ಸಾರಾಂಶ
ಹುಬ್ಬಳ್ಳಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ರೌಡಿಶೀಟರ್ ಮದನ್ ಬುಗಡಿಯನ್ನು ಮಾನವ ಹಕ್ಕು ಆಯೋಗದ ಅಧಿಕಾರಿ ಎಂದು ವಿಡಿಯೋ ಒಂದರಲ್ಲಿ ಗಿರೀಶ್ ಮಟ್ಟೆನವರ್ಪ ರಿಚಯಿಸಿದ್ದು, ಆ ವ್ಯಕ್ತಿ ಮಾನವ ಹಕ್ಕುಗಳ ಅಧಿಕಾರಿಯಲ್ಲ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದರು.
ನಗರದಲ್ಲಿ ಸೋಮವಾರ ರೌಡಿಶೀಟರ್‌ಗಳ ಪರೇಡ್ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಅವರು ಮಾತನಾಡಿದರು.ಧರ್ಮಸ್ಥಳ ಪ್ರಕರಣ ಕುರಿತಾಗಿ ವಿಡಿಯೋ ನೋಡಿದ್ದೇನೆ. ಈ ವ್ಯಕ್ತಿಯನ್ನು ಮಾನವ ಹಕ್ಕು ಅಧಿಕಾರಿ ಎಂದು ಹೇಳಲಾಗಿದೆ. ಆತ ಮಾನವ ಹಕ್ಕು ಅಧಿಕಾರಿ ಅಲ್ಲ, ಅವನು ಹುಬ್ಬಳ್ಳಿಯ ರೌಡಿಶೀಟರ್ ಮದನ್ ಬುಗಡಿ. ಕಳೆದ ಡಿಸೆಂಬರ್‌ನಲ್ಲಿ ಮದನ್ ರೌಡಿ ಪರೇಡ್‌ನಲ್ಲಿ ಭಾಗಿಯಾಗಿದ್ದ. ಆತನ ವಿರುದ್ಧ ಕೊಲೆ ಸೇರಿ ಒಟ್ಟು 7 ಪ್ರಕರಣಗಳು ದಾಖಲಾಗಿವೆ.
ಹಳೆ ಹುಬ್ಬಳ್ಳಿಯಲ್ಲಿ 5, ಕೇಶ್ವಾಪುರದಲ್ಲಿ 1 ಹಾಗೂ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ 1 ಪ್ರಕರಣವಿದೆ. ಇವುಗಳನ್ನು ಹೊರತು ಪಡಿಸಿ ಬೇರೆ ಕಡೆ ಪ್ರಕರಣಗಳಿವೆಯೇ ಎಂದು ಮಾಹಿತಿ ಕಲೆ ಹಾಕುತ್ತಿದ್ದೇವೆ. ಈ ಹಿಂದೆ ನಮ್ಮ ಸಿಬ್ಬಂದಿ ರೌಡಿ ಶೀಟರ್ ಪರೇಡ್ ಮಾಡುವಾಗ ಆತನನ್ನು ಕರೆತಂದಿದ್ದರು. ಆ ವೇಳೆ ತನ್ನ ಮೇಲಿನ ರೌಡಿಶೀಟರ್ ತೆರವು ಮಾಡುವಂತೆ ಆತ ಅಧಿಕಾರಿಗಳೊಂದಿಗೆ ವಾಗ್ವಾದ ಮಾಡಿದ್ದ. ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದೇನೆ ಎಂದು ಅನುಚಿತವಾಗಿ ನಡೆದುಕೊಂಡಿದ್ದ. ಒಬ್ಬ ವ್ಯಕ್ತಿಯ ಚಟುವಟಿಕೆ ಗಮನಿಸಲು ನಾವು ರೌಡಿಶೀಟರ್ ಹಾಕಿರುತ್ತೇವೆ. ಅದನ್ನು ತೆರವುಗೊಳಿಸುವ ವಿವೇಚನೆ ಪೊಲೀಸರಿಗೆ ಬಿಟ್ಟಿದ್ದು. ವ್ಯಕ್ತಿಯ ವಿರುದ್ಧ ಪ್ರಕರಣಗಳು ಖುಲಾಸೆಯಾದರೂ ನಾವು ಆತನ ಮೇಲೆ ಅಪರಾಧಿಕ ಚಟುವಟಿಕೆಯಲ್ಲಿ ಭಾಗಿಯಾಗಿರುವ ಕುರಿತಂತೆ ನಿಗಾವಹಿಸಿರುತ್ತೇವೆ. ಪೊಲೀಸರಿಗೆ ಅಗತ್ಯವಿಲ್ಲ ಎಂದು ಕಂಡುಬಂದ ಮತ್ತು ಸುಧಾರಣೆಯಾದ ವ್ಯಕ್ತಿಯ ರೌಡಿಶೀಟರ್ ನಾವು ತೆರವುಗೊಳಿಸುತ್ತೇವೆ. ಆದರೆ, ಮದನ್ ಬುಗಡಿ ವಿಷಯದಲ್ಲಿ ನಮ್ಮ ಸಿಬ್ಬಂದಿ ನಿಗಾವಹಿಸಿದ್ದು, ರೌಡಿ ಶೀಟರ್ ತೆಗೆಯಲು ಹೇಳಿದ್ದೆ. ಆದರೆ, ಅಧಿಕಾರಿಗಳ ಪರಿಶೀಲನೆ ವೇಳೆ ಅಪರಾಧಿಕ ಚಟುವಟಿಕೆಯಲ್ಲಿ ಇದ್ದ ಕಾರಣದಿಂದ ರೌಡಿಶೀಟರ್ ಮುಂದುವರೆಸಿದ್ದಾರೆ.ಆತನ ವಿರುದ್ಧ ನಾವು ಕ್ರಮ ಕೈಗೊಳ್ಳುವಂತದ್ದಿಲ್ಲ. ಅಲ್ಲಿನ ಪೊಲೀಸರೂ ನಮ್ಮ ಅಧಿಕಾರಿಗಳ ಬಳಿ ಏನೂ ಮಾಹಿತಿ ಕೇಳಿಲ್ಲ. ಇದು ಬಹಳ ಗಂಭೀರವಾದ ವಿಷಯ. ಆತನ ಗುರುತಿನ ಚೀಟಿ ಸಹ ಪರಿಶೀಲನೆ ಮಾಡುತ್ತೇವೆ. ರೌಡಿಶೀಟರ್‌ಗಳು ಮಾನವ ಹಕ್ಕು ಅಧಿಕಾರಿ ಅಂತ ಹೇಳಿಕೊಳ್ಳುವುದು ಆಘಾತಕಾರಿ ವಿಷಯ. ಇಂತಹ ಹಿನ್ನೆಲೆ ಇರುವಂತವರು ದಲಿತ ಸಂಘಟನೆ ಹೆಸರು ಹೇಳಿಕೊಳ್ಳುತ್ತಾರೆ. ಮದನ್ ಅಂಬೇಡ್ಕರ್ ಭಾವಚಿತ್ರ ಇರುವ ಪೆನ್ ಜೇಬಲ್ಲಿ ಇಟ್ಟಿಕೊಂಡಿದ್ದ. ಹೀಗಾಗಿ ನಾನು ಆತನನ್ನು ಅಂದು ಬೈದಿದ್ದೆ ಎಂದರು.