ಚಾಮರಾಜನಗರದಲ್ಲಿ ಬಿರುಗಾಳಿ ಸಹಿತ ಮಳೆಗೆ ನೂರಾರು ಎಕರೆ ಬೆಳೆ ಹಾನಿ

| Published : Oct 04 2024, 01:08 AM IST

ಚಾಮರಾಜನಗರದಲ್ಲಿ ಬಿರುಗಾಳಿ ಸಹಿತ ಮಳೆಗೆ ನೂರಾರು ಎಕರೆ ಬೆಳೆ ಹಾನಿ
Share this Article
  • FB
  • TW
  • Linkdin
  • Email

ಸಾರಾಂಶ

ಗುರುವಾರ ಬೆಳಗ್ಗೆ ಮತ್ತು ಬುಧವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ರೈತರ ನೂರಾರು ಎಕರೆ ಮುಸಿಕಿನ ಜೋಳ, ಕಬ್ಬು, ಬಾಳೆ ಸೇರಿದಂತೆ ಅಪಾರ ಬೆಳೆಗಳು ನಷ್ಟವಾಗಿರುವ ಘಟನೆ ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ಜರುಗಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಗುರುವಾರ ಬೆಳಗ್ಗೆ ಮತ್ತು ಬುಧವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ರೈತರ ನೂರಾರು ಎಕರೆ ಮುಸಿಕಿನ ಜೋಳ, ಕಬ್ಬು, ಬಾಳೆ ಸೇರಿದಂತೆ ಅಪಾರ ಬೆಳೆಗಳು ನಷ್ಟವಾಗಿರುವ ಘಟನೆ ಜಿಲ್ಲಾ ವ್ಯಾಪ್ತಿಯಲ್ಲಿ ಜರುಗಿದೆ.ಜಿಲ್ಲಾ ವ್ಯಾಪ್ತಿಯ ದೇವರಹಳ್ಳಿ, ಮುಂಟಿಪಾಳ್ಯ, ಬೆಲ್ಲವತ್ತ, ಹೊಂಗನೂರು, ಶನಿವಾರ ಮುಂಟಿ ಸೇರಿದಂತೆ ಹಲವೆಡೆ ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗ್ಗೆ ಸುರಿದ ಧಾರಕಾರ ಮಳೆ ಮತ್ತು ಬಿರುಗಾಳಿಗೆ ರೈತರು ಕಷ್ಟಪಟ್ಟು ಬೆವರು ಸುರಿಸಿ ಬೆಳೆದಿದ್ದ ಬೆಳೆಗಳು ಮಕಾಡೆ ಮಲಗಿವೆ, ಬೇರು ಸಮೇತ ಜೋಳದ ಬೆಳೆ ಮತ್ತು ಬಾಳೆ ಬೆಳೆ ಬಿದ್ದ ಪರಿಣಾಮ ರೈತರು ಚಿಂತಾಕ್ರಾಂತವಾಗಿ ಕೂರುವ ಸ್ಥಿತಿ ಬಂದಿದೆ. ನಂಜುಂಡ, ಮಾದ ಬಸವ ಸೇರಿದಂತೆ ಅಪಾರ ಗಿರಿಜನ ರೈತರ ಬೆಳೆಗಳು ನಷ್ಟವಾಗಿರುವ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಈ ಸಂಬಂಧ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಸ್ಥಳಕ್ಕೆ ಭೇಟಿ ನೀಡುವ ಮೂಲಕ ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಕೋರಿದ್ದಾರೆ.

ಭತ್ತ ಪೈರಿಗೂ ನೀರು:

ರೈತರು ನಾಟಿ ಮಾಡಿದ್ದ ಹಾಗೂ ನಾಟಿ ಮಾಡಲು ಹರಡಲಾಗಿದ್ದ ಹತ್ತಾರು ಎಕರೆಯ ಭತ್ತದ ಪೈರಿಗೂ ಸಹಾ ನೀರು ನುಗ್ಗಿ ಭತ್ತದ ಪೈರು ನಾಶವಾಗಿವೆ. ಮಧುವನಹಳ್ಳಿ ಬೈಪಾಸ್ ರಸ್ತೆಯ ಜಮೀನಿಗೂ ನೀರು- ಧಾರಾಕಾರ ಮಳೆ ಹಿನ್ನೆಲೆ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಮಾರ್ಗವಾಗಿ ನೂತನವಾಗಿ ಸರ್ಕಾರ ರೂಪಿಸುವ ಬೈಪಾಸ್ ರಸ್ತೆಯ ಅವೈಜ್ಞಾನಿಕ ಕಾಮಗಾರಿ ಹಿನ್ನೆಲೆ ರೈತರು ನೂರಾರು ಎಕರೆ ಬೆಳೆಗಳಿಗೂ ಸಹಾ ನೀರು ನುಗ್ಗಿದ್ದು ರೈತರ ಬೆಳೆ ನಡುವೆಯೂ ಮೂರು, ನಾಲ್ಕು ಅಡಿಯಷ್ಟು ನೀರು ನಿಂತಿದ್ದು ರೈತರು ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿಶಾಪ ಹಾಕುತ್ತಿದ್ದ ಸನ್ನಿವೇಶ ಕಂಡು ಬಂತು.

ರೈತರು ಜಮೀನಿಗೆ ಬಂದು ವೀಕ್ಷಿಸಿ ತಮ್ಮ ಜಮೀನಿಗೆ ನೀರು ನುಗ್ಗಿ ಮಳೆಯ ನೀರು ಸರಿಯಾದ ಪ್ರಮಾಣದಲ್ಲಿ ಹೊರ ಹಾಕಲು ಅವಕಾಶವಿಲ್ಲದ ಹಿನ್ನೆಲೆ ರೈತರ ಬೆಳೆಗೂ ನೀರು ನುಗ್ಗಿ ಅಪಾರ ನಷ್ಟ ಅನುಭವಿಸುವಂತಾಗಿದ್ದು ಕಂದಾಯ ಇಲಾಖೆ ಇತ್ತ ಗಮನಹರಿಸಬೇಕು ಎಂದು ರೈತ ಸಿದ್ದೇಶ್ ಆಗ್ರಹಿಸಿದ್ದಾರೆ.