ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಹಿಂಭಾಗದಲ್ಲಿ ಸುಮಾರು 60 ಎಕರೆಗೂ ಹೆಚ್ಚು ಜಾಗದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪನವರ 50 ವರ್ಷದ ರಾಜಕೀಯ ಬದುಕಿನ ನೆನಪಿಗಾಗಿ ಅಭಿಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಿರು ಬಿಸಿಲಿನ ನಡುವೆಯೂ ಭರದ ಸಿದ್ಧತೆಗಳು ಪೂರ್ಣಗೊಂಡಿದ್ದು ಕ್ಷಣಗಣನೆ ಆರಂಭವಾಗಿದೆ.

ರಮೇಶ್ ಬಿದರಕೆರೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಹಿಂಭಾಗದಲ್ಲಿ ಸುಮಾರು 60 ಎಕರೆಗೂ ಹೆಚ್ಚು ಜಾಗದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪನವರ 50 ವರ್ಷದ ರಾಜಕೀಯ ಬದುಕಿನ ನೆನಪಿಗಾಗಿ ಅಭಿಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಿರು ಬಿಸಿಲಿನ ನಡುವೆಯೂ ಭರದ ಸಿದ್ಧತೆಗಳು ಪೂರ್ಣಗೊಂಡಿದ್ದು ಕ್ಷಣಗಣನೆ ಆರಂಭವಾಗಿದೆ.

ನಾಡಿನ ವಿವಿಧ ಮಠಗಳ ಸ್ವಾಮೀಜಿಗಳಿಗೆ, ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರಿಗೆ ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಸಭಾಂಗಣ ವ್ಯವಸ್ಥೆ ಮಾಡಲಾಗಿದೆ. ಅಭಿಮಾನೋತ್ಸವ ಕಾರ್ಯಕ್ರಮಕ್ಕೆ 112 ಅಡಿ ಉದ್ದ ಹಾಗೂ 40 ಅಡಿ ಅಗಲ, ಹತ್ತು ಅಡಿ ಎತ್ತರದ ಬೃಹತ್ ವೇದಿಕೆ ನಿರ್ಮಿಸಲಾಗಿದೆ. 150ಕ್ಕೂ ಹೆಚ್ಚು ಕಾರ್ಮಿಕರ ಶ್ರಮದಿಂದ ಸುಂದರ ಹಾಗೂ ವಿಶಾಲವಾದ ವೇದಿಕೆ ತಯಾರಾಗಿದೆ. ಸುಮಾರು ಮೂವತ್ತಕ್ಕೂ ಹೆಚ್ಚು ಎಲ್‌ಇಡಿ ವಾಲ್‌ಗಳನ್ನು ಅಳವಡಿಸಿದ್ದು ಲಕ್ಷಕ್ಕೂ ಹೆಚ್ಚು ಆಸನದ ವ್ಯವಸ್ಥೆ ಮಾಡಿ ಸಾರ್ವಜನಿಕರಿಗೆ ಕಾರ್ಯಕ್ರಮ ವೀಕ್ಷಣೆಗೆ ಅನುವು ಮಾಡಿಕೊಡಲಾಗಿದೆ.

ಬೃಹತ್ ವೇದಿಕೆಯಲ್ಲಿ ಅತಿಥಿಗಳಿಗೆ ಮೊದಲ ಸಾಲಿನಲ್ಲಿ 25 ಮತ್ತು ಅವುಗಳ ಹಿಂಭಾಗ 25 ಆಸನಗಳನ್ನು ಹಾಕಲಾಗಿದೆ. ಸುಮಾರು ಹತ್ತು ಲಕ್ಷ ಜನ ಸೇರುವ ನಿರೀಕ್ಷೆ ಇದ್ದು ಬೆಂಗಳೂರು, ಚಿತ್ರದುರ್ಗ, ಮೈಸೂರು ಕಡೆಯ ಐದು ಕೌoಟರ್ ಗಳಲ್ಲಿ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರಿಗೆ ಅಡುಗೆ ತಯಾರಿ ಮಾಡಲಾಗುತ್ತಿದೆ. ಒಂದೊಂದು ಕೌoಟರ್‌ನಲ್ಲಿ ಅಡುಗೆ ಭಟ್ಟರು ಜತೆಗೆ ಸಹಾಯಕರು ಸೇರಿ ಸುಮಾರು 250ಕ್ಕೂ ಅಧಿಕ ಮಂದಿ ಅಡುಗೆ ತಯಾರಿಕೆಯಲ್ಲಿ ನಿರತರಾಗಿದ್ದಾರೆ.

