ಅಡುಗೆ ಸಿಲಿಂಡರ್ ಕೆವೈಸಿಗೆ ನೂರಾರು ಗ್ರಾಹಕರು

| Published : Dec 24 2023, 01:45 AM IST

ಸಾರಾಂಶ

ಗ್ಯಾಸ್ ಸಬ್ಸಿಡಿ ಪಡೆಯಲು ಈ ತಿಂಗಳ ಅಂತ್ಯದೊಳಗಾಗಿ ಇಕೆವೈಸಿ ಮಾಡಬೇಕು. ಆಗದೇ ಇದ್ದರೆ ₹೧,೪೦೦ ಗೃಹ ಬಳಕೆಯ ಅಡುಗೆ ಸಿಲಿಂಡರ್‌ಗೆ ಪಾವತಿಸಬೇಕಾಗುತ್ತದೆ ಎಂದು ಹಬ್ಬಿದ ಸುದ್ದಿ

ಕಾರವಾರ: ಅಡುಗೆ ಸಿಲಿಂಡರ್ ಇಕೆವೈಸಿ ಮಾಡಿಸಲು ಡಿ. ೩೧ಕೊನೆಯ ದಿನಾಂಕವೆಂದು ಹಬ್ಬಿದ ಸುಳ್ಳು ಸುದ್ದಿಯಿಂದಾಗಿ ನೂರಾರು ಜನರು ನಗರದ ಗ್ಯಾಸ್ ಎಜೆನ್ಸಿ ಎದುರು ಶನಿವಾರ ಸಾಲುಗಟ್ಟಿ ನಿಂತಿದ್ದರು.

ಕೇಂದ್ರ ಸರ್ಕಾರ ಅಡುಗೆ ಸಿಲಿಂಡರ್ ಹೊಂದಿರುವವರು ಇಕೆವೈಸಿ ಮಾಡಿಸಿಕೊಳ್ಳಲು ಸೂಚನೆ ನೀಡಿದ್ದು, ಗ್ಯಾಸ್ ಸಬ್ಸಿಡಿ ಪಡೆಯಲು ಈ ತಿಂಗಳ ಅಂತ್ಯದೊಳಗಾಗಿ ಇಕೆವೈಸಿ ಮಾಡಬೇಕು. ಆಗದೇ ಇದ್ದರೆ ₹೧,೪೦೦ ಗೃಹ ಬಳಕೆಯ ಅಡುಗೆ ಸಿಲಿಂಡರ್‌ಗೆ ಪಾವತಿಸಬೇಕಾಗುತ್ತದೆ ಎಂದು ಹಬ್ಬಿದ ಸುದ್ದಿಯಿಂದಾಗಿ ಬೆಳ್ಳಂಬೆಳಗ್ಗೆ ಗ್ಯಾಸ್ ಏಜೆನ್ಸಿಯ ಮುಂದೆ ನೂರಾರು ಗ್ರಾಹಕರು ಜಮಾಯಿಸಿದ್ದರು.

ತಾಲೂಕಿನ ಗ್ರಾಮೀಣ ಭಾಗದಿಂದ ವೃದ್ಧರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇಕೆವೈಸಿಗೆ ನಗರದ ಗಾಂಧಿ ಬಝಾರ್‌ನಲ್ಲಿ ಇರುವ ಭಾರತ್ ಗ್ಯಾಸ್ ಎಜೆನ್ಸಿ ಕಚೇರಿಗೆ ಬಂದಿದ್ದು, ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸರದಿಯಲ್ಲಿ ನಿಂತು ಹೈರಾಣಾಗಿದ್ದರು.

ಕನ್ನಡಪ್ರಭದೊಂದಿಗೆ ಮಾತನಾಡಿದ ಆಹಾರ ಇಲಾಖೆ ಉಪ ನಿರ್ದೇಶಕ ಮಂಜುನಾಥ ರೇವಣಕರ, ಅಡುಗೆ ಸಿಲಿಂಡರ್ ಇವೈಕೆಸಿ ಮಾಡಿಸಲು ಸಮಯ ನಿಗದಿ ಮಾಡಿಲ್ಲ ಎಂದು ನೋಡೆಲ್ ಆಫೀಸರ್ ಹೇಳಿದ್ದಾರೆ. ಗ್ರಾಹಕರು ಎಜೆನ್ಸಿಗೆ ಬಂದು ಮಾಡಿಸಬೇಕಿಲ್ಲ. ಎಲ್‌ಪಿಜಿ ಕಂಪನಿಯ ಸೇಲ್ಸ್‌ಮ್ಯಾನ್ ಮನೆ ಮನೆಗೆ ತೆರಳಿ ಕೆವೈಸಿ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಜನರು ಅವಸರ ಮಾಡುವ, ಭಯ ಬೀಳುವ ಅವಶ್ಯಕತೆಯಿಲ್ಲ ಎಂದು ಸ್ಪಷ್ಟಪಡಿಸಿದರು.

ಡಿ.೩೧ರೊಳಗೆ ಇಕೆವೈಸಿ ಮಾಡದೇ ಇದ್ದರೆ ಸಬ್ಸಿಡಿ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ. ದಿನಾಂಕ, ಸಮಯ ನಿಗದಿ ಮಾಡಿದ್ದಾರೋ ಇಲ್ಲವೋ ಎನ್ನುವ ಬಗ್ಗೆ ಅಧಿಕಾರಿಗಳು ಅಧಿಕೃತ ಪ್ರಕಟಣೆ ನೀಡಬೇಕು. ಗ್ರಾಮೀಣ ಭಾಗದಲ್ಲಿ ಬಹುತೇಕ ವೃದ್ಧರೆ ಇದ್ದು, ನಗರ-ಪಟ್ಟಣಕ್ಕೆ ಬಂದು ಇಕೆವೈಸಿ ಮಾಡಿಸಲು ಕಷ್ಟವಾಗುತ್ತದೆ. ಜತೆಗೆ ಕೆಲಸ ಕಾರ್ಯ ಬಿಟ್ಟು ಅನಗತ್ಯವಾಗಿ ಓಡಾಟ ಮಾಡಬೇಕಾಗುತ್ತದೆ ಎಂದು ಗ್ರಾಹಕ ಉಲ್ಲಾಸ ಸಾಳುಂಕೆ ತಿಳಿಸಿದ್ದಾರೆ.