ಸಾರಾಂಶ
ಸಮೀಪದ ಕಲ್ಲೂರು ಗ್ರಾಮದ ಶ್ರೀಕಲ್ಲಿನಾಥೇಶ್ವರ ದೇವಸ್ಥಾನದ ಹುಂಡಿ ಹಣ ಕಳ್ಳತನವಾಗಿ ನಾಲ್ಕು ದಿನಗಳಾದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ.
ಕ್ರಮಕ್ಕೆ ಮುಂದಾಗದ ಅಧಿಕಾರಿಗಳು: ಗ್ರಾಮಸ್ಥರ ಆರೋಪ
ಕನ್ನಡಪ್ರಭ ವಾರ್ತೆ ಕುಕನೂರುಸಮೀಪದ ಕಲ್ಲೂರು ಗ್ರಾಮದ ಶ್ರೀಕಲ್ಲಿನಾಥೇಶ್ವರ ದೇವಸ್ಥಾನದ ಹುಂಡಿ ಹಣ ಕಳ್ಳತನವಾಗಿ ನಾಲ್ಕು ದಿನಗಳಾದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ ಎಂದು ಗ್ರಾಮಸ್ಥರು ಬುಧವಾರ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವಸ್ಥಾನ ಕಮಿಟಿ ಮಾಜಿ ಸದಸ್ಯ ಕಲ್ಲಿನಾಥಯ್ಯ ಜಾರಗಡ್ಡಿಮಠ, ಏ.೨೬ರಂದು ದೇವಸ್ಥಾನದ ಹುಂಡಿ ಹಣವನ್ನು ಕಳ್ಳತನ ಮಾಡಿದ್ದು, ಸುಮಾರು ₹೧ ಲಕ್ಷಕ್ಕಿಂತಲು ಅಧಿಕ ಹಣ ಕಳ್ಳತನವಾಗಿದೆ. ದೇವಸ್ಥಾನವು ಮುಜರಾಯಿ ಇಲಾಖೆಗೆ ಒಳಪಡುತ್ತದೆ. ವರ್ಷದಲ್ಲಿ 2 ಬಾರಿ ದೇವಸ್ಥಾನದ ಹುಂಡಿ ಹಣ ಎಣಿಕೆ ಮಾಡಲಾಗುತ್ತಿತ್ತು. ಸುಮಾರು ₹೬ ರಿಂದ ೭ಲಕ್ಷ ವರ್ಷಕ್ಕೆ ಜಮೆಯಾಗುತ್ತದೆ. ಇದನ್ನು ಗಮನಿಸಿದ ಕೆಲವು ಮುಖಂಡರು, ಕಳ್ಳರ ವೇಷದಲ್ಲಿ ಬಂದು ಹುಂಡಿಯ ಬೀಗ ತೆಗೆದು ಕಳ್ಳತನ ಮಾಡಿದ್ದಾರೆ. ಹುಂಡಿಯ ಬೀಗ ತಹಸೀಲ್ದಾರ್ ಬಳಿ ಇರುತ್ತದೆ. ಆದರೆ, ಒಂದು ನಕಲಿ ಬೀಗವನ್ನು ಯಾರು ಮಾಡಿಸಿಕೊಂಡು ಇಂತಹ ಕೃತ್ಯ ಎಸಗಿದ್ದಾರೆ. ಹುಂಡಿ ಹಣ ಕಳ್ಳತನವಾಗಿ 4 ದಿನಗಳಾದರೂ ತಹಸೀಲ್ದಾರ್, ದೇವಸ್ಥಾನದ ಕಮಿಟಿಯ ಅಧ್ಯಕ್ಷರು, ಸದಸ್ಯರು ಹಾಗೂ ಕಂದಾಯ ಇಲಾಖೆಯ ಅಧಿಕಾರಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.ತಹಸೀಲ್ದಾರ ಖಾತೆಯಲ್ಲಿ ದೇವಸ್ಥಾನದ ಹಣ ಸುಮಾರು ₹೧ ಕೋಟಿಗೂ ಹೆಚ್ಚು ಇದೆ. ಆದರೆ ದೇವಸ್ಥಾನದಲ್ಲಿ ಮೂಲಭೂತ ಸೌಕರ್ಯ ಒದಗಿಸಿಲ್ಲ. ಮಹಿಳೆಯರಿಗೆ ಶೌಚಾಲಯವಿಲ್ಲ, ಸ್ನಾನದ ಗೃಹ ಇಲ್ಲ, ದೇವಸ್ಥಾನಕ್ಕೆ ಸಿಸಿ ಕ್ಯಾಮೆರಾ ಇಲ್ಲ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಶುದ್ಧ ಕುಡಿವ ನೀರಿನ ವ್ಯವಸ್ಥೆ ಇಲ್ಲ. ಭದ್ರತೆಗೆ ಹೊಂ ಗಾರ್ಡ್ ಇಲ್ಲ. ಹೀಗಾಗಿ ಇಂತಹ ಸಮಸ್ಯೆಗಳು ಎದುರಾಗುತ್ತಿವೆ. ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ, ಕಳ್ಳತನಕ್ಕೆ ಪ್ರಚೋದನೆ ಕೊಟ್ಟವರ ಹೆಸರನ್ನು ಹೊರಗಡೆ ತರಬೇಕು ಎಂದು ಒತ್ತಾಯಿಸಿದರು.ಕರ್ನಾಟಕ ಸ್ವಾಭಿಮಾನಿ ವೇದಿಕೆಯ ರಾಜ್ಯಾಧ್ಯಕ್ಷ ಶಂಕರ ಹೂಗಾರ, ಗ್ರಾಪಂ ಅಧ್ಯಕ್ಷ ನಾಗಯ್ಯ ಗುರುಮಠ, ಮುಖಂಡರಾದ ಬಸವರಾಜ ಮ್ಯಾಗೇರಿ, ಸಣ್ಣನೀಲಪ್ಪ ತೊಂಡಿಹಾಳ, ಬಸವರಾಜ ತಳವಾರ, ಮಂಜುನಾಥ ಕುದರಿಮನಿ ಸೇರಿದಂತೆ ಅನೇಕರು ಇದ್ದರು.