ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜೀವನದಲ್ಲಿ ಸೋಲು ಗೆಲುವುಗಳು ಬಂದಾಗ ಯಾರು ತುಂಬಾ ಪರಿಣಾಮಕಾರಿಯಾಗಿ ಎರಡನ್ನು ಸಮಚಿತ್ತದಿಂದ ತೆಗೆದುಕೊಳ್ಳುತ್ತಾರೋ ಅವರು ಉತ್ತಮ ಸಾಧಕರಾಗಲು ಸಾಧ್ಯ ಎಂದು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.ನಗರ ಹೊರವಲಯದ ಎಸ್ ಜೆ ಸಿ ತಾಂತ್ರಿಕ ಮಹಾವಿದ್ಯಾಲಯದ ಬಿ.ಜಿ.ಎಸ್ ಸ್ಟೇಡಿಯಂನಲ್ಲಿ ಶನಿವಾರ ಆಯೋಜಿಸಲಾಗಿದ್ದ 27ನೇ ರಾಜ್ಯ ಮಟ್ಟದ ಕ್ರೀಡಾಕೂಟ-2024ರ ಚುಂಚಾದ್ರಿ ಕ್ರೀಡೋತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಆರ್ಶಿವಚನ ನೀಡಿದರು.
ಸೋಲಿಗೆ ಹತಾಶರಾಗಬೇಡಿಯಾರು ಕ್ರೀಡೆಯಲ್ಲಿ ಸೋಲು-ಗೆಲುವುಗಳನ್ನು ಅನುಭವಿಸಿರುತ್ತಾರೋ ಅಂತಹವರು ಮಾತ್ರ ಜೀವನದ ಸೋಲನ್ನು ಎದುರಿಸಿ ನಿಭಾಯಿ ಗೆಲುವು ಕಾಣುತ್ತಾರೆ ಎಂದು ಒಂದು ಸಮೀಕ್ಷೆ ತಿಳಿಸಿದೆ. ಯಾರಿಗೆ ಆಗಲಿ ಗೆಲುವಿನ ಮದ ತಲೆಗೇರಬಾರದು. ಸೋಲಿನ ಹತಾಷೆ ಹೃದಯಕ್ಕಿಳಿಯಬಾರದು.ಗೆಲುವಿನ ಮದ ತಲೆಗೇರಿದವರು ಮತ್ತು ಸೋಲಿನ ಹತಾಷೆ ಹೃದಯಕ್ಕಿಳಿದವರು ಮುಂದಿನ ಸಾಧನೆ ಮಾಡಲಾರರು. ಜೀವನದಲ್ಲಿ ಎಲ್ಲವು ಗೆಲುವುಗಳಾಗುವುದಿಲ್ಲಾ, ಟೀಕೆ ಟಿಪ್ಪಣಿಗಳನ್ನು ಅರಿತು ಮತ್ತೆ ಮಾಡಿದ ತಪ್ಪನ್ನು ಮಾಡದೆ ಸಾಧನೆಯತ್ತ ಸಾಗಿದಲ್ಲಿ ಮಾತ್ರ ಜೀವನದ ಗುರಿ ತಲುಪಿ ಸಾಧಕರಾಗಲು ಸಾಧ್ಯ ಎಂದರು.
