ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು
ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣ, ವನ್ಯಜೀವಿಗಳ ದಾಳಿಯಿಂದ ಹಾನಿಯಾದ ಬೆಳೆಗಳಿಗೆ ಸೂಕ್ತ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತಸಂಘ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳು ಪ್ರತಿಭಟಿಸಿದರು.ಪಟ್ಟಣದಲ್ಲಿ ಶುಕ್ರವಾರ ಸಂವಿಧಾನ ವೃತ್ತದ ಬಳಿ ಸಂಘಟನೆಗಳ ನೂರಾರು ಕಾರ್ಯಕರ್ತರು ರಾಜ್ಯ ಸರ್ಕಾರವು ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ, ಘೋಷಣೆಗಳನ್ನು ಕೂಗಿ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು.
ಮೆರವಣಿಗೆ ಸಂವಿಧಾನ ವೃತ್ತದಿಂದ ಹೊರಟು ಬಸ್ ನಿಲ್ದಾಣದ ಕಲ್ಪತರು ವೃತ್ತವನ್ನು ಬಳಸಿ ಹಳೇ ಸೇತುವೆ ಮೂಲಕ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ (ಹುಲಿ ಯೋಜನೆ ಕಚೇರಿ) ಕಚೇರಿಯಲ್ಲಿ ಸಂಪನ್ನಗೊಳಿಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ ಮುಂದುವರೆಸಿದರು.ಮೇಲುಕೋಟೆ ಶಾಸಕ ಹಾಗೂ ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಿಸಲು ಅರಣ್ಯ ಇಲಾಖೆ ಪರಿಸರ ಪೂರಕ ಹೊಂದಿರುವ ಸಹಜ ಪರಿಹಾರೋಪಾಯಗಳನ್ನು ಅನುಸರಿಸಬೇಕು. ದೇಶದಲ್ಲಿ ಅರಣ್ಯ ಭೂಮಿ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಇದೆ ಮತ್ತು ವನ್ಯಜೀವಿಗಳ ಸಂರಕ್ದಣೆ ನಮ್ಮೆಲ್ಲರ ಜವಾಬ್ದಾರಿ ಎನ್ನುವುದು ನಮಗೂ ತಿಳಿದಿದೆ. ಆದರೆ ಸ್ಥಳೀಯವಾಗಿ ರೈತರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಸ್ಥಳೀಯ ಅಧಿಕಾರಿಗಳ ಮಟ್ಟದಲ್ಲೇ ಪರಿಹರಿಸಲು ಅವಕಾಶವಿದ್ದು, ಅಧಿಕಾರಿಗಳು ತಮ್ಮ ಬದ್ಧತೆಯನ್ನು ತೋರಬೇಕಿದೆ. ಆನೆ ದಾಳಿಯನ್ನು ನಿಯಂತ್ರಿಸಲು ಪರಿಸರಕ್ಕೆ ಪೂರಕವಾದ ಗಡಿಭಾಗಳಲ್ಲಿ ಜೇನುಕೃಷಿ ನಿರ್ವಹಣೆ, ಸೋಲಾರ್ ತಂತಿ ಬೇಲಿ ಮುಂತಾದ ಉಪಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು.
