ಹಂಡ್ಲಿ ಗ್ರಾಮ ಪಂಚಾಯಿತಿ ಮಕ್ಕಳ ಗ್ರಾಮಸಭೆ

| Published : Jan 21 2025, 12:36 AM IST

ಸಾರಾಂಶ

ಮಕ್ಕಳ ಗ್ರಾಮಸಭೆಗೆ ಹಂಡ್ಲಿ ಗ್ರಾ.ಪಂ ವ್ಯಾಪ್ತಿಗೆ ಒಳಪಟ್ಟ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಗ್ರಾ.ಪಂ ಪಿಡಿಒ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಸಮೀಪದ ಹಂಡ್ಲಿ ಗ್ರಾ.ಪಂ.ವ್ಯಾಪ್ತಿಯ ಮಕ್ಕಳ ಗ್ರಾಮಸಭೆ ಸೋಮವಾರ ಹಂಡ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಂಡ್ಲಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಕೆ. ಸೃಷ್ಟಿ ಮತ್ತು ಗ್ರಾ.ಪಂ. ಅಧ್ಯಕ್ಷೆ ಸುಧಾ ಈರೇಶ್ ಜಂಟಿ ಅಧ್ಯಕ್ಷತೆಯಲ್ಲಿ ನಡೆಯಿತು.

ಮಕ್ಕಳ ಗ್ರಾಮಸಭೆಗೆ ಹಂಡ್ಲಿ ಗ್ರಾ.ಪಂ.ವ್ಯಾಪ್ತಿಗೆ ಒಳಪಟ್ಟ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹಂಡ್ಲಿ ಪ್ರಾಥಮಿಕ ಶಾಲೆಗೆ ಉದ್ಯಾನವನ ನಿರ್ಮಿಸುವುದು ಶಾಲಾ ಕೊಠಡಿಗಳಿಗೆ ಸುಣ್ಣಸುಣ್ಣ ಬಣ್ಣ ಹೊಡೆಯುವುದು, ಶಾಲೆಗೆ ವಿಜ್ಞಾನ ಪ್ರಯೋಗಾಲಯದ ವ್ಯವಸ್ಥೆ ಮಾಡಿಕೊಡುವಂತೆ ವಿದ್ಯಾರ್ಥಿಗಳು ಸಭೆಯಲ್ಲಿ ಮನವಿ ಮಾಡಿದರು.

