಕೆ ಸಮ. ಕೋಟಿ ಸ್ತೋತ್ರಗಳು ಒಂದು ಜಪಕ್ಕೆ ಸಮ. ಕೋಟಿ ಜಪಗಳು ಒಂದು ಧ್ಯಾನಕ್ಕೆ ಸಮ. ಆದ್ದರಿಂದ ನಾವು ಈ ನಮ್ಮ ಪೂರ್ವಿಕರ ಶೈಲಿಗಳನ್ನು ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯೋಣ ಎಂದು ಕರೆ ನೀಡಿದರು.

ಶಿಕ್ಷಣ ಸಂಯೋಜಕ ವೀರಭದ್ರಯ್ಯ ಮಾತನಾಡಿ, ಧ್ಯಾನವು ಒತ್ತಡ, ಭಯ, ಆತಂಕ, ಖಿನ್ನತೆ ಮತ್ತು ನೋವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಶಾಂತಿ, ಗ್ರಹಿಕೆ, ಸ್ವಪರಿಕಲ್ಪನೆ ಮತ್ತು ಯೋಗಕ್ಷೇಮವನ್ನು ಹೆಚ್ಚಿಸುತ್ತದೆ. ಮಾನಸಿಕ, ನರವೈಜ್ಞಾನಿಕ, ಹೃದಯನಾಳದ ಮತ್ತು ಇತರ ಕ್ಷೇತ್ರಗಳ ಮೇಲೆ ಧ್ಯಾನದ ಪರಿಣಾಮಗಳನ್ನು ಉತ್ತಮವಾಗಿ ಅರ್ಥ ಮಾಡಿಕೊಳ್ಳಲು ಅಗತ್ಯವಾಗಿದೆ ಎಂದರು.

ಪ್ರಪಂಚದಲ್ಲಿ ಸಸ್ಯಹಾರಿಗಳು ಶೇ.10 ರಷ್ಟಿದ್ದರೆ, ಮಾಂಸಾಹಾರಿಗಳು ಶೇ.90 ರಷ್ಟು. ಮಾಂಸಹಾರಕಿಂತ ಸಸ್ಯ ಹಾರ ಮಾನವರಿಗೆ ಹೆಚ್ಚು ಆರೋಗ್ಯವನ್ನು ಕಾಪಾಡುತ್ತದೆ. ಇದನ್ನು ಇಂದಿನ ಜಗತ್ತು ಅದರಲ್ಲೂ ಯುವ ಪೀಳಿಗೆ ನಂಬುವುದಿಲ್ಲ. ಸಸ್ಯ ಆಹಾರವು ಫೈಬರ್, ಜೀವಸತ್ವಗಳು ಮತ್ತು ಇತರ ಪೋಷಕಾಂಶಗಳನ್ನು ಒಳಗೊಂಡಿದೆ ಎಂದರು.

ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಮಸೂರಗಳು, ಬೀಜಗಳು ಹೆಚ್ಚೆಚ್ಚು ಸಮೃದ್ಧವಾಗಿರುತ್ತವೆ.ಸಸ್ಯಹಾರಗಳನ್ನು ಹೆಚ್ಚೆಚ್ಚು ಸೇವನೆ ಮಾಡುವ ಮೂಲಕ ದೀರ್ಘ ಆಯಸ್ಸನ್ನು ಹೊಂದಿರಿ ಎಂದರು.

ಈ ವೇಳೆ ಅಂತಾರಾಷ್ಟ್ರೀಯ ಯೋಗಪಟು ಅಲ್ಲಮಪ್ರಭು, ಶಿಕ್ಷಣ ಸಂಯೋಜಕ ವೀರಭದ್ರಯ್ಯ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಎಸ್.ಬಸವೇಗೌಡ, ಸ್ವಾಮಿಗೌಡ, ಸಿದ್ದಯ್ಯ, ರವಿಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.