ಮಾನವ ಸರಪಳಿ: ಜಿಲ್ಲೆಯಲ್ಲಿ ಹಬ್ಬದ ಸಂಭ್ರಮ

| Published : Sep 15 2024, 02:02 AM IST

ಸಾರಾಂಶ

ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆ ಜಿಲ್ಲೆಯಲ್ಲಿ ಹಬ್ಬದ ಸಂಭ್ರಮ ಕಾಣುತ್ತಿದೆ.

- ಅಲ್ಲಲ್ಲಿ ಸ್ವಾಗತ ಕಮಾನು, ಧ್ವಜಗಳು

- ಮುಖ್ಯ ಕಾರ್ಯಕ್ರಮದ ವೇದಿಕೆ ಸಿದ್ಧ

ಕನ್ನಡಪ್ರಭ ವಾರ್ತೆ ಕೊಪ್ಪಳ

ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆ ಜಿಲ್ಲೆಯಲ್ಲಿ ಹಬ್ಬದ ಸಂಭ್ರಮ ಕಾಣುತ್ತಿದೆ.

ಹೌದು..! ಸೆ.15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆ ಜಿಲ್ಲೆಯಲ್ಲಿನ ಮಾನವ ಸರಪಳಿ ಮಾರ್ಗವು ಜನಮನ ಸೆಳೆಯುವ ಹಾಗೆ ಸಿದ್ಧವಾಗಿದೆ.

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಲೋಗೊ ಇರುವ ಧ್ವಜಗಳನ್ನು ಪ್ರತಿ ಒಂದು ಕಿಮೀಗೊಂದರಂತೆ ಅಳವಡಿಸಲಾಗಿದೆ. ಅಲ್ಲಲ್ಲಿ ಸ್ವಾಗತ ಕಮಾನುಗಳನ್ನು ಹಾಕಿದ್ದು ಮಾನವ ಸರಪಳಿ ಮಾರ್ಗದಲ್ಲಿ ಊರ ಹಬ್ಬದ ಸಡಗರ ಕಾಣುತ್ತಿದೆ.

ಅಲ್ಲಲ್ಲಿ ಸಭೆಗಳು:ಮಾನವ ಸರಪಳಿ ಕಾರ್ಯಕ್ರಮ ಹಿನ್ನೆಲೆ ಜಿಲ್ಲಾ, ತಾಲೂಕು ಮತ್ತು ಹೋಬಳಿ ಕೇಂದ್ರದಲ್ಲಿ ಕಾರ್ಯಕ್ರಮದ ಮುನ್ನಾ ದಿನವಾದ ಸೆ.14ರಂದು ಸಹ ಬಿರುಸಿನಿಂದ ಸಭೆಗಳು ನಡೆದವು. ಮಾನವ ಸರಪಳಿ ಕಾರ್ಯಕ್ರಮಕ್ಕೆ ನಿಯೋಜನೆಗೊಂಡ ಸೆಕ್ಟರ್ ಅಧಿಕಾರಿಗಳು ಸಹ ಆಯಾ ಕಡೆಗಳಲ್ಲಿ ಸಭೆ ನಡೆಸಿ ಚರ್ಚಿಸಿದರು.

ಮುಖ್ಯ ವೇದಿಕೆ ನಿರ್ಮಾಣ:

ಐತಿಹಾಸಿಕ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಮುಖ್ಯ ಕಾರ್ಯಕ್ರಮ ಕೊಪ್ಪಳ ನಗರದ ಅಶೋಕ ಸರ್ಕಲ್‌ನಲ್ಲಿ ನಿಗದಿಯಾಗಿದ್ದು, ಸೆ.14ರಂದು ಸಂಜೆ ಮುಖ್ಯ ವೇದಿಕೆಯು ಭರ್ಜರಿಯಾಗಿ ಸಿದ್ಧವಾಗಿದೆ.

ಭರ್ಜರಿ ಪ್ರಚಾರ:

ದಿನಾಚರಣೆಗೆ ಜಿಲ್ಲಾಡಳಿತವು ಶಿಸ್ತುಬದ್ಧವಾಗಿ ಸಿದ್ಧತೆ ಮಾಡಿಕೊಂಡಿದ್ದು, ಕಾರ್ಯಕ್ರಮದಲ್ಲಿ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸುವ ನಿಟ್ಟಿನಲ್ಲಿ ಕಳೆದ 15 ದಿನಗಳಿಂದಲೂ ನಾನಾ ರೀತಿಯ ಪ್ರಚಾರ ಕಾರ್ಯ ನಡೆದಿದ್ದು, ಸೆ.14 ರಂದು ಸಹ ಆಟೋ ಮೂಲಕವು ಅಲ್ಲಲ್ಲಿ ಭರ್ಜರಿಯಾಗಿ ಪ್ರಚಾರ ನಡೆಸಲಾಯಿತು.

