ಸಾರಾಂಶ
ನಾಪೋಕ್ಲು ವ್ಯಾಪ್ತಿಯಲ್ಲಿ ನಾಲ್ಕು ನಾಡು ಕೊಡವ ಜನಾಂಗ ಬಾಂಧವರು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಪೊನ್ನಂಪೇಟೆಯಿಂದ ಕಟ್ಟೆಮಾಡುವಿಗೆ ಬೈಕ್ ಜಾಥಾ ಆಯೋಜಿಸಿದ್ದ ಸಂಘಟಕರನ್ನು ಪೊಲೀಸ್ ಇಲಾಖೆ ಬಂಧಿಸಿರುವುದನ್ನು ಖಂಡಿಸಿ ಜನಾಂಗದವರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ನಾಪೋಕ್ಲು ಪಟ್ಟಣದಲ್ಲಿ ನಾಲ್ಕುನಾಡು ಕೊಡವ ಜನಾಂಗ ಬಾಂಧವರು ಪ್ರತಿಭಟನೆ ನಡೆಸಿದರು.ಪಟ್ಟಣದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ನಾಲ್ಕುನಾಡು ಕೊಡವ ಜನಾಂಗ ಬಾಂಧವರು ನಾಪೋಕ್ಲು ಪಟ್ಟಣದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ, ಘೋಷಣೆ ಕೂಗಿ ಪ್ರತಿಭಟನೆ ನಡೆಸಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು .
ಕಟ್ಟೆಮಾಡುವಿನ ಮೃತ್ಯುಂಜಯ ದೇವಾಲಯದಲ್ಲಿ ಕೊಡವ ಜನಾಂಗಕ್ಕೆ ಹಾಗೂ ಕೊಡವ ಸಂಪ್ರದಾಯದ ಉಡುಗೆ ತೊಡುಗೆಗೆ ಅವಮಾನ ಮಾಡಿದ ಮತ್ತು ಅವಹೇಳನಕಾರಿ ಹೇಳಿಕೆ ನೀಡಿದವರನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.ಪ್ರತಿಭಟನೆ ಬಳಿಕ ನಾಪೋಕ್ಲು ಠಾಣೆಗೆ ತೆರಳಿದ ಕೊಡವ ಜನಾಂಗದ ಮಂದಿ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಅವರ ಮುಖಾಂತರ ಜಿಲ್ಲಾಧಿಕಾರಿ ಹಾಗೂ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕುಂಡಿಯೊಳಂದ ರಮೇಶ್ ಮುದ್ದಯ್ಯ, ಬಿದ್ದಾಟoಡ ತಮ್ಮಯ್ಯ, ಕುಲ್ಲೆಟೀರ ಅರುಣ್ ಬೇಬ, ಕಲಿಯಂಡ ಮಿಲನ್ ಮಂದಣ್ಣ, ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಪ್ರಕರಣದ ಬಗ್ಗೆ ತೀವ್ರವಾಗಿ ಖಂಡಿಸಿ ಮಾತನಾಡಿದರು. ಸಂತ ದಿನವಾದ ಸೋಮವಾರ ಪಟ್ಟಣದಲ್ಲಿ ಕೆಲವು ಕಾಲ ವಾಹನದಟ್ಟನೆ ನಿರ್ಮಾಣವಾಯಿತು. ಈ ಸಂದರ್ಭ ಪೊಲೀಸರು ಸೂಕ್ತ ಕ್ರಮ ಕೈಗೊಂಡು ವ್ಯವಸ್ಥೆ ಕಲ್ಪಿಸಿಕೊಟ್ಟರು.ಪ್ರತಿಭಟನೆಯಲ್ಲಿ ನಾಲ್ಕು ನಾಡು ವಿಭಾಗದ ಕೊಡವ ಸಮುದಾಯದ ಮುಖಂಡರುಗಳು, ಸಮುದಾಯ ಬಾಂಧವರು ಅಧಿಕ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.