ಮಹಾಲಿಂಗಪುರ: ಮನುಷ್ಯನ ಆಶೆಗೆ ಮಿತಿ ಇಲ್ಲ.ಎಲ್ಲವನ್ನೂ ಬಯಸುವ ಬಯಕೆಯೇ ಅತಿಯಾದ ಆಸೆ ಸಿಗದಿದ್ದರೆ ಹತಾಶೆ ಪಡುತ್ತಾನೆ. ಆದ್ದರಿಂದ ಅತಿಯಾದ ಆಸೆಯೇ ದುಃಖಕ್ಕೆ ಕಾರಣ ಎಂದು ಕೊಪ್ಪಳದ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಮಹಾಲಿಂಗಪುರ: ಮನುಷ್ಯನ ಆಶೆಗೆ ಮಿತಿ ಇಲ್ಲ.ಎಲ್ಲವನ್ನೂ ಬಯಸುವ ಬಯಕೆಯೇ ಅತಿಯಾದ ಆಸೆ ಸಿಗದಿದ್ದರೆ ಹತಾಶೆ ಪಡುತ್ತಾನೆ. ಆದ್ದರಿಂದ ಅತಿಯಾದ ಆಸೆಯೇ ದುಃಖಕ್ಕೆ ಕಾರಣ ಎಂದು ಕೊಪ್ಪಳದ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಕೆಎಲ್ಇ ಕಾಲೇಜು ಎದುರಿನ ಬಯಲು ಮೈದಾನದಲ್ಲಿ ನಡೆದ ಕೊನೆಯ ೯ನೇ ದಿನದ ಅಧ್ಯಾತ್ಮ ಪ್ರವಚನದಲ್ಲಿ ಮಾತನಾಡಿದ ಅವರು, ಸಂತೋಷ ಇರದಿದ್ದರೆ ಬದುಕಿಗೆ ಬೆಲೆ ಇರುತ್ತಿರಲಿಲ್ಲ. ನಮಗೆ ದುಃಖ ಇರಬಾರದು. ಸದಾ ಸಂತೋಷದಿಂದ ಇರುವುದೆ ಮೋಕ್ಷ. ದುಃಖದಿಂದ ಮುಕ್ತಿಯಾಗಿರುವುದೇ ಸಂತೋಷ. ಭೂತಾನದಲ್ಲಿ ಜನರು ಇರುವ ಸಂತೋಷದ ಮೇಲೆ ಅವರ ಜಿಡಿಪಿ ಅಳೆಯುತ್ತಾರೆ. ಒಂದು ದೇಶದ ಆರ್ಥಿಕತೆಯನ್ನು ಅಲ್ಲಿನ ದುಡ್ಡಿನ ಮೇಲಲ್ಲ. ಅಲ್ಲಿನ ಜನ ಎಷ್ಟು ಸಂತೋಷವಾಗಿದ್ದಾರೆ ಎನ್ನುವುದರ ಮೇಲೆ ಅಳೆಯುತ್ತಾರೆ. ಜಗತ್ತಿನಲ್ಲಿ ಸಂಪತ್ತು ದೊಡ್ಡದಲ್ಲ, ಸಂತೋಷ ದೊಡ್ಡದು. ತಟ್ಟೆ ನೋಡಿ ಬದುಕಬಾರದು. ರೊಟ್ಟಿ ನೋಡಿ ಬದುಕಬೇಕು. ಬದುಕು ತುಂಬಬೇಕಾದರೆ ಸಂತೋಷ ಇರಬೇಕು. ಈ ಮನುಷ್ಯನ ಮನಸ್ಸು ಯಾವುದೆ ವಿಷಯ ಪಡೆದುಕೊಂಡರೆ ಸಾಕು. ಬೇರೆ ವಿಷಯದ ಕಡೆಗೆ ಅದು ಜಿಗಿಯುತ್ತದೆ. ನಾನು ಇಚ್ಚಿಸುವುದೆಲ್ಲ ಈ ಜಗತ್ತಿನಲ್ಲಿ ಸಿಗುತ್ತದೆ ಎನ್ನುವುದು ಕೆಟ್ಟದ್ದು. ಬೇಕು ಎನ್ನುವ ಬಯಕೆಯಲ್ಲಿ ವಿಷದ ವೃಕ್ಷವೇ ಬೆಳೆದು ನಿಲ್ಲುತ್ತದೆ. ಅದಕ್ಕಾಗಿ ಆಶೆ ಬೇಡ. ಮನುಷ್ಯ ದುಡಿಯುತ್ತಿದ್ದರೆ ದೇಹ ಮತ್ತು ಮನಸ್ಸು ಆರೋಗ್ಯವಾಗಿರುತ್ತವೆ. ಬಳಕೆ ಮಾಡದ ದೇಹಕ್ಕೂ ಕೂಡ ಜಂಗ ಹಿಡಿಯುತ್ತದೆ. ಆಲಸ್ಯ ಮನುಷ್ಯನಿಗೆ ದೊಡ್ಡ ರೋಗ.ವಿದ್ಯಾರ್ಥಿಗಳು ಯಾವ ರೀತಿ ಓದಬೇಕು ಎಂದರೆ, ಒಂದು ದಿನ ಬೇರೆ ಪುಸ್ತಕದಲ್ಲಿ ಅವನ ಪೋಟೋ ಬರಬೇಕು ಆ ತರ ಓದಬೇಕು. ದುಡಿಯದೆ ಇರುವ ಮಗ ತಾಯಿಗೂ ಭಾರ, ಭೂಮಿಗೂ ಭಾರ, ಕೊನೆಗೆ ಸತ್ತಾಗ ಹೊರುವವರಿಗೂ ಭಾರ. ಮನುಷ್ಯ ಏನೆ ಕೆಲಸ ಮಾಡಲಿ ಅದನ್ನು ಸಂತೋಷ ಮತ್ತು ಪ್ರೀತಿಯಿಂದ ಮಾಡಿದಾಗ ಮಾತ್ರ ಸಫಲತೆ ಹೊಂದಲು ಸಾಧ್ಯ. ಪೂಜೆ ಮಾಡುವ ಕೈಗಳು ಎಷ್ಟು ಶ್ರೇಷ್ಠವೋ ಅಷ್ಟೆ ಮನೆಯಲ್ಲಿ ಕಾಯಕ ಮಾಡುವ ಕೈಗಳು ಪೂಜೆ ಮಾಡುವ ಕೈಗಳಿಗಿಂತ ಶ್ರೇಷ್ಠ ಎಂದರು.

೯ನೇ ದಿನದ ಸದ್ಭಾವನಾ ಪಾದಯಾತ್ರೆಯು ಸಮೀಪದ ರನ್ನ ಬೆಳಗಲಿಯಲ್ಲಿ ನಡೆಯಿತು. ಪಾದಯಾತ್ರೆಯಲ್ಲಿ ಅನೇಕ ಪೂಜ್ಯರು ಮತ್ತು ಪಟ್ಟಣದ ಸುತ್ತಮುತ್ತಲಿನ ಗ್ರಾಮದ ಸಾವಿರಾರು ಸದ್ಭಕ್ತರು ಭಾಗಿಯಾಗಿದ್ದರು.