ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸಗಿ
ಡಿ.27ರಂದು ನಡೆದ ಇಲ್ಲಿನ ಪಟ್ಟಣ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಕಾರ್ಯ ಶನಿವಾರ ಇಲ್ಲಿನ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಒಟ್ಟು 16 ವಾರ್ಡುಗಳ ಪೈಕಿ 14ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದು, 2 ವಾರ್ಡ್‌ಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.ಬೆಳಗ್ಗೆ 8 ಗಂಟೆಗೆ ಪ್ರಾರಂಭಿಸಿದ ಮತ ಎಣಿಕೆ ಕಾರ್ಯವು ಬೆಳಗ್ಗೆ 10 ಗಂಟೆ ವೇಳೆಗೆ ಸಂಪೂರ್ಣ ಫಲಿತಾಂಶ ಹೊರಬಿದಿತ್ತು. ಅಭ್ಯರ್ಥಿಗಳ ಜಯಭೇರಿ ಸಾಧಿಸುತ್ತಿದ್ದಂತೆ ಹೊರಗಡೆ ಇದ್ದ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಗುಲಾಲು ಎರಚಾಡಿ ಸಂಭ್ರಮಿಸಿದ್ದಾರೆ.
ಒಟ್ಟು 16 ಸ್ಥಾನಗಳಿಗೆ ಡಿ.27ರಂದು ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆಸಲಾಗಿತ್ತು. 16 ವಾರ್ಡ್ ಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಿ ಅಬ್ಬರದ ಪ್ರಚಾರವ ಮಾಡಿದ್ದರು.ಆದರೆ ಚುನಾವಣೆಯಲ್ಲಿ ಬಿಜೆಪಿ ಎರಡೇ ಸೀಟು ಗೆದ್ದು ಅಲ್ಪ ತೃಪ್ತಿ ಪಡುವಂತಾಗಿದೆ. ಇತ್ತ ಕಾಂಗ್ರೆಸ್ 14 ಸೀಟು ಗೆಲ್ಲುವ ಮೂಲಕ ಭಾರಿ ಬಹುಮತ ಸಾಧಿಸಿದೆ.
ಮೊದಲ ಬಾರಿಗೆ ಪಟ್ಟಣ ಪಂಚಾಯಿತಿ ಆಡಳಿತವು ಕಾಂಗ್ರೆಸ್ ಚುಕ್ಕಾಣಿ ಹಿಡಿದಿದೆ. ಕಾಂಗ್ರೆಸ್ ಆಡಳಿತದಲ್ಲಿನ ಗ್ಯಾರಂಟಿ ಯೋಜನೆ, ಅದಾಗ್ಯೂ ಸುರಪುರ ಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಸ್ಥಳೀಯ ಸಾರ್ವತ್ರಿಕ ಚುನಾವಣೆಯಲ್ಲಿ ಅಭ್ಯರ್ಥಿಗಳ ಪರವಾಗಿ ಅಬ್ಬರದ ಪ್ರಚಾರ ನಡೆಸಿ ಮತಯಾಚಿಸಿದ್ದರಿಂದಾಗಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಜನ ಮಣೆ ಹಾಕಿದ್ದಾರೆ.ಇನ್ನು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯಾ ಉಪಾಧ್ಯಕ್ಷ ನರಸಿಂಹನಾಯಕ (ರಾಜುಗೌಡ) ಕೂಡ ಸ್ಥಳೀಯವಾಗಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಒಮ್ಮೆ ಮಾತ್ರ ಭರ್ಜರಿ ಪ್ರಚಾರ ನಡೆಸಿದ್ದರು. ಬಿಜೆಪಿಯ ಸ್ಥಳೀಯ ಮುಖಂಡರ ಮೇಲೆ ಜವಾಬ್ದಾರಿ ಬಿಟ್ಟಿದರಿಂದಾಗಿ ಅಭ್ಯರ್ಥಿಗಳ ಗೆಲುವಿಗೆ ಫಲ ಲಭಿಸದೆ ಸ್ವಲ್ಪ ತೃಪ್ತಿ ಪಡುವಂತಾದರೂ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಭಾರಿ ಪೈಪೋಟಿಯು ಬಿಜೆಪಿ ನೀಡಿತು.
ಇನ್ನು 9 ಪಕ್ಷೇತರರಿಗೆ ಫಲ ಲಭಿಸದೆ ಇದ್ದರೂ ಗೆಲುವುಗಾಗಿ ತಮ್ಮ ವರ್ಚಸ್ಸಿನೊಂದಿಗೆ ಮತಗಳ ಪಡೆದು ತೃಪ್ತಿಪಟ್ಟಿದ್ದಾರೆ ಎಂದು ಹೇಳಲಾಗುತ್ತದೆ.ಗೆಲುವು ಸಾಧಿಸಿದ ಅಭ್ಯರ್ಥಿಗಳು1ನೇ ವಾರ್ಡ್-ಭೀಮವ್ವ ತಿಪ್ಪಣ್ಣ ಕಡಿಮನಿ (ಕಾಂಗ್ರೆಸ್), 2ನೇ-ಶಾಂತಪ್ಪ ನಂದಪ್ಪ (ಕಾಂಗ್ರೆಸ್), 3ನೇ-ರಾಜಶೇಖರ ಬಸವರಾಜ (ಬಿಜೆಪಿ), 4ನೇ ವಾರ್ಡ್-ಸಿದ್ದಪ್ಪ ಮುದಗಲ್ (ಕಾಂಗ್ರೆಸ್), 5ನೇ-ಮಲ್ಲಣ್ಣ ಸಾಬಣ್ಣ (ಬಿಜೆಪಿ), 6ನೇ-ಕಾಶೀಮಸಾಬ ಟೊಣ್ಣೂರು (ಕಾಂಗ್ರೆಸ್), 7ನೇ-ಶರಣು ಬೂದಿಹಾಳ (ಕಾಂಗ್ರೆಸ್), 8-ಶರಣು ದಂಡಿನ್ (ಕಾಂಗ್ರೆಸ್), 9-ಮಲ್ಲಣ್ಣ ಬಸಪ್ಪ (ಕಾಂಗ್ರೆಸ್), 10-ಅಬೇದ ಬೇಗಂ (ಕಾಂಗ್ರೆಸ್), 11-ಕಾಶೀಮಸಾಬ ಮಹಿಬೂಬಸಾಬ (ಕಾಂಗ್ರೆಸ್), 12-ಮರಲಿಂಗಪ್ಪ ಪಿಡಪ್ಪ (ಕಾಂಗ್ರೆಸ್), 13-ನಿಖಿತಾ ಗೂಳಪ್ಪ (ಕಾಂಗ್ರೆಸ್), 14-ಜಯಶ್ರೀ ರಮೇಶ ವಾಲಿ (ಕಾಂಗ್ರೆಸ್), 15-ಅನ್ನಮ್ಮ ಸಿದ್ದಣ್ಣ ಮಲಗಲದಿನ್ನಿ (ಕಾಂಗ್ರೆಸ್), 16-ತಿಪ್ಪಣ್ಣ ನಾಯ್ಕ ಹಣಮನಾಯ್ಕ (ಕಾಂಗ್ರೆಸ್) ಗೆಲುವು ಸಾಧಿಸಿದ್ದಾರೆ.