ಕನ್ನಡಪ್ರಭ ವಾರ್ತೆ ನಾಗಮಂಗಲ
ಕೃಷಿ ನಮ್ಮ ಜೀವಾಳ. ಧರ್ಮ ಮತ್ತು ಸಂಸ್ಕೃತಿಯನ್ನು ಬಿಟ್ಟ ಮನುಷ್ಯನ ಬದುಕಿಗೆ ಅಸ್ತಿತ್ವವಿಲ್ಲ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದ ನಂತರ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ವಿಜ್ಞಾನದಲ್ಲಿ ತಂತ್ರಜ್ಞಾನ ಇಲ್ಲವೆಂದರೂ ಮನುಷ್ಯ ಬದುಕಬಹುದು. ಆದರೆ, ಕೃಷಿ ಇಲ್ಲವೆಂದರೆ ಯಾರೊಬ್ಬರೂ ಬದುಕಲು ಸಾಧ್ಯವಿಲ್ಲ ಎಂದರು.
ರೈತರು ಮತ್ತು ವ್ಯವಸಾಯ ದೇಶದ ಮುಂದಿನ ಭವಿಷ್ಯವಾಗುತ್ತದೆ. ರೈತರು ಕೃಷಿಯನ್ನು ಪ್ರೋತ್ಸಾಹಿಸಿ ಅವಲಂಬಿಸಿಕೊಂಡು ಬದುಕಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಕೃಷಿ ಮಾಡಿದರೆ ಹೆಚ್ಚು ಲಾಭಗಳಿಸಬಹುದು ಎಂದರು.ಇಂದಿನ ಉನ್ನತ ವ್ಯಾಸಂಗಗಳು ಮುಂದಿನ ಐದತ್ತು ವರ್ಷಗಳಲ್ಲಿ ಯಾವುದೇ ಉದ್ಯೋಗ ಕೊಡುವುದಿಲ್ಲ. ಕೃತಕ ಬುದ್ಧಿಮತೆ(ಎಐ) ಬಂದು ಶೇ.90ರಷ್ಟು ಉದ್ಯೋಗ ಕಸಿದುಕೊಳ್ಳಲಿದೆ. ಕೃಷಿ ಕಾಯಕದಲ್ಲಿ ತೊಡಗಿರುವ ದೇಶದ ಶೇ.60ರಷ್ಟು ಜನರು ತಮಗಿರುವ ಜಮೀನನ್ನು ಉಳಿಸಿಕೊಂಡು ತಾಂತ್ರಿಕತೆಯೊಂದಿಗೆ ಕೃಷಿಯನ್ನೇ ಮುಂದುವರಿಸಿದರೆ ದೇಶದ ಭವಿಷ್ಯ ರೈತರದ್ದಾಗುತ್ತದೆ. ಹಾಗಾಗಿ ನಮ್ಮ ವಿದ್ಯಾಭ್ಯಾಸಕ್ಕಾಗಿ ಇರುವ ಜಮೀನನ್ನು ಮಾರಾಟ ಮಾಡದಂತೆ ವಿದ್ಯಾರ್ಥಿಗಳು ಪೋಷಕರಿಗೆ ಕಟ್ಟುನಿಟ್ಟಾಗಿ ಹೇಳಬೇಕು ಎಂದರು.
ಆರೋಗ್ಯವಂತ ಪ್ರಜೆಗಳಿರುವ ರಾಷ್ಟ್ರ ಆರೋಗ್ಯಕರವಾಗಿರುತ್ತದೆ. ಕೃಷಿ ಭೂಮಿಯ ಮಣ್ಣು ಆರೋಗ್ಯಕರವಾಗಿದ್ದರೆ ಪೌಷ್ಠಿಕಾಂಶಯುಕ್ತ ಉತ್ತಮ ಬೆಳೆ ಉತ್ಪಾದನೆಯಾಗುತ್ತದೆ. ಅಂತಹ ಉತ್ಪನ್ನಗಳನ್ನು ಸೇವಿಸುವ ಮನಷ್ಯನೂ ಕೂಡ ಆರೋಗ್ಯವಾಗಿರುತ್ತಾನೆ. ಅದಕ್ಕಾಗಿ ಇತ್ತೀಚಿಗೆ ನೈಸರ್ಗಿಕ ಮತ್ತು ಸಾವಯವ ಕೃಷಿ ಬಹುಮುಖ್ಯವಾಗಿದೆ ಎಂದರು.
ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕ ಉಪಯೋಗಿಸಿ ವ್ಯವಸಾಯ ಮಾಡುವುದರಿಂದ ಮಾಲಿನ್ಯ ಹೆಚ್ಚಾಗಿ ಭೂಮಿಯ ತಾಪಮಾನ, ವಾತಾವರಣ ಬದಲಾಗುತ್ತದೆ. ಈ ಕೃಷಿ ವಸ್ತು ಪ್ರದರ್ಶನದಲ್ಲಿ ವಿಜ್ಞಾನದ ಆವಿಷ್ಕಾರ ತಂತ್ರಜ್ಞಾನಗಳನ್ನು ಉಪಯೋಗಿಸುವ ವಿಜ್ಞಾನಿಗಳು, ತಂತ್ರಜ್ಞರು ಇರುತ್ತಾರೆ. ರೈತರು ಅವರಿಂದ ಮಾಹಿತಿ ಪಡೆದುಕೊಂಡು ತಂತ್ರಜ್ಞಾನದೊಂದಿಗೆ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕು ಎಂದರು.
ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳು ಮತ್ತು ವಿಜ್ಞಾನಿಗಳು ರೈತ ಸಮುದಾಯಕ್ಕೆ ಕೃಷಿಯಲ್ಲಿ ತಾಂತ್ರಿಕತೆ ಕುರಿತು ತರಬೇತಿ ನೀಡುತ್ತಿದ್ದಾರೆ. ಕೃಷಿ ಇಲಾಖೆ ಹಾಗೂ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.ಮಂಡ್ಯ ಕೃಷಿ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ಕೆ.ಎಂ.ಹರಿಣಿಕುಮಾರ್ ಮಾತನಾಡಿ, ಕೃಷಿಯಿಂದ ಕೈಗಾರಿಕೆ ಬೆಳವಣಿಗೆಯಾಗುತ್ತದೆ. 5 ಸಾವಿರ ಟನ್ ಕಬ್ಬು ಅರೆಯುವ ಒಂದು ಸಕ್ಕರೆ ಕಾರ್ಖಾನೆ ಸಾವಿರಾರು ಕುಟುಂಬಗಳಿಗೆ ನೆರವಾಗುತ್ತದೆ. ಮಾಲಿನ್ಯ ಕಡಿಮೆಯಾಗಬೇಕೆಂದರೆ ಕೃಷಿ ಹೆಚ್ಚಾಗಬೇಕು. ಮೌಲ್ಯವರ್ಧನೆಗೆ ಕೃಷಿ ಮತ್ತು ಕೈಗಾರಿಕೆಗಳ ಸಂಯೋಜನೆ ಬಹಳ ಮುಖ್ಯ ಎಂದರು.
ಶ್ರೀಮಠದ ಹೆಚ್ಚು ಭಕ್ತರು ಕೃಷಿಕರೇ ಆಗಿರುವುದರಿಂದ ಪ್ರತಿ ವರ್ಷ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಕೃಷಿ ಹಾಗೂ ಕೈಗಾರಿಕೆ ವಸ್ತು ಪ್ರದರ್ಶನ ಆಯೋಜಿಸಲಾಗುತ್ತಿದೆ. ಕೃಷಿ ಬಿಟ್ಟರೆ ಬದುಕಲು ಸಾಧ್ಯವಿಲ್ಲ ಎಂಬುದನ್ನು ಅರಿತಿರುವ ಶ್ರೀಗಳು ರೈತರು ಮತ್ತು ಮಕ್ಕಳಿಗೆ ಕೃಷಿ ಸಂಬಂಧಿತ ಕಾರ್ಯಕ್ರಮಗಳನ್ನು ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಶ್ರೀಮಠದ ಕಾರ್ಯವನ್ನು ಬಣ್ಣಿಸಿದರು.ರಾಜ್ಯ ಹೆಚ್ಚುವರಿ ಅಭಿಯೋಜಕ ಜಗದೀಶ್, ಅಮೆರಿಕಾದ ಯುವ ಉದ್ಯಮಿ ಆದಿತ್ಯ ಅನಿಲ್‌ರೆಡ್ಡಿ ಹಾಗೂ ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್ ಮಾತನಾಡಿದರು. ಮಾಯಸಂದ್ರದ ಆದಿಚುಂಚನಗಿರಿ ಕೃಷಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಶಿವಲಿಂಗೇಗೌಡ ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಕೃಷಿ ಹಾಗೂ ಕೈಗಾರಿಕಾ ವಸ್ತು ಪ್ರದರ್ಶನದ ಮಳಿಗೆಗಳನ್ನು ಉದ್ಘಾಟಿಸಿದ ಶ್ರೀಗಳು ಕೃಷಿ, ತೋಟಗಾರಿಕೆ, ಅರಣ್ಯ, ಗುಡಿ ಕೈಗಾರಿಕೆ, ಸಾವಯವ ಉತ್ಪನ್ನಗಳ ಮಳಿಗೆ ಸೇರಿದಂತೆ 120 ಕ್ಕೂ ಹೆಚ್ಚು ಮಳಿಗೆಗಳನ್ನು ಖುದ್ದು ವೀಕ್ಷಣೆ ಮಾಡಿ ಅಗತ್ಯ ಮಾಹಿತಿ ಪಡೆದುಕೊಂಡರು.ಕೃಷಿ ಇಲಾಖೆ ವತಿಯಿಂದ ನಿರ್ಮಿಸಿದ್ದ ಸಮಗ್ರ ಕೃಷಿ ಪದ್ಧತಿ, ಕೃಷಿಭಾಗ್ಯ, ಮಳೆ ನೀರು ಸಂಗ್ರಹಿಸುವ ಚೆಕ್‌ಡ್ಯಾಂ, ಕೃಷಿ ಹೊಂಡ ಸೇರಿದಂತೆ ಜಲಾನಯನ ಚಟುವಟಿಕೆಯ ಮಾದರಿ ಎಲ್ಲರ ಗಮನ ಸೆಳೆಯಿತು.
ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಶ್ರೀಮಠದ ಸಂವಿಧಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಸ್.ಎಂ.ಶ್ರೀಧರ, ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು, ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್, ಬೆಳ್ಳೂರು ಪೊಲೀಸ್ ಠಾಣೆ ಪಿಎಸ್‌ಐ ವೈ.ಎನ್.ರವಿಕುಮಾರ್, ಬಿಜಿಎಸ್ ಐಟಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಡಾ.ಶೃತಿ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಆರ್.ರೋಹಿತ್ ಸೇರಿದಂತೆ ಹಲವರು ಇದ್ದರು.