ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ:ಮನುಷ್ಯ ಬದುಕಿನ ಹಕ್ಕುಗಳ ಮಹತ್ವವನ್ನು ಸಾರುವ ದಿನ ಮಾನವ ಹಕ್ಕುಗಳ ದಿನ. ೧೯೪೮ರಲ್ಲಿ ಡಿ.೧೦ರಂದು ವಿಶ್ವಸಂಸ್ಥೆಯು ಸಾಮಾನ್ಯ ಸಭೆಯಲ್ಲಿ ಮಾನವ ಹಕ್ಕುಗಳ ಕುರಿತು ಸಾರ್ವತ್ರಿಕ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಡಿ.೧೦ ರಂದು ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತಿದೆ ಎಂದು ಬಿಎಲ್‌ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಮಾಜಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ.ಯಲ್ಲಪ್ಪ ನಾಯಕ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ರಾಜ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಶ್ವಸಂಸ್ಥೆಯು ಮಾನವ ಹಕ್ಕುಗಳ ಘೋಷಣೆಯಲ್ಲಿ ೩೦ಕ್ಕೂ ಹೆಚ್ಚು ಹಕ್ಕುಗಳನ್ನು ನೀಡಿದೆ. ಈ ಹಕ್ಕುಗಳು ವ್ಯಕ್ತಿಯ ವೈಯಕ್ತಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಎನ್.ಬಿ.ಹೊಸಮನಿ ಮಾತನಾಡಿ, ಮಕ್ಕಳ ಹಕ್ಕುಗಳ, ಶೋಷಿತ ಜನಾಂಗದ ಹಕ್ಕುಗಳ ಹಾಗೂ ವಯೋವೃದ್ಧರ ಸಂರಕ್ಷಣೆಯ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಲೀಲಾವತಿ.ಸಿ., ರೆಹನ ಬಾಗವಾನ, ಗೀತಾ ಬೆಳ್ಳುಂಡಗಿ, ಡಾ.ವೀಣಾ ಕಡಕೋಳ, ಶೀಲಾ ರಾಮತೀರ್ಥ, ಡಾ.ಪೂಜಾರಿ ಇದ್ದರು. ಲಕ್ಷ್ಮೀ ಬಿರಾದಾರ ಸ್ವಾಗತಿಸಿ, ನಿರೂಪಿಸಿದರು. ಅನ್ನಪೂರ್ಣ ಬಾಗೇವಾಡಿ ವಂದಿಸಿದರು.