ಯಲ್ಲಾಪುರದ ಅರಣ್ಯದ ಒಡಲಲ್ಲಿವೆ ನೂರಾರು ಪ್ರವಾಸಿತಾಣ

| Published : Aug 15 2025, 01:00 AM IST

ಯಲ್ಲಾಪುರದ ಅರಣ್ಯದ ಒಡಲಲ್ಲಿವೆ ನೂರಾರು ಪ್ರವಾಸಿತಾಣ
Share this Article
  • FB
  • TW
  • Linkdin
  • Email

ಸಾರಾಂಶ

ಘಟ್ಟದ ಮೇಲ್ಭಾಗ ಪ್ರತಿ ತಾಲೂಕಿನಲ್ಲೂ ಜಲಪಾತಗಳ ವಿಹಂಗಮ ನೋಟ ಹೇರಳ.

ಶಂಕರ ಭಟ್ಟ ತಾರೀಮಕ್ಕಿ

ಯಲ್ಲಾಪುರ: ಕರಾವಳಿ ಭಾಗದಲ್ಲೂ ಅಲ್ಲಲ್ಲಿ ಜಲಪಾತಗಳು, ಮಂದಿರಗಳು, ಸಮುದ್ರ ಕಿನಾರೆಗಳು ಲೆಕ್ಕವಿಲ್ಲದಷ್ಟಿದೆ. ಘಟ್ಟದ ಮೇಲ್ಭಾಗ ಪ್ರತಿ ತಾಲೂಕಿನಲ್ಲೂ ಜಲಪಾತಗಳ ವಿಹಂಗಮ ನೋಟ ಹೇರಳ. ಆದರೆ ಪ್ರವಾಸೋದ್ಯಮ ಕ್ಷೇತ್ರ ಬಡವಾಗಿದೆ. ಜಿಲ್ಲೆಯ ಪ್ರವಾಸಿ ತಾಣಗಳನ್ನು ರಾಜಕಾರಣಿಗಳು, ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ.

ಅದರಲ್ಲೂ ಯಲ್ಲಾಪುರ ತಾಲೂಕು ೨೫ಕ್ಕೂ ಹೆಚ್ಚಿನ ಜಲಪಾತಗಳನ್ನು ಹೊಂದಿದ್ದರೂ ಕೇವಲ ಬೆರಳೆಣಿಕೆಯಷ್ಟು ಜಲಪಾತಗಳು ಮಾತ್ರ ಪ್ರವಾಸಿಗರ ಕಣ್ಣಿಗೆ ಬಿದ್ದಿವೆ. ಇದಕ್ಕೆ ಸರ್ಕಾರದ ನಿರ್ಲಕ್ಷ್ಯ, ಮೂಲಭೂತ ಸೌಕರ್ಯದ ಕೊರತೆಯೇ ಕಾರಣವಾಗಿದೆ.

ಜಿಲ್ಲೆಯನ್ನಾಳಿದ ಪ್ರವಾಸೋದ್ಯಮ ಸಚಿವರು ನಿರೀಕ್ಷಿತ ಕೆಲಸ ಮಾಡಿಲ್ಲ. ಸಂಸದರು ಸೇರಿದಂತೆ ಯಾವ ಶಾಸಕರೂ ಪ್ರವಾಸೋದ್ಯಮದ ಬಗ್ಗೆ ಮಹತ್ವ ನೀಡಲೇ ಇಲ್ಲ. ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಪ್ರವಾಸೋದ್ಯಮ ಅಭಿವೃದ್ಧಿಯ ನಿಟ್ಟಿನಲ್ಲಿ ಜಿಲ್ಲಾ ಸಮಿತಿ ಮಾಡಿ, ಇಡೀ ಜಿಲ್ಲೆಯ ತಾಣಗಳ ಕುರಿತು ಮಾಹಿತಿ ಸಂಗ್ರಹ ಮಾಡುತ್ತಿರುವುದು ಆಶಾದಾಯಕವಾಗಿದೆ.

