ಸಾರಾಂಶ
ಇತ್ತೀಚಿನ ದಿನಗಳಲ್ಲಿ ಯುವ ಜನತೆ ದುಶ್ಚಟಕ್ಕೆ ಹೆಚ್ಚು ಬಲಿಯಾಗುತ್ತಿದೆ. ಸಮಾಜಕ್ಕೆ ಇದು ಮಾರಕವಾಗಿದೆ. ಮೊದಲು ನೀವು ಉತ್ತಮ ಗುಣ ಬೆಳೆಸಿಕೊಂಡು ಇತರರಿಗೆ ಮಾರ್ಗದರ್ಶಕರಾಗಬೇಕು. ಆಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ.
ಯಲಬುರ್ಗಾ:
ಯುವಕರು ದುಶ್ಚಟಗಳ ದಾಸರಾಗದೆ, ಮಾನವೀಯ ಮೌಲ್ಯ ಅಳವಡಿಸಿಕೊಂಡು ಸಮಾಜದ ಅಭ್ಯುದಯಕ್ಕೆ ಕಾರಣರಾಗಬೇಕು ಎಂದು ತಾಳಿಕೋಟೆಯ ಮಹಾಂತದೇವರು ಹೇಳಿದರು.ತಾಲೂಕಿನ ಬಂಡಿಹಾಳ ಗ್ರಾಮದಲ್ಲಿ ಗುರುವಾರ ದುಶ್ಚಟಗಳ ಜೋಳಿಗೆ ಅಭಿಯಾನದಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ತ ತಿಂಗಳ ಕಾಲ ಪ್ರವಚನ ಹಮ್ಮಿಕೊಂಡಿದ್ದು, ದುಶ್ಚಟಗಳಿಗೆ ಬಲಿಯಾದವರನ್ನು ಸರಿದಾರಿಗೆ ತರಲು ಪ್ರಯತ್ನಿಸಲಾಗುತ್ತದೆ. ನಾನು ದುಶ್ಚಟಗಳ ಭಿಕ್ಷೆಗೆ ಬಂದಿದ್ದೇನೆ. ನಿಮ್ಮಲ್ಲಿರುವ ಚಟಗಳನ್ನು ಜೋಳಿಗೆಗೆ ಹಾಕಬೇಕೆಂದರು.ದುಶ್ಚಟದಿಂದ ಮಾನವ ಜನ್ಮ ದುರ್ಲಭವಾಗಿದೆ. ಬದುಕು ಸಾರ್ಥಕತೆಯಿಂದ ತುಂಬಿರಬೇಕು. ವ್ಯಸನ ಮುಕ್ತರಾಗಿ ಬಾಳಿದರೆ ಜೀವನ ಸಾರ್ಥಕವಾಗುತ್ತದೆ. ವ್ಯಸನ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲರೂ ಪಣತೊಡಬೇಕು. ಯುವಶಕ್ತಿ ದೇಶದ ಸಂಪತ್ತು. ಇದನ್ನರಿತು ಸ್ವಚ್ಛ ಭಾರತದ ಜತೆಗೆ ವ್ಯಸನಮುಕ್ತ ಸಮಾಜ ನಿರ್ಮಾಣವಾಗಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಯುವ ಜನತೆ ದುಶ್ಚಟಕ್ಕೆ ಹೆಚ್ಚು ಬಲಿಯಾಗುತ್ತಿದೆ. ಸಮಾಜಕ್ಕೆ ಇದು ಮಾರಕವಾಗಿದೆ. ಮೊದಲು ನೀವು ಉತ್ತಮ ಗುಣ ಬೆಳೆಸಿಕೊಂಡು ಇತರರಿಗೆ ಮಾರ್ಗದರ್ಶಕರಾಗಬೇಕು. ಆಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯವೆಂದು ಹೇಳಿದರು.ಗ್ರಾಮದ ಮುಖಂಡ ಶ್ರೀನಿವಾಸ ಮಾತನಾಡಿ, ಯುವಕರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಇದರಿಂದ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ಈ ವೇಳೆ ಪ್ರಮುಖರಾದ ಬಸವರಾಜ ಕಳಸಪ್ಪನವರ, ರಮೇಶ ಮಳಗೌಡ್ರ, ವೀರನಗೌಡ ಗೋಣಿ, ಶರಣಪ್ಪ ಬೂಸಣ್ಣನವರ, ಮಲ್ಲೇಶಪ್ಪ ಬಂಡ್ರಿ, ವಿರೂಪಾಕ್ಷಪ್ಪ ಗೋಣಿ, ಕೆರಿಬಸಪ್ಪ ತಳವಾರ, ಫಕೀರಪ್ಪ ದಿಂಡೂರು, ಕೆರಿಬಸಪ್ಪ ಪಟ್ಟೇದ, ಕಳಕನಗೌಡ ಪೊಲೀಸ್‌ಪಾಟೀಲ್, ಶಂಕರ ದಿಂಡೂರು, ಭೀಮನಗೌಡ ಹುಲಿಗಿ, ಕಳಕೇಶ ಶ್ರೀಗಿರಿ, ದೇವಪ್ಪ ಕರಿಗಾರ ಸೇರಿದಂತೆ ಇತರರು ಇದ್ದರು.