ಐದು ಕೌoಟರ್ ಸೇರಿ ಸಾವಿರಾರು ಜನರು ಅಡುಗೆ ತಯಾರಿಕೆಗೆ ಕೆಲಸ ಮಾಡುತ್ತಿದ್ದಾರೆ.ಯಲಹಂಕ ಶಾಸಕ ವಿಶ್ವನಾಥ್, ಊಟದ ಉಸ್ತುವಾರಿ ವಹಿಸಿದ್ದು ಬರುವ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಚಿತ್ರದುರ್ಗದ ಸುತ್ತಮುತ್ತಲಿನ ಹಳ್ಳಿಗಳ ನೂರಾರು ಯುವಕರನ್ನು ಕೆಲಸಕ್ಕೆ ಪಡೆದು ಅಡುಗೆ, ಶಾಮಿಯಾನ, ಕುರ್ಚಿಗಳನ್ನು ಹಾಕಲಾಗುತ್ತಿದೆ.ಕಾರ್ಯಕ್ರಮಕ್ಕೆ ಬರುವ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಮೊಸರನ್ನ, ಪಲಾವ್ ಹಾಗೂ ಮೈಸೂರು ಪಾಕ್‌ ಊಟ ಕೊಡುವ ತಯಾರಿ ನಡೆದಿದ್ದು ರಾಶಿ ರಾಶಿ ತರಕಾರಿ ಗುಡ್ಡೆಗಳೇ ಕಂಡು ಬಂದವು.

ಕಾರ್ಯಕ್ರಮದ ಬಂದೋಬಸ್ತ್‌ಗಾಗಿ ಸುಮಾರು 2500 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದ್ದು ವ್ಯವಸ್ಥಿತ ಕಾರ್ಯಕ್ರಮ ಜರುಗಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ವೇದಿಕೆಯ ಬಳಿಯ ಮುಖ್ಯ ರಸ್ತೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಸ್ವಾಗತಕ್ಕೆ ಅದ್ದೂರಿ ತಯಾರಿ ನಡೆಸಲಾಗಿದೆ. ಕಾರ್ಯಕ್ರಮದ ಸ್ಥಳ ತಲುಪುವ ಮುಖ್ಯ ರಸ್ತೆಗಳಲ್ಲಿ ಸಾಲು ಸಾಲು ಫ್ಲೆಕ್ಸ್, ಕಟೌಟ್‌ಗಳನ್ನು ನಿಲ್ಲಿಸಲಾಗಿದೆ.

ಬಿರು ಬೇಸಗೆ ಧಗೆ ಹಿನ್ನೆಲೆ ಸುಮಾರು 30 ಕ್ಕೂ ಹೆಚ್ಚು ಹೆಲಿಕಾಪ್ಟರ್ ಫ್ಯಾನ್‌ಗಳನ್ನು ಅಳವಡಿಸಲಾಗಿದ್ದು ಒಂದೊಂದು ಫ್ಯಾನ್ ಸಹ ಸುಮಾರು 1500 ಇಂದ 2000 ಜನರಿಗೆ ಗಾಳಿ ಒದಗಿಸಲಿವೆ ಎನ್ನಲಾಗಿದೆ.