ಸಾರಾಂಶ
-ಬಡವರಿಗೆ ನಿವೇಶನ ನೀಡಲು ೧೨೨ಎಕರೆ ಜಾಗ ಗುರುತು: ಡಿಕೆಶಿ -ನಿವೇಶನ ರಹಿತರ ಅರ್ಜಿ ಪರಿಶೀಲನೆ: ಡಿಸಿಎಂಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಈಗಾಗಲೇ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಘೋಷಣೆ ಮಾಡಲಾಗಿದೆ. ಚನ್ನಪಟ್ಟಣ ತಾಲೂಕಿನಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸುಮಾರು ೨೨ಸಾವಿರ ಜನ ವಿವಿಧ ಸಮಸ್ಯೆಗಳ ಕುರಿತು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ೧೫ ಸಾವಿರ ಅರ್ಜಿಗಳು ನಿವೇಶನ ಹಾಗೂ ಮನೆಗಾಗಿ ಬಂದಿದೆ. ತಾಲೂಕಿನ ವಿವಿಧೆಡೆ ಈಗಾಗಲೇ ಸರ್ಕಾರದಿಂದ ೧೨೨ ಎಕರೆ ಸ್ಥಳ ಗುರುತಿಸಲಾಗಿದ್ದು, ಬಡವರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.ಚನ್ನಪಟ್ಟಣದ ಹನುಮಂತನಗರದ ಬಳಿ ಹಾಗೂ ಪಟ್ಲು ಗ್ರಾಮದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಜಮೀನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣದ ಅಭಿವೃದ್ಧಿಗೆ ೧೦೦ ಕೋಟಿ ವಿಶೇಷ ಅನುದಾನ ಮಂಜೂರು ಮಾಡಲು ಸಿಎಂ ಒಪ್ಪಿದ್ದಾರೆ. ಉಪಚುನಾವಣೆ ನಡೆಯುವ ಮೂರು ಕ್ಷೇತ್ರಗಳಿಗೂ ಹಣ ಮಂಜೂರು ಆಗಲಿದೆ. ಬಡವರಿಗೆ ಸೈಟ್ ನೀಡಲು ಎಲ್ಲ ಕ್ರಮ ಕೈಗೊಳ್ಳಲಾಗವುದು ಎಂದರು.
ನಾವು ಮಾತು ಕೊಟ್ಟರೆ ಅದನ್ನು ಉಳಿಸಿಕೊಳ್ಳುತ್ತೇವೆ. ನಾನು ಯಾರ ಬಗ್ಗೆಯೂ ದೂಷಣೆ ಮಾಡುವುದಿಲ್ಲ. ಅದರ ಅವಶ್ಯಕತೆಯೂ ನನಗಿಲ್ಲ. ಬಡವರಿಗೆ ಸಹಾಯ ಆಗಬೇಕು ಎಂಬುದು ನಮ್ಮ ಉದ್ದೇಶ. ಇದರಲ್ಲಿ ಪಕ್ಷ ಎಂಬುದು ಇಲ್ಲ. ಯಾರು ಅರ್ಹರೋ ಅವರ ಹೆಸರನ್ನು ನಾವೇ ಘೋಷಣೆ ಮಾಡುತ್ತೇವೆ. ಯಾರಾದರೂ ದೊಡ್ಡ ಮನೆ ಇರುವವರು ಅರ್ಜಿ ಸಲ್ಲಿಸಿದ್ದರೆ ತಕರಾರು ಸಹ ಸ್ವೀಕರಿಸುತ್ತೇವೆ. ಅವರವರ ಪಂಚಾಯಿತಿ ವ್ಯಾಪ್ತಿಯಲ್ಲೇ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು. ಎಲ್ಲೆಡೆ ಜಮೀನು ಗುರುತಿಸಲಾಗಿದೆ. ಪ್ರತಿಯೊಂದು ಮನೆ ಕುರಿತು ಅಧಿಕಾರಿಗಳು ಸರ್ವೆ ನಡೆಸಿದ್ದಾರೆ ಎಂದು ಹೇಳಿದರು.ಈಗಾಗಲೇ ಅರ್ಜಿಗಳನ್ನು ಪರಿಶೀಲನೆ ಮಾಡ್ತಾ ಇದ್ದೇವೆ. ಸುಳ್ಳು, ನಿಜ ಎಲ್ಲವನ್ನೂ ಅಧಿಕಾರಿಗಳು ಪರಿಶೀಲನೆ ಮಾಡಲಿದ್ದಾರೆ. ಈಗಲೂ ನಿವೇಶನಕ್ಕೆ ಅರ್ಜಿ ಸಲ್ಲಿಸುವವರ ಸಲ್ಲಿಸಬಹುದು. ಕನಕಪುರದಲ್ಲಿ ವಾರ್ಡ್‌ನಲ್ಲಿ ಕೂತು ನಿವೇಶನ ಹಂಚಿದ್ದೇವೆ. ಇಲ್ಲೂ ಸಹ ರಸ್ತೆ, ಅಂಗನವಾಡಿ ಶಾಲೆ, ದೇವಸ್ಥಾನ, ಎಲ್ಲವನ್ನು ಇಟ್ಟು ಹೊಸ ಪಟ್ಟಣ ಘೋಷಣೆ ಮಾಡ್ತೇವೆ. ಅಕ್ಕಪಕ್ಕದಲ್ಲಿರುವವರ ಜಮೀನು ಮಾರಾಟ ಮಾಡೋರಿದ್ರೇ ಒಳ್ಳೆ ಬೆಲೆಗೆ ಖರೀದಿ ಮಾಡ್ತೇವೆ ಎಂದರು.
