ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ನಗರ
ಮನುಷ್ಯನ ಆರೋಗ್ಯ ಕೆಡಲು ಆತ ನಿತ್ಯ ಸೇವಿಸುವ ಆಹಾರದ ಗುಣಮಟ್ಟ, ಸೋಮಾರಿತನ ಮತ್ತು ನಿರ್ಲಕ್ಷ್ಯ ಕಾರಣ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು ಹೇಳಿದರು.ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮತ್ರು ಪುರಸಭಾ ಕಾರ್ಯಾಲಯದ ಆಶ್ರಯದಲ್ಲಿ ನಡೆದ ವಿಶ್ವ ಆಹಾರ ಸುರಕ್ಷತಾ ದಿನಾಚರಣೆ ಕಾರ್ಯಕ್ರಮ ಮತ್ತು ಹೋಟೆಲ್ ಮಾಲೀಕರ ಸಂಘದ ಸಭೆಯಲ್ಲಿ ಅವರು ಮಾತನಾಡಿದರು.
ನಾವು ಆಹಾರ ಸೇವನೆ ಮಾಡುವುದು ಕೇವಲ ಹಸಿವು ನೀಗಿಸಲು ಅಲ್ಲ, ಜತೆಗೆ ಅದು ನಮ್ಮ ಆರೋಗ್ಯಕ್ಕೂ ಪೂರಕವಾಗಿರಬೇಕು, ಆದ್ದರಿಂದ ಈ ವಿಚಾರದಲ್ಲಿ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕೆಂದು ಸಲಹೆ ನೀಡಿದರು.ಹಸಿವಾದಾಗ ಮಾತ್ರ ಊಟ ಮಾಡಬೇಕು, ಅದನ್ನು ಹೊರತುಪಡಿಸಿ ಇತರರ ಬಲವಂತಕ್ಕೆ ಮತ್ತು ಸಿಕ್ಕ ಸಮಯದಲ್ಲಿ ಆಹಾರ ಸೇವಿಸಿದರೆ ಅದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದ್ದು, ಇದನ್ನು ಪ್ರತಿಯೊಬ್ಬರು ಅರಿಯಬೇಕೆಂದರು.
ಆಹಾರ ಸೇವನೆಯ ವಿಚಾರದಲ್ಲಿ ಸ್ವಚ್ಛತೆ ಅತ್ಯಂತ ಪ್ರಮುಖವಾಗಿದ್ದು, ಮನೆಯ ಜತೆಗೆ ಹೊರಗಡೆ ಹೋಟೆಲ್ ಗಳಲ್ಲಿ ಊಟ ಮಾಡುವಾಗ ಬಹಳ ಎಚ್ಚರಿಕೆ ವಹಿಸಿ ಶುಚಿತ್ವದ ಬಗ್ಗೆ ನೇರವಾಗಿ ಪ್ರಶ್ನಿಸಬೇಕೆಂದು ಕಿವಿಮಾತು ಹೇಳಿದರು.ಹೋಟೆಲ್ ಮಾಲೀಕರು ನಿಮ್ಮಲ್ಲಿಗೆ ಬರುವ ಗ್ರಾಹಕರಿಗೆ ಗುಣಮಟ್ಟದ ಆಹಾರ ನೀಡಿ, ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿಗಳು ಮಾರ್ಗದರ್ಶನ ಮಾಡಿದರು.
ಪುರಸಭೆ ಮುಖ್ಯಾಧಿಕಾರಿ ಡಾ. ಜಯಣ್ಣ ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕಾದರೆ ಎಲ್ಲರೂ ಉತ್ತಮ ಆಹಾರ ಸೇವನೆ ಮಾಡಿ ಆರೋಗ್ಯದಿಂದ ಇದ್ದು, ಈ ವಿಚಾರವನ್ನು ಮನಗಂಡು ಇತರರಲ್ಲಿಯೂ ಜಾಗೃತಿ ಮೂಡಿಸಬೇಕೆಂದರು.ಆಹಾರ ಸಂರಕ್ಷಾಣಾಧಿಕಾರಿ ಎಂ.ಸಂದೀಪ್ ಮಾತನಾಡಿ, ಗುಣಮಟ್ಟದ ಆಹಾರದ ಜತೆಗೆ ಕಡ್ಡಾಯವಾಗಿ ಶುದ್ದ ನೀರನ್ನು ಸೇವಿಸಿ ಎಂದು ತಿಳಿಸಿದರು. ಆಹಾರ ಸುರಕ್ಷತೆ ಮತ್ತು ಅದರ ಅನುಸರಣೆಯ ಬಗ್ಗೆ ಕಿರು ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಪ್ರಾತ್ಯಕ್ಷಿಕೆ ನೀಡಲಾಯಿತು.
ಸಾರ್ವಜನಿಕ ಹನುಮ ಜಯಂತಿ ಸಮಿತಿ ಅಧ್ಯಕ್ಷ ಯು. ಕೃಷ್ಣಭಟ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪರಮೇಶ್, ತಾಲೂಕು ಹಿರಿಯ ಅರೋಗ್ಯ ನಿರೀಕ್ಷಣಾಧಿಕಾರಿ ಕೆ.ವಿ.ರಮೇಶ್, ಆರೋಗ್ಯ ಶಿಕ್ಷಣಾಧಿಕಾರಿ ಸಿ.ಎಂ.ರೇಖಾ, ಟಿಎಪಿಸಿಎಂಎಸ್ ಕಾರ್ಯದರ್ಶಿ ಕೆ.ಸಿ.ಧರ್ಮರಾಜು, ಪುರಸಭೆ ಆರೋಗ್ಯ ನಿರೀಕ್ಷಕ ಎಚ್.ಎಸ್. ಲೋಕೇಶ್, ಆರೋಗ್ಯ ನಿರೀಕ್ಷಣಾಧಿಕಾರಿ ಎಚ್.ಜೆ.ಮಹೇಶ್, ಹೋಟೆಲ್ ಮಾಲೀಕರಾದ ವೈ.ಪಿ. ಮಹದೇವ್, ಮಂಜುನಾಥ್ ನಾಯ್ಡು, ನಟರಾಜು ಇದ್ದರು.