ಮನುಷ್ಯರು ಆರೋಗ್ಯದತ್ತ ಗಮನಹರಿಸಬೇಕು: ಷಡಕ್ಷರಿ

| Published : Feb 19 2024, 01:31 AM IST

ಸಾರಾಂಶ

ಮನುಷ್ಯ ಹಣ, ಆಸ್ತಿಯನ್ನು ಸಂಪಾದನೆ ಮಾಡಬಹುದು ಆದರೆ ಆರೋಗ್ಯ ಸಂಪಾದನೆ ಮಾಡಲು ಸಾಧ್ಯವಿಲ್ಲದ್ದರಿಂದ ಅತಿಯಾದ ಹಣ, ಆಸ್ತಿಯ ವ್ಯಾಮೋಹಕ್ಕೆ ಒಳಗಾಗದೆ ಸದಾಕಾಲ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಮನುಷ್ಯ ಹಣ, ಆಸ್ತಿಯನ್ನು ಸಂಪಾದನೆ ಮಾಡಬಹುದು ಆದರೆ ಆರೋಗ್ಯ ಸಂಪಾದನೆ ಮಾಡಲು ಸಾಧ್ಯವಿಲ್ಲದ್ದರಿಂದ ಅತಿಯಾದ ಹಣ, ಆಸ್ತಿಯ ವ್ಯಾಮೋಹಕ್ಕೆ ಒಳಗಾಗದೆ ಸದಾಕಾಲ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.

ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ ವತಿಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಹಾಗೂ ಸರ್ಕಾರಿ ನೌಕರರಿಗೆ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಮನುಷ್ಯ ಆರೋಗ್ಯವಂತರಾಗಿದ್ದರೆ ಏನನ್ನಾದರೂ ಸಾಧನೆ ಮಾಡಬಹುದು. ಆದರೆ ಆರೋಗ್ಯದಲ್ಲಿ ಏರುಪೇರಾದರೆ ದಿನನಿತ್ಯದ ಬದುಕು ಸಾಗಿಸಲು ಬೇಸರವಾಗುತ್ತದೆ. ಒತ್ತಡದ ಜೀವನದಿಂದ ಅತಿ ಚಿಕ್ಕ ವಯಸ್ಸಿನಲ್ಲಿಯೇ ಶುಗರ್‌, ಬಿಪಿಯಂತ ಕಾಯಿಲೆಗಳು ಆವರಿಸಿಕೊಳ್ಳುತ್ತಿದ್ದು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಹೊಂದಬೇಕು. ಸರ್ಕಾರಿ ನೌಕರರ ಸಂಘ ಇಂತಹ ಅನೇಕ ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಉಚಿತ ಆರೋಗ್ಯ ಶಿಬಿರವನ್ನು ಗ್ರಾಮೀಣ ಹಾಗೂ ಹೋಬಳಿ ಮಟ್ಟದಲ್ಲಿ ಆಯೋಜಿಸಿ ಗ್ರಾಮೀಣರಿಗೂ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕೆಂದರು.

ಉಪವಿಭಾಗಾಧಿಕಾರಿ ಸಪ್ತಾಶ್ರೀ ಮಾತನಾಡಿ, ಸರ್ಕಾರಿ ನೌಕರರು ಸದಾ ಒತ್ತಡದ ಜೀವನ ನಡೆಸುವಂತಾಗಿದ್ದು ಇದರಿಂದ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸದ ಕಾರಣ ನಾನಾ ಕಾಯಿಲೆಗಳು ಬರುತ್ತಿದ್ದು ಆರೋಗ್ಯದ ಬಗ್ಗೆಯೂ ಗಮನಹರಿಸಬೇಕು. ಹಾಗೆಯೇ ಕ್ರೀಡೆಗಳಿಂದಲೂ ಮಾನಸಿ ಮತ್ತು ದೈಹಿಕವಾಗಿ ಆರೋಗ್ಯ ಕಾಪಾಡಿಕೊಳ್ಳಬುದಾಗಿದ್ದು ಕ್ರೀಡೆಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ಪಡೆದು ಜಿಲ್ಲೆ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಎಂದು ಶುಭ ಹಾರೈಸಿದರು.

ತಹಸೀಲ್ದಾರ್‌ ಪವನ್ ಕುಮಾರ್ ಮಾತನಾಡಿ, ಬದಲಾದ ಜೀವನ ಶೈಲಿ, ಆಹಾರ ಕ್ರಮ, ಪರಿಸರ ಮಾಲಿನ್ಯದಿಂದಾಗಿ ಆಧುನಿಕ ಜಗತ್ತು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದೆ. ಆದ್ದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ವ್ಯಾಯಾಮ, ಯೋಗ ಅನಿವಾರ್ಯವಾಗಿದ್ದು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಸಂಘದ ಎಚ್.ಈ. ರಮೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಆರೋಗ್ಯ ಭಾಗ್ಯಕ್ಕಿಂದ ಇನ್ಯಾವುದೇ ಭಾಗ್ಯ ಮನುಷ್ಯನಿಗಿಲ್ಲ. ಈ ನಿಟ್ಟಿನಲ್ಲಿ ನಮ್ಮ ಸಂಘದ ವತಿಯಿಂದ ನೌಕರರಿಗಾಗಿ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದೆ. ಒತ್ತಡ ಜೀವನ ನಡೆಸುತ್ತಿರುವ ನೌಕರರಿಗೆ ಈ ಶಿಬಿರ ಪ್ರಯೋಜಕಾರಿಯಾಗಲಿದೆ. ಅದೇ ರೀತಿ ಕ್ರೀಡಾಕೂಟವನ್ನು ಆಯೋಜಿಸಿದ್ದು ಭಾಗವಹಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಿವಕುಮಾರ್‌, ತಾಲೂಕು ಆರೋಗ್ಯಾಧಿಕಾರಿ ರವಿಕುಮಾರ್‌, ಸಿಡಿಪಿಒ ಅಶೋಕ್, ಕೈಗಾರಿಕಾ ಅಧಿಕಾರಿ ಪ್ರಸಾದ್, ಸಂಘದ ಕಾರ್ಯದರ್ಶಿ ಎಚ್.ಬಿ. ಕುಮಾರಸ್ವಾಮಿ ಸೇರಿದಂತೆ ಸಂಘದ ಎಲ್ಲಾ ಪದಾಧಿಕಾರಿಗಳು, ನಿವೃತ್ತ ನೌಕರರು, ಆರೋಗ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.

ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ, ಕಣ್ಣು, ಮೂಳೆ ತಪಾಸಣೆ ಮಾಡಲಾಯಿತು. ಹಾಗೆಯೇ ಕ್ರೀಡಾಕೂಟದಲ್ಲಿ ವಾಲಿಬಾಲ್, ಥ್ರೋಬಾಲ್, ಕಬ್ಬಡಿ, ಖೋ-ಖೋ, ಬಾಲ್‌ಬ್ಯಾಟ್‌ಮಿಟನ್, ಶಾಟ್‌ಪುಟ್, ಓಟಗಳ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.