ದೇಶ ನಿರ್ಮಾಣಕ್ಕೆ ಕೈಜೋಡಿಸಿವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಳು ಏಕಾಗ್ರತೆಯಿಂದ ತೊಡಗಿಸಿಕೊಳ್ಳಬೇಕು. ಸಾಧನೆಯ ದಿಕ್ಕಿನಲ್ಲಿ ಕರೆದೊಯ್ಯುವ ವಿಷಯಗಳಿಗೆ ಹೆಚ್ಚು ಒತ್ತು ಕೊಡಬೇಕು. ಆ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಶ್ರದ್ದೆಯಿಂದ ಶ್ರಮ ಪಟ್ಟು ತಮ್ಮ ವಿದ್ಯಾಭ್ಯಾಸವನ್ನು ಪಡೆದರೆ ಅಂದು ಕೊಂಡಿದ್ದನ್ನು ಸಾಧಿಸಲು ಸಾಧ್ಯ. ಮಕ್ಕಳ ಭವಿಷ್ಯಕ್ಕಾಗಿ ತಂದೆ-ತಾಯಿಗಳು ತಮ್ಮ ಭವಿಷ್ಯ ವನ್ನು ಲೆಕ್ಕಿಸದೇ ಹೇಗೆ ದುಡಿಯುತ್ತಾರೊ, ಅದಕ್ಕೆ ಪ್ರತಿಯಾಗಿ ವಿದ್ಯಾರ್ಥಿಗಳು ತಮ್ಮ ಕರ್ತವ್ಯವನ್ನು ಚಾಚೂತಪ್ಪದೆ ಪಾಲಿಸ ಬೇಕು. ಇದರಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಅಲ್ಲದೇ ಪ್ರತಿಯೊಬ್ಬರೂ ಸದೃಢ ದೇಶ ನಿರ್ಮಾಣಕ್ಕೆ ಕೈಜೋಡಿಸಿದಂತೆ ಆಗಲಿದೆ ಎಂದರು.
ದೇಶದ ಮುಖ್ಯ ಸಂಪತ್ತಾದ ಮಾನವ ಸಂಪತ್ತನ್ನು ನಾವು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಸಮರ್ಥ ಮಾನವ ಸಂಪನ್ಮೂಲವೇ ದೇಶದ ಭವಿಷ್ಯವನ್ನು ರೂಪಿಸಲಿದೆ. ಹೀಗಾಗಿ ಪ್ರತಿಯೊಬ್ಬರೂ ಉದಾತ್ತ ವ್ಯಕ್ತಿಗ ಳನ್ನು ರೂಪಿಸಲು ಶ್ರಮ ವಹಿಸಬೇಕು. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಪೋಷಕರು ಎಲ್ಲರೂ ಸಮರ್ಥ ಮಾನವ ಸಂಪನ್ಮೂಲ ಸೃಷ್ಟಿಗೆ ಕಾಳಜಿ ವಹಿಸಬೇಕು ಎಂದು ತಿಳಿಸಿದರು.ಹಾಸನದಲ್ಲಿ ಕ್ರೀಡೋತ್ಸವ
ಇದೇ ವೇಳೆ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಪಾರಿತೋಷಕ ಮತ್ತು ಬಹುಮಾನಗಳನ್ನು ವಿತರಿಸಲಾಯಿತು. 28 ನೇ ಚುಂಚಾದ್ರಿ ಕ್ರೀಡೋತ್ಸವವನ್ನು ಹಾಸನದಲ್ಲಿ ಮುಂದಿನ ವರ್ಷ ನಡೆಸಲು ತೀರ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಕೆಎಸ್ ಎಸ್ ಐಡಿಸಿ ವ್ಯೆವಸ್ಥಾಪಕ ನಿರ್ದೇಶಕ ಹಾಗೂ ಐಸೆಸ್ ಅಧಿಕಾರಿ ಕ್ಯಾಪ್ಟನ್ ಡಾ.ಕೆ. ರಾಜೇಂದ್ರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ.ಮರಿಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮುನಿಕೆಂಪೇಗೌಡ, ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ,ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿ ಪುರುಷೋತ್ತಮನಂದನಾಥ ಸ್ವಾಮೀಜಿ, ಶಾಖಾ ಮಠದ ಕಾರ್ಯದರ್ಶೀ ಮಂಗಳಾನಾಥ ಸ್ವಾಮೀಜಿ,ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಮ್.ಎ ಶೇಖರ್ , ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಮುಖ್ಯ ನಿರ್ವಾಹಣಾಧಿಕಾರಿ ಡಾ.ಎನ್. ಶಿವರಾಮರೆಡ್ಡಿ ಮತ್ತಿತರರು ಇದ್ದರು.