ಮೂದರಳ್ಳಿ ಶಾಲೆಯಲ್ಲಿ ಬಿಸಿಯೂಟ ಮಾಡಲು ಪ್ರತ್ಯೇಕ ಹಾಲ್ ನಿರ್ಮಿಸಿಕೊಡುವಂತೆ ವಿದ್ಯಾರ್ಥಿಯೊಬ್ಬ ಮನವಿ ಮಾಡಿದರು. ಕಿತ್ತೂರು ಶಾಲೆಯಲ್ಲಿ ನಿರ್ಮಿಸಿರುವ ಕುಡಿಯುವ ನೀರಿನ ಟ್ಯಾಂಕ್‍ನ್ನು ಸಂಬಂಧಿಸಿದ ಸ್ವಚ್ಛಗೊಳಿಸುವಂತೆ ವಿದ್ಯಾರ್ಥಿನಿ ಮನವಿ ಮಾಡಿದಳು. ಹಂಡ್ಲಿ ಪ್ರಾಥಮಿಕ ಶಾಲೆಯ ಗ್ರಂಥಾಲಯಕ್ಕೆ ಮತ್ತಷ್ಟು ಪುಸ್ತಕಗಳನ್ನು ಕೊಡಿಸುವಂತೆ ವಿದ್ಯಾರ್ಥಿನಿಯೊಬ್ಬಳು ಬೇಡಿಕೆ ಇಟ್ಟಳು. ಹಂಡ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಂಪ್ಯೂಟರ್ ವ್ಯವಸ್ಥೆ ಇದ್ದರೂ ಇಂಟರ್‍ನೆಟ್‌ ವ್ಯವಸ್ಥೆ ಇಲ್ಲ ಇದನ್ನು ಕಲ್ಪಿಸಿಕೊಡುವಂತೆ ಶಾಲಾ ವಿದ್ಯಾರ್ಥಿನಿ ಒತ್ತಾಯಿಸಿದಳು. ಹಂಡ್ಲಿ ಅಂಗನವಾಡಿ ಕೇಂದ್ರದ ಪುಟ್ಟ ಬಾಲಕನೊಬ್ಬ ತನ್ನದೆ ಮಾತಿನಲ್ಲಿ ನಮ್ಮ ಅಂಗನವಾಡಿಗೆ ಆಟ ಆಡಲು ಜಾರುಬಂಡಿ, ಜೋಕಾಲಿ ತಂದಿದ್ದಾರೆ. ಆದರೆ ಅದನ್ನು ಇನ್ನು ಜೋಡಿಸಿ ಅಳವಡಿಸಿಲ್ಲ. ನಮಗೆ ಈಗ ಅದರಲ್ಲಿ ಆಟ ಆಡಲು ಆಗುತ್ತಿಲ್ಲ ಎಂದು ಗಮನ ಸೆಳೆದ. ಸಭೆಯಲ್ಲಿ ಭಾಗವಹಿಸಿದ ಬಹಳಷ್ಟು ಮಕ್ಕಳು ತಮ್ಮ ಶಾಲೆಗೆ ರಾತ್ರಿ ವೇಳೆ ಯಾರೋ ಪ್ರವೇಶಿಸಿ ಶಾಲಾ ಆವರಣದಲ್ಲಿ ಮದ್ಯದ ಬಾಟಲಿ, ಸಿಗರೆಟ್ ಪ್ಯಾಕ್ ಮುಂತಾದ ತ್ಯಾಜ್ಯ ವಸ್ತುಗಳನ್ನು ಬಿಸಾಕಿ ಹೋಗುತ್ತಾರೆ. ಬೆಳಗ್ಗೆ ತ್ಯಾಜ್ಯವನ್ನು ನಾವು ಸ್ವಚ್ಛಗೊಳಿಸಬೇಕು. ಇಂಥವರನ್ನು ಪತ್ತೆ ಮಾಡಿ ಕ್ರಮ ಕೈಗೊಳುವಂತೆ ಮಕ್ಕಳು ಸಭೆಯಲ್ಲಿ ಒತ್ತಾಯಿಸಿದರು. ಮಕ್ಕಳ ಗ್ರಾಮಸಭೆಯಲ್ಲಿ ಶಾಲೆಯ ಸಮಸ್ಯೆ ಸೇರಿದಂತೆ ಶಾಲೆಗೆ ಪೀಠೋಪಕರಣ, ಕ್ರೀಡಾ ಸಾಮಾಗ್ರಿಗಳು ವ್ಯವಸ್ಥೆ ಮುಂತಾದವುಗಳ ಬೇಡಿಕೆಯನ್ನಿಟ್ಟರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿದ್ಯಾರ್ಥಿನಿ ಸೃಷ್ಟಿ, ಶಾಲೆಗಳಲ್ಲಿ ಹಲವಾರು ಸಮಸ್ಯೆಗಳಿರುತ್ತದೆ. ಮಕ್ಕಳ ಗ್ರಾಮಸಭೆಯಲ್ಲಿ ನಾವು ಇವುಗಳನ್ನು ಪ್ರಶ್ನಿಸುವುದರಿಂದ ನಮ್ಮ ಸಮಸ್ಯೆಗಳಿಗೆ ಸ್ವಲ್ಪಮಟ್ಟಿಗೆ ಪರಿಹಾರ ಸಿಗಬಹುದು. ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳಿಂದ ವ್ಯಕ್ತವಾದ ಬೇಡಿಕೆಗಳನ್ನು ನಮ್ಮ ಗ್ರಾ.ಪಂ.ಯ ಗಮನಕ್ಕೆ ತರುತ್ತೇನೆ ಎಂದರು.

ಗ್ರಾ.ಪಂ. ಪಿಡಿಒ ಹರೀಶ್‌ ಮಕ್ಕಳ ಗ್ರಾಮಸಭೆ ಮಹತ್ವ ಮತ್ತು ಮಕ್ಕಳ ಹಕ್ಕು ಕುರಿತು ಮಾಹಿತಿ ನೀಡಿದರು. ಗ್ರಾ.ಪಂ.ಅಧ್ಯಕ್ಷೆ ಸುಧಾ ಈರೇಶ್, ಸದಸ್ಯ ವೀರೇಂದ್ರಕುಮಾರ್ ಮಾತನಾಡಿದರು. ವೇದಿಕೆಯಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳಾದ ಸಾತ್ವಿಕ್, ಜೀವನ್, ನೂತನ್, ಪಾರ್ವತಿ ಗ್ರಾ.ಪಂ.ಸದಸ್ಯ ಬಸವರಾಜ್ ಹಾಜರಿದ್ದರು.

ಸಭೆಯಲ್ಲಿ ಗ್ರಾ.ಪಂ. ಕಾರ್ಯದರ್ಶಿ ಚಂದ್ರಶೇಖರ್, ಸಿಬ್ಬಂದಿ, ವಿವಿಧ ಶಾಲಾ ಶಿಕ್ಷಕರು, ಅಂಗನವಾಡಿ ಶಿಕ್ಷಕಿಯರು ಹಾಜರಿದ್ದರು.