ಸಾರಾಂಶ
ಯಲ್ಲಾಪುರ: ಭೂಮಿಯ ಇಂದಿನ ದಾರುಣ ಸ್ಥಿತಿಗೆ ಮನುಷ್ಯರ ವಿವೇಚನಾರಹಿತ ನಿರ್ಣಯಗಳೇ ಕಾರಣ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ತಿಳಿಸಿದರು.
ಜೂ. ೫ರಂದು ಪಟ್ಟಣದ ಹೋಲಿ ರೋಜರಿ ಪ್ರೌಢಶಾಲೆಯ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.ತಾನೊಬ್ಬನೇ ಬದುಕಬೇಕೆಂಬ ಸ್ವಾರ್ಥಬುದ್ಧಿ, ಉಳಿದ ಜೀವಿಗಳನ್ನು ಕೊಂದು, ಸಂಪೂರ್ಣ ನಿರ್ಮೂಲ ಮಾಡಿಯಾದರೂ ಸರಿ ತಾನು ಮಾತ್ರ ಭೋಗ ಜೀವನ ನಡೆಸಬೇಕಲ್ಲದೇ ಎಲ್ಲ ಬಗೆಯ ಐಷಾರಾಮಿ ಬದುಕನ್ನು ಹೊಂದಬೇಕೆಂಬ ಮಾನವನ ಜೀವನಶೈಲಿ ಇಂತಹ ಸ್ಥಿತಿಗೆ ಪ್ರಮುಖ ಕಾರಣವಾಗಿದೆ. ಈ ಬಗೆಯ ದುಃಸ್ಥಿತಿ ಮುಂದೊಂದು ದಿನ ಬರುತ್ತದೆ ಎಂದರಿತ ವಿಜ್ಞಾನಿಗಳು ವಿಶ್ವ ಶೃಂಗಸಭೆಯಲ್ಲಿ ನಿರ್ಣಯ ಮಾಡಿದಂತೆ ಪರಿಸರದ ಕುರಿತಾದ ಕಾಳಜಿ ಹಾಗೂ ಕ್ರಮಗಳನ್ನು ಅನುಸರಿಸಲು ಹಾಗೂ ಅವುಗಳನ್ನು ಪಾಲಿಸಲು ಪ್ರತಿವರ್ಷವೂ ಜೂ. 5ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ಪ್ರತಿ ಮಕ್ಕಳೂ ೧೦ ಗಿಡವನ್ನಾದರೂ ಮಳೆಗಾಲದ ಸಂದರ್ಭದಲ್ಲಿ ನೆಡಲು ಸಲಹೆ ನೀಡಿದರು. ಶಿಕ್ಷಣ ಸಂಯೋಜಕ ಪ್ರಶಾಂತ್ ಜಿ.ಎನ್. ಮಾತನಾಡಿದರು. ಈ ಸಂದರ್ಭದಲ್ಲಿ ಸಸ್ಯ ಸಂಜೀವಿನಿ ಇಕೋ ಕ್ಲಬ್ ಹಾಗೂ ವಿಜ್ಞಾನ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.ಮುಖ್ಯಾಧ್ಯಾಪಕ ಫಾದರ್ ರೇಮಂಡ್ ಫರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಶಿಕ್ಷಕರಾದ ಚಂದ್ರಶೇಖರ್, ಜಗದೀಶ್ ಭಟ್ಟ, ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಂಚಾಲಕ ಎಂ. ರಾಜಶೇಖರ್, ನೆಲ್ಸನ್, ಇಕೋ ಕ್ಲಬ್ ಸಂಚಾಲಕ ವೆಂಕಟರಮಣ ಭಟ್ಟ ವೇದಿಕೆಯಲ್ಲಿದ್ದರು. ವಿಜ್ಞಾನ ಸಂಘದ ಅಧ್ಯಕ್ಷೆ ಅಮೃತಾ ಬೇಕಣಿ ನಿರ್ವಹಿಸಿದರು. ದೀಪಿಕಾ ಮರಾಠಿ ಹಾಗೂ ಸಂಗಡಿಗರು ಪರಿಸರ ಗೀತೆ ಹಾಡಿದರು. ಸ್ಪರ್ಧಾವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.