ದಾಳಿ ವೇಳೆ ಬೆಳೆ ಮತ್ತು ಜೀವ ಹಾನಿಗೆ ಸೂಕ್ತ ಪರಿಹಾರ ನೀಡುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಎಲ್ಲಕ್ಕೂ ಹಿರಿಯ ಅಧಿಕಾರಿಗಳ ಆದೇಶವನ್ನೇ ಕಾಯುವ ಬಲು ಸ್ಥಳೀಯವಾಗಿ ನೀವು ನಿಮ್ಮ ಕಟಿಬದ್ಧತೆಯನ್ನು ತೋರಬೇಕೆಂದು ಒತ್ತಾಯಿಸಿದರು.ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಇತ್ತೀಚೆಗೆ ರಾಜ್ಯ ಅರಣ್ಯ ಸಚಿವ ಈಶ್ವರಖಂಡ್ರೆ ಹೇಳಿಕೆ ನೀಡಿ, ಕಾಯಿಲೆಯಿಂದ ಬಳಲುತ್ತಿರುವ ಜಾನುವಾರುಗಳು ಮೇಯಲು ಅರಣ್ಯ ಪ್ರವೇಶಿಸಿದಲ್ಲಿ ವನ್ಯಜೀವಿಗಳಿಗೆ ಕಾಯಿಲೆ ತಗುಲುತ್ತದೆ. ಹಾಗಾಗಿ ಕಾಡಿನ ಭಾಗಗಳಲ್ಲಿ ಜಾನುವಾರುಗಳ ಮೇವಿಗೆ ಅವಕಾಶ ನೀಡಬಾರದೆಂದು ಸೂಚಿಸಿದ್ದಾರೆ. ಇದು ಮೂರ್ಖತನದ ಪರಮಾವಧಿ. ಜಾನುವಾರುಗಳು ಕಾಡಿನಲ್ಲಿ ಅಡ್ಡಾಡಿದರೆ ಕಾಡು ಇನ್ನಷ್ಟು ಫಲವತ್ತತೆ ಪಡೆಯುತ್ತದೆ ಎನ್ನುವ ಕನಿಷ್ಠ ಜ್ಞಾನ ಸಚಿವರಿಗಿಲ್ಲ. ಈ ಭಾಗದಲ್ಲಿ ಹುಲಿ ದಾಳಿಗೆ ರೈತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪ್ರಾಣ ಹಾನಿಯಾದಲ್ಲಿ ಪರಿಹಾರದ ಮೊತ್ತವನ್ನು 15 ಲಕ್ಷದಿಂದ 25 ಲಕ್ಷಕ್ಕೆ ಏರಿಸಬೇಕೆಂದು ಒತ್ತಾಯಿಸುತ್ತಿದ್ದೇವೆ. ಬೆಳೆ ಹಾನಿಯಾದಲ್ಲಿ ಸರ್ಕಾರ ವೈಜ್ಞಾನಿಕ ಬೆಲೆ ನೀಡುತ್ತಿಲ್ಲ, ಬದಲಾಗಿ ಭಿಕ್ಷಾ ಪರಿಹಾರ ನೀಡುತ್ತಿದೆ ಎಂದು ಲೇವಡಿ ಮಾಡಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿದರು. ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನೇತ್ರಾವತಿ, ಮುಖಂಡರಾದ ಅತ್ತಿಕುಪ್ಪೆ ರಾಮಕೃಷ್ಣ, ವಿ. ಬಸವರಾಜು ಕಲ್ಕುಣಿಕೆ, ಅಗ್ರಹಾರ ರಾಮೇಗೌಡ, ವಿಷಕಂಠಪ್ಪ, ಎಚ್.ಡಿ. ಕೋಟೆ ತಾಲೂಕು ಅಧ್ಯಕ್ಷ ಮಹದೇವನಾಯಕ, ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್. ಶ್ರೀಕಾಂತ್, ಚಿಕ್ಕಣ್ಣ, ಸಿ. ಚಂದ್ರೇಗೌಡ, ಶಿವಣ್ಣ, ರಾಜು ಸೇರಿದಂತೆ ಹುಣಸೂರು, ಎಚ್.ಡಿ. ಕೋಟೆ ತಾಲೂಕಿನ ರೈತಮುಖಂಡರು ಭಾಗವಹಿಸಿದ್ದರು.ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೀಮಾ, ಆ. 11 ರಂದು ರೈತಮುಖಂಡರೊಂದಿಗೆ ಸಭೆ ಆಯೋಜಿಸಿ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗೋಪಾಯಗಳ ಕುರಿತು ಚರ್ಚಿಸೋಣವೆಂದು ತಿಳಿಸಿದಾಗ, ರೈತರು ಸಹಮತ ವ್ಯಕ್ತಪಡಿಸಿ ಪ್ರತಿಭಟನೆ ಅಂತ್ಯಗೊಳಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))