8 ದಿನದಿಂದ ಹೆದ್ದಾರಿ ಬಳಿ ನಿಂತ ನೂರಾರು ಲಾರಿಗಳು!

| Published : Jul 23 2024, 12:36 AM IST

ಸಾರಾಂಶ

ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು ಇಂದಿಗೆ 8 ದಿನವಾಗಿದೆ. ಇನ್ನೂ ಕಾರ್ಯಾಚರಣೆ ಮುಂದುವರಿದ ಪರಿಣಾಮ ಹೆದ್ದಾರಿ ಪಕ್ಕದಲ್ಲೇ ನೂರಾರು ಲಾರಿಗಳು ನಿಂತಿವೆ. ಉಪಾಹಾರ, ಊಟ, ಶೌಚಾಲಯಕ್ಕೂ ಲಾರಿ ಚಾಲಕರು ಪರದಾಡುವಂತಾಗಿದೆ.

ರಾಘು ಕಾಕರಮಠ

ಅಂಕೋಲಾ: ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಪ್ರಕರಣದ ಹಿನ್ನೆಲೆ ಕಳೆದ 8 ದಿನಗಳಿಂದ ನೂರಾರು ಲಾರಿಗಳು ಮುಂದೆ ಹೋಗಲು ಆಗದೆ, ರಸ್ತೆಬದಿ ನಿಂತಿದ್ದು, ಚಾಲಕರು ಸಂಕಷ್ಟದಲ್ಲೆ ಕಾಲ ಕಳೆಯುತ್ತಿದ್ದಾರೆ.

ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು ಇಂದಿಗೆ 8 ದಿನವಾಗಿದೆ. ಇನ್ನೂ ಕಾರ್ಯಾಚರಣೆ ಮುಂದುವರಿದ ಪರಿಣಾಮ ಹೆದ್ದಾರಿ ಪಕ್ಕದಲ್ಲೇ ನೂರಾರು ಲಾರಿಗಳು ನಿಂತಿವೆ. ಉಪಾಹಾರ, ಊಟ, ಶೌಚಾಲಯಕ್ಕೂ ಲಾರಿ ಚಾಲಕರು ಪರದಾಡುವಂತಾಗಿದೆ.

ಅಂಕೋಲಾ ಚಾಲಕರ ಒಕ್ಕೂಟ ಹಾಗೂ ಕೆಲ ಸಂಘಟನೆಗಳು ಊಟೋಪಚಾರ ನೀಡಿ ಮಾನವೀಯತೆ ಮೆರೆದಿವೆ. ರಾಷ್ಟ್ರೀಯ ಹೆದ್ದಾರಿ 66 ಶಿರೂರು ಬಳಿ ಗುಡ್ಡ ಕುಸಿತವಾಗಿರುವುದರಿಂದ ಅಂಕೋಲಾದಿಂದ ಮಂಗಳೂರು- ಕೇರಳ ಸಂಪರ್ಕ ಕಡಿತಗೊಂಡಿದೆ. ಸರಕು ಸಾಗಾಟದ ಲಾರಿಗಳು ಶಿರೂರು- ಬೆಳಸೆ ಮತ್ತು ಹಟ್ಟಿಕೇರಿ ಟೋಲ್ ಬಳಿ ಕಳೆದೊಂದು ವಾರದಿಂದ ಸಾಲುಗಟ್ಟಿ ನಿಂತಿವೆ.

ವಾರದಿಂದ ಲಾರಿ ನಿಲ್ಲಿಸಿಕೊಂಡು ಹೆದ್ದಾರಿ ಬಳಿ ವಾಸ್ತವ್ಯ ಮಾಡಿರುವುದರಿಂದ ಒಂದೆರಡು ದಿನಕ್ಕೆ ಆಗುವಷ್ಟು ತಂದಿರುವ ಅಕ್ಕಿ, ಬೇಳೆ ಮತ್ತು ಕೈಯಲ್ಲಿರುವ ಹಣ ಕೂಡ ಖಾಲಿ ಆಗಿದೆ ಎಂದು ಲಾರಿ ಚಾಲಕರು ಅಸಹಾಯಕತೆ ತೋಡಿಕೊಂಡಿದ್ದಾರೆ. ಇನ್ನು ಹೆದ್ದಾರಿಯಲ್ಲೇ ನಿಂತಿರುವ ಲಾರಿಗಳ ಚಾಲಕರು ಮತ್ತು ಕ್ಲೀನರ್‌ಗಳು ವಾಹನದಲ್ಲಿಯೇ ಅಡುಗೆ ಮಾಡಿ ಊಟ ಮಾಡುತ್ತಿದ್ದರೆ, ಇನ್ನೂ ಕೆಲವರಿಗೆ ಹಲವು ಸಂಘ- ಸಂಸ್ಥೆಗಳು ಊಟ ಪೂರೈಸುತ್ತಿವೆ.

