ಬುದ್ಧ, ಏಸು, ಪೈಗಂಬರ್, ಶ್ರೀಕೃಷ್ಣ ಇವರೆಲ್ಲ ಪ್ರತಿಪಾದಿಸಿದ್ದು ಮಾನವತ್ವವನ್ನೇ ಹೊರತು ಮೌಢ್ಯವನ್ನಲ್ಲ. ಇಂದಿನ ಮಕ್ಕಳಿಗೆ ಸರ್ವ ಧರ್ಮಗಳ ಮೂಲ ಸಾರವನ್ನು ತಿಳಿಸುವ ಕೆಲಸವಾಗಬೇಕಿದೆ. ಜನರು ಕೂಡ ಅದರಂತೆ ನಡೆಯಬೇಕು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ವಿಶ್ವದ ಎಲ್ಲಾ ಧರ್ಮಗಳು ಮಾನವೀಯ ಮೌಲ್ಯಗಳನ್ನು ಅನುಸರಿಸಿ ಸಾರ್ಥಕ ಬದುಕು ನಡೆಸುವಂತಹ ಪ್ರೇರೇಪಣೆ ನೀಡುತ್ತವೆ ಹೊರತು ದ್ವೇಷ, ಹಿಂಸೆಗೆ ಸಂದೇಶ ನೀಡುವುದಿಲ್ಲ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.ತಾಲೂಕಿನ ನೇರಲೆಕೆರೆ ಗ್ರಾಮದ ವಿಶ್ವ ಮೈತ್ರಿ ಬುದ್ಧ ವಿಹಾರ, ಬುದ್ಧ ಧಮ್ಮ ಜ್ಞಾನ ಕೇಂದ್ರದಲ್ಲಿ ಬೌದ್ಧ, ಅಂಬೇಡ್ಕರ್ ಮತ್ತು ಪ್ರಗತಿಪರ ಸಂಘಟನೆಗಳು ಹಾಗೂ ರಾಜ್ಯ ಸಮಾಜ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಸರ್ವ ಧರ್ಮ ಮಾನವ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಬುದ್ಧ, ಏಸು, ಪೈಗಂಬರ್, ಶ್ರೀಕೃಷ್ಣ ಇವರೆಲ್ಲ ಪ್ರತಿಪಾದಿಸಿದ್ದು ಮಾನವತ್ವವನ್ನೇ ಹೊರತು ಮೌಢ್ಯವನ್ನಲ್ಲ. ಇಂದಿನ ಮಕ್ಕಳಿಗೆ ಸರ್ವ ಧರ್ಮಗಳ ಮೂಲ ಸಾರವನ್ನು ತಿಳಿಸುವ ಕೆಲಸವಾಗಬೇಕಿದೆ. ಜನರು ಕೂಡ ಅದರಂತೆ ನಡೆಯಬೇಕು ಎಂದರು.ಬುದ್ಧ ಎಂದರೆ ಪರಿಪೂರ್ಣವಾಗಿ ಅರಳಿದ ಪ್ರಜ್ಞೆಯ ಸಂಕೇತ. ಮನುಷ್ಯ ಪೂರ್ಣ ಪ್ರಮಾಣದ ಜ್ಞಾನದ ಮೂಲಕ ಅರಳಿದರೆ ಆತನೂ ಬುದ್ಧನೆ. ಪರಿಪೂರ್ಣ ಜ್ಞಾನದ ಬೆಳಕನ್ನು ಕಂಡಾತನೇ ಬುದ್ಧ. ಆತ ಆಸೆ ಪಟ್ಟಿದ್ದರೆ ಚಕ್ರವರ್ತಿಯಾಗಬಹುದಿತ್ತು. ಆದರೆ, ಜ್ಞಾನೋದಯವಾದ ಮೇಲೆ ಆಸೆಯೇ ದುಃಖಕ್ಕೆ ಮೂಲ ಎಂಬುದನ್ನರಿತು ಉತ್ತಮ ಬದುಕಿಗೆ ಬೇಕಾದ ಸೂತ್ರಗಳಾದ ತ್ರಿಪೀಠಗಳು, ಪಂಚಶೀಲ ತತ್ವಗಳನ್ನು ವಿಶ್ವಕ್ಕೆ ತಿಳಿಸಿ ಬೆಳಕಾದರು ಎಂದರು.
ಕ್ರೈಸ್ತ ಧರ್ಮ ಗುರುಗಳಾದ ಆಂಡ್ರೂ ಜಾನ್ ಮಾತನಾಡಿ, ಬಹುತ್ವದ ದೇಶ ಭಾರತದಲ್ಲಿ ವಿವಿಧ ಆಚರಣೆಗಳ ಮೂಲಕ ನಾವೆಲ್ಲರು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ್ದೇವೆ. ಅದರಂತೆ ಭಗವಂತನ ಮಕ್ಕಳು. ಮಾನವೀಯ ಧರ್ಮವನ್ನು ನಾವು ಮೊದಲು ಸಾಧಿಸಬೇಕು ಎಂದರು.ಕೊಳ್ಳೇಗಾಲದ ಚೇತವನದ ಮನೋರಕ್ಕಿತ ಭಂತೆ ಆಶೀರ್ವಚನ ನೀಡಿದರು. ಧ್ಯಾನ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಬುದ್ಧನ ಮೂರ್ತಿಗೆ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಸೇರಿದಂತೆ ಅನೇಕ ಗಣ್ಯರು ಪುಷ್ಪಾರ್ಚನೆ ಮಾಡಿದರು. ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ, ಮುಸ್ಲಿಂ ಧರ್ಮದ ಮುಖಂಡರಾದ ಮೊಹಮ್ಮದ್ ಕುನ್ನಿ, ಸಿಖ್ ಧರ್ಮದ ಗುರುಬಚ್ಚನ್ ಸಿಂಗ್, ಜೈನ ಮುಖಂಡ, ವಕೀಲ ಎಂ.ಜೆ.ಜೈನ್, ವಕೀಲರ ಸಂಘದ ಅಧ್ಯಕ್ಷ ಸತ್ಯಾನಂದ, ಗಂಗರಾಜು, ಮುಖಂಡ ಸುರೇಶ್, ಪ್ರಶಾಂತ್, ಸತೀಶ್, ಸನ್ನದಾನಿ ಸೋಮನಹಳ್ಳಿ ಮತ್ತಿತರರು ಪಾಲ್ಗೊಂಡಿದ್ದರು.