ರಸ್ತೆಯ ಮೇಲೆ ಚಿತ್ತಾಕ್ಷರ:

ಕೊಪ್ಪಳ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಹ ಜಾತ್ರೆಯ ಸಂಭ್ರಮ ಕಾಣುತ್ತಿದೆ. ಮಾನವ ಸರಪಳಿ ಹೊರಡುವ ಮಾರ್ಗದ ರಸ್ತೆಯ ಮೇಲೆ ಅಲ್ಲಲ್ಲಿ ಪ್ರಜಾಪ್ರಭುತ್ವ ದಿನಾಚರಣೆಗೆ ಸ್ವಾಗತ ಎಂದು ಬರೆದಿರುವುದು ಜನಮನ ಸೆಳೆಯುತ್ತಿದೆ.

ಶಾಲೆಗಳಲ್ಲಿ ರಿಹರ್ಸಲ್:

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ, ಸಂವಿಧಾನದ ಬಗ್ಗೆ ಉತ್ತಮ ಸಂದೇಶ ರವಾನಿಸುವ ನಿಟ್ಟಿನಲ್ಲಿ ಮಾನವ ಸರಪಳಿಯಲ್ಲಿ ಭಾಗಿಯಾಗಲಿರುವ ವಿದ್ಯಾರ್ಥಿಗಳಿಗೆ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಸಾಲಾಗಿ ನಿಲ್ಲಿಸಿ ಕಾರ್ಯಕ್ರಮದ ಬಗ್ಗೆ ತಿಳಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯ ನಡೆಯಿತು.

ಮಾನವ ಸರಪಳಿ ಕಾರ್ಯಕ್ರಮದಲ್ಲಿ ತಾಲೂಕುಮಟ್ಟದ ಅಧಿಕಾರಿಗಳು ಮತ್ತು ಅಧೀನ ಸಿಬ್ಬಂದಿ ಕಡ್ಡಾಯ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ತಹಸೀಲ್ದಾರರು ತಾಲೂಕುಮಟ್ಟದ ಅಧಿಕಾರಿಗಳಿಗೆ ಜ್ಞಾಪನಪತ್ರ ಹೊರಡಿಸಿ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳಿಂದ ಮೇಲ್ವಿಚಾರಣೆ:

ರಜಾ ದಿನವಾದ ಶನಿವಾರ ಸಹ ಜಿಲ್ಲಾಧಿಕಾರಿ ನಲಿನ್ ಅತುಲ್ ಅಧಿಕಾರಿಗಳಿಗೆ ಸಂದೇಶ ರವಾನಿಸುತ್ತ ಕಾರ್ಯಕ್ರಮದ ಅಂತಿಮ ಹಂತದ ಸಿದ್ಧತೆ ಪರಿಶೀಲಿಸಿದರು.ಗವಿಮಠಶ್ರೀಗಳ ಶುಭ ಹಾರೈಕೆ:

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಗೆ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿ ಶುಭ ಹಾರೈಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಮನುಷ್ಯ ಸಂತೋಷ ಮತ್ತು ಸ್ವಾತಂತ್ರ್ಯ ಬಯಸುತ್ತಾನೆ. ಭಾರತವು ನಮ್ಮೆಲ್ಲರಿಗೂ ಸಂತೋಷದಿಂದ ಬದುಕಲು ಅವಕಾಶ ಮಾಡಿಕೊಟ್ಟರೆ, ಸಂವಿಧಾನ ಸ್ವೇಚ್ಛೆಯಿಲ್ಲದ ಸ್ವಾತಂತ್ರ್ಯವನ್ನು ಕೊಟ್ಟಿದೆ. ಭಾರತ ತ್ರಿವರ್ಣ ಧ್ವಜದ ಅಡಿಯಲ್ಲಿ ಹಿಂದೆ, ಇಂದು, ಮುಂದು ನಾವೆಲ್ಲರೂ ಒಂದು ಎನ್ನುವ ಪ್ರಜಾಪ್ರಭುತ್ವದ ತತ್ವವು ನಮ್ಮೆಲ್ಲರ ಅಂತರಂಗದಲ್ಲಿ ಬೆಳಗಲಿ. ಮಾನವ ಸರಪಳಿ ಮಹಾತ್ಕಾರ್ಯವು ಯಶಸ್ವಿಯಾಗಲೆಂದು ಶುಭ ಹಾರೈಸುತ್ತೇನೆ ಎಂದಿದ್ದಾರೆ.