ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸದುರ್ಗ
ತಾಲೂಕಿನ ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಹಾಲುರಾಮೇಶ್ವರ ಕ್ಷೇತ್ರದಲ್ಲಿರುವ ಗಂಗಮ್ಮನ ಗುಡಿಯ ಬೀಗ ಮುರಿದು ಹುಂಡಿ ಕದ್ದಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.ಹುಂಡಿ ಕದ್ದೊಯ್ದ ಕಳ್ಳರು ದೇವಾಲಯದಿಂದ ಸ್ವಲ್ಪದೂರದಲ್ಲಿ ಹಣ ತೆಗೆದುಕೊಂಡು ಹುಂಡಿಯನ್ನು ಬಿಸಾಡಿ ಹೊಗಿದ್ದಾರೆ. ಹುಂಡಿಯಲ್ಲಿ ಸುಮಾರು 70 ರಿಂದ 80 ಸಾವಿರ ಹಣ ಇದ್ದಿರಬಹುದೆಂದು ಅಂದಾಜಿಸಲಾಗಿದೆ.
ನೂತನ ದೇವಾಲಯ ನಿರ್ಮಾಣ ಹಂತದಲ್ಲಿದ್ದು, ಗರ್ಭಗುಡಿ ಮಾತ್ರ ನಿರ್ಮಿಸಲಾಗಿದೆ. ಪ್ರತಿದಿನ ಬೆಳಗ್ಗೆ ಹುಂಡಿಯನ್ನು ಗರ್ಭಗುಡಿಯ ಹೊರಬಾಗದಲ್ಲಿಟ್ಟು ರಾತ್ರಿ ಗರ್ಭಗುಡಿಯೊಳಗೆ ಇರಿಸಲಾಗುತ್ತದೆ ಎನ್ನಲಾಗಿದೆ.ಸಿಸಿ ಕ್ಯಾಮರ ಸರಿಪಡಿಸದೆ ನಿರ್ಲಕ್ಷ್ಯ:
ದೇವಸ್ಥಾನಕ್ಕೆ ಸಿಸಿ ಕ್ಯಾಮರ ಅಳವಡಿಸಿದ್ದರೂ ಅವುಗಳು ಕೆಟ್ಟು 6-7 ತಿಂಗಳಾದರೂ ಸರಿಪಡಿಸದೆ ಇರುವ ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಹಾಗೂ ಭಕ್ತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ದೇವಾಲಯ ಜನವಸತಿ ಪ್ರದೇಶದಿಂದ ಹೊರಗಿದ್ದು ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಪ್ರಸಿದ್ದಿ ಪಡೆದಿದೆ . ಈ ಹಿನ್ನಲೆ ಪ್ರತಿ ದಿನ ರಾಜ್ಯದ ನಾನಾ ಭಾಗಗಳಿಂದ ನೂರಾರು ಭಕ್ತರು ಬಂದು ಹೊಗುತ್ತಾರೆ ಅಲ್ಲದೆ ದೇವಾಲಯಕ್ಕೂ ಹೆಚ್ಚಿನ ಆದಾಯವಿದೆ ಈಗಿದ್ದರೂ ಮುಜರಾಯಿ ಇಲಾಕೆ ದೇವಾಲಯದ ಭದ್ರತೆಯ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ. ಕಳೆದ ವರ್ಷ ಕೂಡ ದೇವಾಲಯದಲ್ಲಿ ಕಳ್ಳತನವಾಗಿತ್ತು. ಈಗಿದ್ದರೂ ಎಚ್ಚೆತ್ತುಕೊಳ್ಳದೆ ನಿರ್ಲಕ್ಷ್ಯ ವಹಿಸಿರುವುದರಿಂದ ಪದೆ ಪದೆ ಕಳ್ಳತನ ನಡೆಸಲಾಗುತ್ತಿದೆ. ಅಲ್ಲದೆ ಕಳೆದ 25 ವರ್ಷಗಳ ಹಿಂದೆ ಈ ದೇವಾಲಯದ ಆವರಣದಲ್ಲಿದ್ದ ಕೊಟ್ಯಾಂತರ ರು. ಬೆಲೆ ಬಾಳುವ ಪಚ್ಚೆ ಕಲ್ಲಿನ ಬಸವಣ್ಣನ ಮೂರ್ತಿ ಕಳ್ಳತನವಾಗಿತ್ತು ಅದು ಇನ್ನೂ ಪತ್ತೆಯಾಗಿಲ್ಲ ಎಂದು ಅಸಮಾದಾನ ವ್ಯಕ್ತ ಪಡಿಸಿದ್ದಾರೆ.
ಈ ಕುರಿತು ಹೊಸದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಡಿವೈಎಸ್‌ಪಿ ಚೈತ್ರ, ಪಿಐ ತಿಮ್ಮಣ್ಣ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದರು.