ನೂರಾರು ಎಕರೆ ಭತ್ತದಲ್ಲಿ ಮೊಳಕೆ

| Published : Oct 25 2025, 01:00 AM IST

ಸಾರಾಂಶ

ಮಳೆಗೆ ತಾಲೂಕಿನ ವಿವಿಧಡೆ ಕಟಾವಿಗೆ ಬಂದಿದ್ದ ಭತ್ತ ನೆಲಕ್ಕಚ್ಚಿ ಭತ್ತದಲ್ಲಿ ಮೊಳಕೆ ಬಂದಿದೆ.

ಕಂಪ್ಲಿ: ಕಳೆದ ಮೂರು ದಿನಗಳಿಂದ ಸುರಿದ ಗುಡುಗು ಸಿಡಿಲು ಸಹಿತ ಭಾರಿ ಮಳೆಗೆ ತಾಲೂಕಿನ ವಿವಿಧಡೆ ಕಟಾವಿಗೆ ಬಂದಿದ್ದ ಭತ್ತ ನೆಲಕ್ಕಚ್ಚಿ ಭತ್ತದಲ್ಲಿ ಮೊಳಕೆ ಬಂದಿದೆ. ವರುಣನ ಆರ್ಭಟಕ್ಕೆ ಅನ್ನದಾತರು ನಲುಗಿ ಹೋಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಪರಿಸ್ಥಿತಿ ರೈತರದ್ದಾಗಿದೆ.

12 ಎಕರೆ ಭೂಮಿಯನ್ನು ಗುತ್ತಿಗೆ ಪಡೆದು 1638 ತಳಿಯ ಭತ್ತ ಬೆಳೆದಿದ್ದು ಕೆಲ ದಿನದ ಹಿಂದೆ ಕೊಯ್ಲು ಆರಂಭಸಿದ್ದೆ ಇದ್ದಕ್ಕಿದ್ದಂತೆ ಮಳೆ ಶುರುವಾದ ಕಾರಣ ಕೊಯ್ಲು ನಿಲ್ಲಿಸಿದೆ. ಮೂರು ದಿನಗಳ ಮಳೆಗೆ ಭತ್ತ ನೆಲಕ್ಕೊರಗಿ ಮೊಳಕೆ ಒಡೆದಿದೆ. ಸಸಿನಾಟಿ, ಗೊಬ್ಬರ, ಕ್ರಿಮಿನಾಶಕ ಸಿಂಪಡಣೆ, ಕೃಷಿ ಕಾರ್ಮಿಕರ ವೆಚ್ಚ ಸೇರಿ ಎಕರೆಗೆ 40ಸಾವಿರ ರುಪಾಯಿ ಖರ್ಚಾಗಿದೆ. ಒಟ್ಟಾರೆ 12 ಎಕರೆಗೆ ₹4.80 ಲಕ್ಷದವರೆಗೂ ವ್ಯಯಿಸಿರುವೆ ಸದ್ಯ 4 ಎಕರೆಯಷ್ಟು ಮಾತ್ರ ಭತ್ತ ಕಟಾವು ಮಾಡಲಾಗಿದ್ದು ಉಳಿದ 8 ಎಕರೆಗಳಷ್ಟು ಭತ್ತ ಮಳೆಗೆ ನೆಲಕ್ಕೊರಗಿ ಮೊಳಕೆ ಬಂದಿದೆ. ಸಾಲ ಸೂಲಾ ಮಾಡಿ ಭೂಮಿ ತಾಯಿಯನ್ನು ನಂಬಿ ಭತ್ತ ಹಾಕಿದ್ದೆ, ಇಳುವರಿಯು ಅಂದುಕೊಂಡಂತೆ ಬಂದಿತ್ತು. ಇನ್ನೇನು ಕಟಾವು ಮಾಡಿ ಭತ್ತವನ್ನು ಮಾರಿ ಸಾಲ ಎಲ್ಲಾ ತೀರಿಸೋಣ ಅಂದುಕೊಂಡಿದ್ದೆ.ಅಷ್ಟರಲ್ಲಿ ಮಳೆ ಎಲ್ಲಾದನ್ನು ಕಸಿದುಕೊಂಡು ಬಿಡ್ತು. ಮಳೆರಾಯನ ಅಟ್ಟಹಾಸದ ಮುಂದೆ ನಾವೆಲ್ಲ ರೈತರು ನಲುಗಿಬಿಟ್ಟಿದ್ದೀವಿ. ಇನ್ನು ನಮಗೆ ಏನು ದಿಕ್ಕು ತೋಚದಂತಾಗಿದೆ. ಹಿಂಗೆ ಆದ್ರೆ ರೈತರು ಮಣ್ಣು ತಿನ್ನುವ ಪರಿಸ್ಥಿತಿ ಬರುತ್ತೆ ಎಂದು ಸಣಾಪುರ ಗ್ರಾಮದ ರೈತರಾದ ಕೆ.ಎಸ್.ದೊಡ್ಡ ಬಸಪ್ಪ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅಲ್ಲದೇ ಇದರ ಬಗ್ಗೆ ಸರ್ಕಾರ ಎಚ್ಚೆತ್ತು ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ನಿರಂತರ ಮಳೆಯಿಂದಾಗಿ ಸಣಾಪುರ ಭಾಗದಲ್ಲಿ 200ಎಕರೆಯಷ್ಟು ಭತ್ತ ಮೊಳಕೆ ಒಡೆದಿದೆ. ತಹಸೀಲ್ದಾರರು, ಕೃಷಿ ಅಧಿಕಾರಿಗಳು ಗಮನಹರಿಸಿ ಪರಿಹಾರ ಒದಗಿಸುವಲ್ಲಿ ಜಾಗೃತಿ ತೋರಬೇಕು ಎನ್ನುತ್ತಾರೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಬಳ್ಳಾರಿ ಜಿಲ್ಲಾಧ್ಯಕ್ಷ ಬಿ.ವಿ.ಗೌಡ.