ಪರಿಸರ ರಕ್ಷಿಸದಿದ್ದರೆ ಮಾನವನ ಅಳಿವು ನಿಶ್ಚಿತ: ಭಾಗ್ಯಜ್ಯೋತಿ

| Published : Jan 14 2024, 01:33 AM IST / Updated: Jan 14 2024, 03:31 PM IST

ಪರಿಸರ ರಕ್ಷಿಸದಿದ್ದರೆ ಮಾನವನ ಅಳಿವು ನಿಶ್ಚಿತ: ಭಾಗ್ಯಜ್ಯೋತಿ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಪರಿಸರವನ್ನು ರಕ್ಷಿಸದಿದ್ದರೆ ಮಾನವನ ಅಳಿವು ನಿಶ್ಚಿತ. ಸಕಲ ಜೀವರಾಶಿಗಳ ಉಳಿವಿಗಾಗಿ ಪರಿಸರ ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಮೈನ್ಸ್ ಅಧಿಕಾರಿ ಭಾಗ್ಯಜ್ಯೋತಿ ಹೇಳಿದರು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಮನುಷ್ಯ ತನ್ನ ಬುದ್ಧಿವಂತಿಕೆಯಿಂದ ಇಡೀ ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಪರಿಸರ ನಾಶದಿಂದಾಗಿ ಇಂದು ಅನೇಕ ಸಮಸ್ಯೆಗಳನ್ನು ನಾವೆಲ್ಲರೂ ಸಹ ಎದುರಿಸುತ್ತಿದ್ದೇವೆ. ಈ ಪರಿಸರವನ್ನು ರಕ್ಷಿಸದಿದ್ದರೆ ಮಾನವನ ಅಳಿವು ನಿಶ್ಚಿತ. ಸಕಲ ಜೀವರಾಶಿಗಳ ಉಳಿವಿಗಾಗಿ ಪರಿಸರ ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ವೇದಾಂತ ಮೈನ್ಸ್ ಅಧಿಕಾರಿ ಭಾಗ್ಯಜ್ಯೋತಿ ತಿಳಿಸಿದರು.

ಸಿರಿಗೆರೆ ಸಮೀಪದ ಕಡ್ಲೆಗುದ್ದು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಪ್ರೌಢಶಾಲೆಯಲ್ಲಿ ವೇದಾಂತ ಎಕೋ ಕ್ಲಬ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ನಮ್ಮ ನಡಿಗೆ ಪರಿಸರದ ಕಡೆಗೆ ಜಾಗೃತಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಶಿಕ್ಷಕ ಡಾ.ಮಹೇಶ್ ಮಾತನಾಡಿ, ವೇದಾಂತ ಎಕೋ ಕ್ಲಬ್ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಆಧುನಿಕ ಜೀವನ ಶೈಲಿಯನ್ನು ರೂಢಿಸಿಕೊಂಡ ಮಾನವ ಮುಂಜಾನೆಯ ಸೂರ್ಯೋದಯದ ಮನಮೋಹಕ ದೃಶ್ಯವನ್ನು ಹಕ್ಕಿಗಳ ಕಲರವವನ್ನು ಪರಿಸರ ರಮಣೀಯ ಸೊಬಗನ್ನು ಕಳೆದುಕೊಂಡಿದ್ದಾನೆ. 

ಶಾಲಾ ಮಕ್ಕಳಿಗೆ ಪರಿಸರದ ಸೊಬಗನ್ನು ಪರಿಸರದ ಜೀವರಾಶಿಗಳನ್ನು ಪರಿಚಯಿಸುವ ಸದುದ್ದೇಶದಿಂದ ನಮ್ಮ ನಡಿಗೆ ಪರಿಸರದ ಕಡೆಗೆ ಎನ್ನುವ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.

ಪರಿಸರ ಉಳಿಸೋಣ ಪರಿಸರ ಬೆಳೆಸೋಣ ಕಾಡು ಉಳಿಸಿ ನಾಡು ಬೆಳೆಸಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಮುಂತಾದ ಘೋಷಣೆಗಳೊಂದಿಗೆ ಶಾಲಾ ಆವರಣದಿಂದ ಸಿದ್ದನ ಗುಂಡಿಯ ಪುಣ್ಯಕ್ಷೇತ್ರದ ಕಡೆಗೆ ವಿದ್ಯಾರ್ಥಿಗಳು ಮುಂಜಾನೆಯ ಹಕ್ಕಿಗಳ ಕಲರವದೊಂದಿಗೆ ಪರಿಸರದ ಸೊಬಗನ್ನು ವೀಕ್ಷಿಸುತ್ತ ಹೆಜ್ಜೆ ಹಾಕಿದರು.

ಸಿದ್ದರಗುಂಡಿ ಪುಣ್ಯಕ್ಷೇತ್ರದಲ್ಲಿ ವಿದ್ಯಾರ್ಥಿಗಳು ವೀಕ್ಷಿಸಿದ ವಿವಿಧ ಮರ ಗಿಡಗಳು ಪಕ್ಷಿಗಳು ಮತ್ತು ಅವರ ಅನುಭವದ ಕುರಿತು ಪರಿಸರ ಸಂವಾದ ಚರ್ಚೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ನಟರಾಜ್ ನಾಗರಾಜ್ ಮಂಜಪ್ಪ ಕರಿಬಸಪ್ಪ ಹಾಗೂ ವೇದಾಂತ ಲಿಮಿಟೆಡ್ ನ ಮಂಜುನಾಥ್ ಅಭಿಷೇಕ್ ಹಾಜರಿದ್ದರು.