ನಾವು ನುಡಿದಂತೆ ನಡೆಯುವ ಸರ್ಕಾರ. ನಾವು ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ. ಅದಕ್ಕಾಗಿಯೇ ನಾವು ಇಷ್ಟೆಲ್ಲ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.ಮೈಸೂರಿನ ಜನಾಂದೋಲನ ಸಮಾವೇಶದ ಪೋಸ್ಟರ್‌ನಲ್ಲಿ ಡಿಸಿಎಂ ಭಾವಚಿತ್ರ ಕಡೆಗಣನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ನಮ್ಮ ಮುಖ್ಯಮಂತ್ರಿಗಳು. ಅವರು ಹಿಂದುಳಿದ ವರ್ಗದ ನಾಯಕರು. ನಮ್ಮ ಸರ್ಕಾರದ ಮೇಲೆ ಆರೋಪ ಮಾಡ್ತಾ ಇದ್ದಾರೆ. ಅವರಿಗೆ ತೊಂದರೆ ಕೊಡಲು ಮಾಡುತ್ತಿದ್ದಾರೆ. ನಾನೇನ್ ಅವಶ್ಯಕತೆ ಇಲ್ಲ ಇಲ್ಲಿ. ನಾನೊಬ್ಬ ಅಧ್ಯಕ್ಷ, ಯಾವುದೇ ಸಮಸ್ಯೆ ಇಲ್ಲ. ನಮ್ಮ ಸಮಾವೇಶಕ್ಕೆ ಅವರು ಉತ್ತರ ನೀಡಲಿ. ನಮ್ಮ ಮೇಲೆ ಆರೋಪ ಮಾಡುತ್ತಾರಲ್ಲ. ಅವರು ಉತ್ತರ ಕೊಡಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಜು, ಕಾಂಗ್ರೆಸ್ ಮುಖಂಡ ದುಂತೂರು ವಿಶ್ವನಾಥ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ, ಅಪರ ಜಿಲ್ಲಾಧಿಕಾರಿ ಆರ್.ಚಂದ್ರಯ್ಯ, ತಹಸೀಲ್ದಾರ್ ನರಸಿಂಹಮೂರ್ತಿ, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಪ್ರಮೋದ್ ಇತರರಿದ್ದರು.ಸ್ಥಳ ಪರಿಶೀಲಿಸಿದ ಡಿಸಿಎಂ
ನಿವೇಶನರಹಿತರಿಗೆ ನಿವೇಶನ ನೀಡಲು ಡಿಸಿಎಂ ಡಿ.ಕೆ.ಶಿವಕುಮಾರ್ ಗುರುವಾರ ಜಮೀನುಗಳ ಪರಿಶೀಲನೆ ನಡೆಸಿದರು. ನಗರದ ಹನುಮಂತನಗರದ ಬಳಿಯ ಗಾರ್ಮೇಂಟ್ಸ್ ಹಿಂಭಾಗದಲ್ಲಿ ಇರುವ ಜಾಗ ಹಾಗೂ ತಾಲೂಕಿನ ಪಟ್ಲು ಗ್ರಾಮದಲ್ಲಿನ ಜಮೀನನ್ನು ಪರಿಶೀಲನೆ ನಡೆಸಿದರು. ಈ ವೇಳೆ ಅಲ್ಲಿ ಲಭ್ಯವಿರುವ ಜಾಗದ ವಿವರ, ನಕ್ಷೆ ಇತರ ಮಾಹಿತಿ ವೀಕ್ಷಿಸಿದ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.