ಸಾರಾಂಶ
ಕನ್ನಡಪ್ರಭ ವಾರ್ತೆ, ಶಿಕಾರಿಪುರ
ಸಂವಿಧಾನ ಮೂಲಕ ದೇಶಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಪ್ರತಿಷ್ಠಾಪಿಸುವ ಮೂಲಕ ಸಂವಿಧಾನ ಹಾಗೂ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಗೋವಿಂದ ಕಾರಜೋಳ ಹೇಳಿದರು.ತಾಲೂಕಿನ ಅಂಬ್ಳಿಗೊಳ್ಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ದೇಶದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನ ಮೂಲಕ ಸಮಪಾಲನ್ನು ನೀಡಿದ ಮಹಾನ್ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತ ಮಾತ್ರವಲ್ಲದೇ, ಜಗತ್ತಿನ ಗಮನ ಸೆಳೆದಿದೆ. ಅವರ ಸಮಸಮಾಜ ನಿರ್ಮಾಣದ ತತ್ವ- ಆದರ್ಶಗಳನ್ನು ಅಳವಡಿಸಿಕೊಂಡು ಬದುಕಿದಾಗ ಮಾತ್ರ ಸಂವಿಧಾನದ ಜತೆಗೆ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತಕ್ಕೆ ಸಂವಿಧಾನವನ್ನು ರಚಿಸಿ, ಆ ಮೂಲಕ ಪ್ರತಿಯೊಬ್ಬರಿಗೂ ಹಕ್ಕು ಜತೆಗೆ ಜವಾಬ್ದಾರಿ ನೀಡಿದ್ದಾರೆ. ಸಂವಿಧಾನ ನೀಡಿದ ಹಕ್ಕು ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಅರ್ಥೈಸಿಕೊಂಡು ಬದುಕನ್ನು ರೂಪಿಸಿಕೊಂಡಲ್ಲಿ ಮೇಲು-ಕೀಳು ಎಂಬ ಬೇಧವಿಲ್ಲದ ಸಮಸಮಾಜ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ಸಂವಿಧಾನಕ್ಕೆ ಗೌರವ ನೀಡಿದಲ್ಲಿ ಮಾತ್ರ ಮಹಾನ್ ನಾಯಕರ ಪುತ್ಥಳಿ ಅನಾವರಣ ಸಾರ್ಥಕವಾಗುತ್ತದೆ. ಅಂಬೇಡ್ಕರ್ ತತ್ವ -ಸಿದ್ಧಾಂತವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ದಿಸೆಯಲ್ಲಿ ಪುತ್ಥಳಿಯನ್ನು ನಿರ್ಮಿಸಿದ ಅಂಬ್ಳಿಗೊಳ್ಳ ಸರ್ಕಾರಿ ಶಾಲೆ ಶಿಕ್ಷಕ ಸಿಬ್ಬಂದಿ ಹಾಗೂ ಸಹಕರಿಸಿದ ಗ್ರಾಮಸ್ಥರ ಸಹಿತ ಪ್ರತಿಯೊಬ್ಬರೂ ಅಭಿನಂದನಾರ್ಹರು. ಈ ಮೂಲಕ ಸಮಾಜಮುಖಿ ಕಾರ್ಯ ಹೆಚ್ಚಳವಾಗಲಿ ಎಂದು ಆಶಿಸಿದರು.ಸಂಸದ ಬಿ.ವೈ. ರಾಘವೇಂದ್ರ ಶಾಲೆ ನೂತನ ಕೊಠಡಿ ಉದ್ಘಾಟಿಸಿ ಮಾತನಾಡಿ, ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸುವ ಮೂಲಕ ಗ್ರಾಮೀಣ ಪ್ರದೇಶದ ಜನರು ಹಾಗೂ ವಿಶೇಷವಾಗಿ ಶಾಲಾ ಮಕ್ಕಳಿಗೆ ಸಂವಿಧಾನಶಿಲ್ಪಿ ಅವರನ್ನು ಹೆಚ್ಚು ಸಮೀಪದಿಂದ ಪರಿಚಯ ನೀಡಿದಂತಾಗಿದೆ. ಇದು ಹೆಮ್ಮೆಯ ಸಂಗತಿ. ಅಂಬೇಡ್ಕರ್ ನೀಡಿದ ಸಂವಿಧಾನ ಫಲದಿಂದಾಗಿ ಎಲ್ಲ ವರ್ಗದ ಜನರು ಧರ್ಮ, ಜಾತಿ-ಭೇದವಿಲ್ಲದೇ ನೆಮ್ಮದಿಯಿಂದ ಬದುಕುವಂತಾಗಿದೆ. ಆ ಮಹಾನ್ ನಾಯಕನ ಸ್ಮರಣೆ ನಿರಂತರವಾಗಿರಲಿ ಎಂದರು.
ಮುಖ್ಯ ಅತಿಥಿ, ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕ ಡಾ.ಮೋಹನ್ ಚಂದ್ರಗುತ್ತಿ ಮಾತನಾಡಿ, ಅಂಬೇಡ್ಕರ್ ಸಂವಿಧಾನ ರಚಿಸದಿದ್ದಲ್ಲಿ ಇಂದು ನಾವು ಇಲ್ಲಿ ನಿಂತು ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಅನೇಕ ರಾಷ್ಟ್ರಗಳು ತಮ್ಮ ದೇಶಗಳ ಸಂವಿಧಾನ ರಚಿಸಲು ಅಂಬೇಡ್ಕರನ್ನು ಕರೆಸಿ, ತಮ್ಮ ದೇಶಕ್ಕೆ ಸಂವಿಧಾನ ರಚಿಸಲು ಮಾರ್ಗದರ್ಶನ ಪಡೆದಿರುವುದು ಡಾ.ಅಂಬೇಡ್ಕರ್ ಹಿರಿಮೆ ಎತ್ತಿತೋರಿಸುತ್ತದೆ ಎಂದರು.ಶಾಲೆ ಮುಖ್ಯಶಿಕ್ಷಕ ಬಿ.ಪಾಪಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಗ್ರಾಪಂ ಅಧ್ಯಕ್ಷ, ಸದಸ್ಯರು, ಗ್ರಾಮದ ಹಾಗೂ ಅಕ್ಕಪಕ್ಕದ ಹಳ್ಳಿಗಳ ಮುಖಂಡರು, ಪೋಷಕರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
- - - -1ಕೆಎಸ್.ಕೆಪಿ3:ಶಿಕಾರಿಪುರ ತಾಲೂಕಿನ ಅಂಬ್ಲಿಗೊಳ್ಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಷ್ಠಾಪಿಸಲಾದ ಅಂಬೇಡ್ಕರ್ ಅವರ ನೂತನ ಪುತ್ಥಳಿಯನ್ನು ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಗೋವಿಂದ ಕಾರಜೋಳ ಅನಾವರಣಗೊಳಿಸಿದರು.