ಸಾರಾಂಶ
ಕನ್ನಡಪಭ್ರ ವಾರ್ತೆ ಬೀದರ್
ಕಲಬುರಗಿ ನಗರಕ್ಕೆ ಹೊಂದಿಕೊಂಡಿರುವ ಕೊಟ್ಟನೂರ (ಡಿ) ಗ್ರಾಮದ ಡಾ. ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಅವಮಾನ ಮಾಡಿರುವ ಹಾಗೂ ಹುಮನಾಬಾದ್ ತಾಲೂಕಿನ ಹುಣಸಗೇರಾ ಗ್ರಾಮದಲ್ಲಿ ದಲಿತ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ಬುಧವಾರ ನಗರದಲ್ಲಿ ಬೃಹತ ಪ್ರತಿಭಟನೆ ನಡೆಸಲಾಯಿತು.ನಗರದ ಡಾ. ಅಂಬೇಡ್ಕರ್ ವೃತ್ತದಿಂದ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಸಂವಿಧಾನ ಸಂರಕ್ಷಣಾ ಸಮಿತಿಯ ಪ್ರಮುಖರ ಮುಂದಾಳತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪ್ರತಿಭಟನೆ ನಡೆಸಿ ಕೆಲ ಹೊತ್ತು ರಸ್ತೆ ತಡೆ ನಡೆಸಲಾಯಿತು.
ಈ ಕುರಿತು ಮುಖ್ಯಮಂತ್ರಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮೂಲಕ ಸಲ್ಲಿಸಿ, ಕಲಬುರಗಿ ಜಿಲ್ಲೆಯ ಕೊಟನೂರ (ಡಿ) ಗ್ರಾಮದಲ್ಲಿರುವ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಪ್ರತಿಮೆಗೆ ಸಮಾಜ ಘಾತುಕ ಶಕ್ತಿಗಳು ಅವಮಾನಗೊಳಿಸಿ ಮಾನವ ಕುಲಕ್ಕೆ ಅವಮಾನ ಮಾಡಿ ಸಂವಿಧಾನ ಶಿಲ್ಪಿಗೆ ಹಾಗೂ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.ದಲಿತ ಯುವಕನ ತಡೆದು ಜೈಶ್ರೀರಾಮ್ ಘೋಷಣೆಇದಲ್ಲದೇ ಹುಮನಾಬಾದ್ ತಾಲೂಕಿನ ಹುಣಸಗೇರಾ (ಟಿ) ಗ್ರಾಮದ ದಲಿತ ವಿದ್ಯಾರ್ಥಿಗೆ ಕೆಲವು ಕೋಮುವಾದಿ ಯುವಕರು ತಡೆದು ನಿಲ್ಲಿಸಿ ಮನ ಬಂದಂತೆ ಬೈದು ಒತ್ತಾಯಪೂರ್ವಕವಾಗಿ ಜೈ ಶ್ರೀರಾಮ ಘೋಷಣೆ ಕೂಗಲು ಒತ್ತಾಯ ಹಾಕಿರುತ್ತಾರೆ.
ಇಂತಹ ಪ್ರಕರಣಗಳು ದೇಶದಲ್ಲಿ ಮತ್ತೆ ಮರುಕಳಿಸದಂತೆ ಎಚ್ಚರ ವಹಿಸಿ ಈ ಕೃತ್ಯ ಎಸಗಿರುವ ದೇಶ ವಿರೋಧಿ ಕಿಡಿಗೇಡಿಗಳನ್ನು ಈ ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ದಲಿತ ಸಂಘಟನೆಗಳ ಒಕ್ಕೂಟ ವತಿಯಿಂದ ಈ ರಸ್ತೆ ತಡೆ ಚಳುವಳಿ ನಡೆಸಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕರಾದ ಮಾರುತಿ ಬೌದ್ದೆ, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಬಾಬು ಪಾಸ್ವಾನ್, ದಲಿತ ಹಿರಿಯ ಮುಖಂಡರಾದ ವಿಠಲದಾಸ ಪ್ಯಾಗೆ, ಸಂವಿಧಾನ ಸಂರಕ್ಷಣಾ ಸಮಿತಿ ಮಹಾಪ್ರಧಾನ ಕಾರ್ಯದರ್ಶಿ ಅನೀಲಕುಮಾರ ಬೆಲ್ದಾರ್, ಹುಮನಾಬಾದ್ ತಾಪಂ ಮಾಜಿ ಅಧ್ಯಕ್ಷ ರಮೇಶ ಡಾಕುಳಗಿ, ಡಿಎಸ್‌ಎಸ್ ರಾಜ್ಯ ಉಪಾಧ್ಯಕ್ಷರಾದ ರಾಜಕುಮಾರ ಮೂಲಭಾರತಿ, ದಲಿತ ಸೇನೆ ಜಿಲ್ಲಾಧ್ಯಕ್ಷ ಶ್ರೀಪತರಾವ ದೀನೆ, ಸಂವಿಧಾನ ಸಂರಕ್ಷಣಾ ಸಮಿತಿ ಗೌರವಾಧ್ಯಕ್ಷ ಅಮೃತರಾವ್ ಚಿಮಕೋಡೆ, ಭಾರತೀಯ ವಿದ್ಯಾರ್ಥಿ ಸಂಘದ ಜಿಲ್ಲಾಧ್ಯಕ್ಷ ಪ್ರದೀಪ ನಾಟೇಕರ್, ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಸಂದೀಪ ಕಾಂಟೆ, ರಾಷ್ಟ್ರೀಯ ದಲಿತ ಬ್ರಿಗೇಡ್ ಸಂಸ್ಥಾಪಕರಾದ ಅವಿನಾಶ ದೀನೆ, ಪ್ರಮುಖರಾದ ರಾಜು ಕಡ್ಯಾಳ, ಅಂಬಾದಾಸ ಗಾಯಕವಾಡ, ಶಿವಕುಮಾರ ನೀಲಿಕಟ್ಟಿ, ಬಾಬುರಾವ್ ಮಿಠಾರೆ, ಶಾಲಿವಾನ ಬಡಿಗೇರ, ರಾಹುಲ್ ಡಾಂಗೆ, ವಿವಿಧ ಸಮಾಜದ ಪ್ರಮುಖರು ಕೂಡ ರಸ್ತೆ ತಡೆ ಹಾಗೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.