ಶಿರೂರು ಗುಡ್ಡ ಕುಸಿತ ವಾಣಿಜ್ಯೋದ್ಯಮದ ಮೇಲೆಯೂ ಭಾರಿ ಹೊಡೆತ ಬಿದ್ದಿದೆ. ಹೆದ್ದಾರಿ ಬಿಟ್ಟು ಬೇರೆ ದಾರಿಗಳಿದ್ದರೂ ಭಾರಿ ವಾಹನಗಳಿಗೆ ಅಲ್ಲಿಂದ ತೆರಳಲು ಆಗದಿರುವ ಕಾರಣ ನೂರಾರು ವಾಹನ ರಸ್ತೆಬದಿ ನಿಂತಿದೆ.

ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ್ ಮತ್ತು ಹುಬ್ಬಳ್ಳಿ, ಬೆಳಗಾವಿ ಕಡೆಯಿಂದ ಸರಕನ್ನು ತುಂಬಿಕೊಂಡು ಮಂಗಳೂರು, ಕೇರಳದ ಭಾಗಗಳಿಗೆ ಸಾಗುವ ಲಾರಿಗಳು ಕಳೆದ ವಾರದಿಂದ ಹೆದ್ದಾರಿಯ ಬದಿಯಲ್ಲಿ ನಿಂತಿವೆ. ಈ ಹೆದ್ದಾರಿ ತಕ್ಷಣ ಆರಂಭವಾಗದಿದ್ದರೆ ವಾಣಿಜ್ಯೋದ್ಯಮದ ಮೇಲೆ ಭಾರಿ ಪರಿಣಾಮ ಬೀರಲಿದೆ.

ಮಂಗಳೂರು ಬಂದರಿಗೆ ಅನಿಲ ತುಂಬಿಕೊಂಡು ಹೋಗುವ ಟ್ಯಾಂಕರ್‌ಗಳು ಈ ಹೆದ್ದಾರಿ ಮೂಲಕವೇ ಸಾಗಬೇಕು. ಈ ಮಾರ್ಗ ಬಿಟ್ಟರೆ ಬೇರೆ ಯಾವ ದಾರಿಯೂ ಇಲ್ಲ. ಇಂತಹ ಅನಿಲ ತುಂಬಿಕೊಂಡು ಬರಲು ಹೋಗುವ ನೂರಾರು ಟ್ಯಾಂಕರ್‌ಗಳು ಇಲ್ಲಿಯೆ ನಿಂತಿವೆ. ಇದರಿಂದಾಗಿ ಮುಂದಿನ ದಿನದಲ್ಲಿ ಅಡುಗೆ ಅನಿಲ ವಿತರಣೆಯಲ್ಲೂ ವ್ಯತ್ಯಯ ಉಂಟಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ನೆರವಿಗೆ ಬಂದಿದ್ದಾರೆ: ಕಳೆದ 8 ದಿನಗಳಿಂದ ನಾವು ಸ್ನಾನ ಕೂಡ ಮಾಡಿಲ್ಲ. ಇದ್ದ ಅಕ್ಕಿ, ಬೇಳೆಯಿಂದ ಅಡುಗೆ ಮಾಡಿ 3 ದಿನ ಕಳೆದವು. ನಂತರ ಉಪವಾಸ ಬಿದ್ದ ಸಂದರ್ಭದಲ್ಲಿ ಅಂಕೋಲಾದ ಕೆಲವು ಸಹೃದಯಿಗಳು ನಮ್ಮ ನೆರವಿಗೆ ಬಂದು ಹಸಿವನ್ನು ತಣಿಸಿದ್ದಾರೆ ಎಂದು ಗುಜರಾತ್‌ನ ಲಾರಿ ಚಾಲಕ ಮೆಹಬೂಬ್ ತಿಳಿಸಿದರು.