ಸಚಿವರು ವಿಶೇಷ ಅನುದಾನ ನೀಡಿ, ಕನಿಷ್ಠ ಮೂಲಭೂತ ಸೌಕರ್ಯ ನೀಡಿದರೆ ಕೇರಳ, ತಮಿಳುನಾಡು, ಉತ್ತರಾಂಚಲ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇರುವ ಪ್ರವಾಸೋದ್ಯಮದ ಹಾಗೆ ಈ ಜಿಲ್ಲೆಯೂ ಬೆಳೆದೀತು. ಪಕ್ಕದ ಗೋವಾದಲ್ಲಿರುವ ಕೆಲವು ಮಂದಿರ, ಸಮುದ್ರ ಕಿನಾರೆ ಬಿಟ್ಟರೆ ಯಾವ ಸೃಷ್ಟಿಯ ಸೊಬಗೂ ಅಲ್ಲಿ ಇಲ್ಲ. ಇಡೀ ರಾಜ್ಯ ಸರ್ಕಾರವೇ ಪ್ರವಾಸೋದ್ಯಮದಿಂದ ನಡೆಯುವಷ್ಟು ಆದಾಯವಿದೆ. ಇದು ಜನಪ್ರತಿನಿಧಿಗಳ ನಿರ್ಲಕ್ಷ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ.

ತಾಲೂಕಿನ ಪ್ರಸಿದ್ಧ ಜಲಪಾತಗಳಾದ ಮಾಗೋಡು, ಸಾತೊಡ್ಡಿಗಳಲ್ಲಿ ತೂಗುಸೇತುವೆ ಅಳವಡಿಕೆಯ ಅಗತ್ಯವಿದೆ. ಅದರಲ್ಲೂ ಸಾತೊಡ್ಡಿ ಮೇಲ್ಭಾಗದಲ್ಲಿ ದಬ್ಬೇಸಾಲ ಜಲಪಾತವಿದೆ. ಶಿವಗಂಗಾ, ಶಿರ್ಲೆ, ಸುಣಜೋಗ, ಅರಬೈಲ್, ವಡ್ರಮನೆ, ಕುಳಿಮಾಗೋಡು, ಬೆಣ್ಣೆಜಡ್ಡಿ, ಅಜ್ಜಿಗುಂಡಿ, ಲಾಲಗುಳಿ, ಕಾನೂರು ಹೀಗೆ ಇನ್ನು ಸಣ್ಣಪುಟ್ಟ ಅನೇಕ ಜಲಪಾತಗಳನ್ನು ಕಾಣಬಹುದಾಗಿದೆ.

ಪ್ರವಾಸಿಗರಿಗೆ ಕೊಡಸಳ್ಳಿ, ಸಾತೊಡ್ಡಿ, ಕವಡಿಕೆರೆ, ರೆಡ್ಡಿಕೆರೆ ಸೇರಿದಂತೆ ಹಲವು ಬೃಹತ್ ನೀರಿನ ಕೆರೆಗಳಲ್ಲಿ ಜಲವಿಹಾರಕ್ಕೆ ಬೋಟ್ ವ್ಯವಸ್ಥೆ ಮಾಡಬಹುದಾಗಿದೆ. ಇನ್ನು ಜೇನುಕಲ್ಲುಗುಡ್ಡ, ಕಳಚೆ ದೇವಿಕಲ್ಲು, ವಿಹಂಗಮ ನೋಟ, ವಜ್ರಳ್ಳಿಯ ಬಾವಲಕ್ಕಿ ಗುಹೆ, ಮಲವಳ್ಳಿಯ ಸೂರ್ಯಕಲ್ಯಾಣಿಗುಡ್ಡ, ವಡ್ರಮನೆಯ ಅರ್ಜುನ ವೃಕ್ಷ, ಹಬ್ಬುಕೋಟೆ ಹೀಗೆ ಹತ್ತು ಹಲವು ಪ್ರೇಕ್ಷಣೀಯ ಸ್ಥಾನಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ.

ಪ್ರಸಿದ್ಧ ಕ್ಷೇತ್ರಗಳಾದ ಘಂಟೆ ಗಣಪತಿ, ಕವಡಿಕೆರೆ, ಅಣಲಗಾರ, ಕಲ್ಮಠ, ರಾಮಲಿಂಗೇಶ್ವರ ಇಡಗುಂದಿ, ನಾಯ್ಕನಕೆರೆಯ ಶಾರದಾಂಬಾ, ದತ್ತಮಂದಿರ ಹೀಗೆ ಹತ್ತು ಹಲವು ಜಲಪಾತ, ಮಂದಿರಗಳಿವೆ. ಇವುಗಳನ್ನು ಅಭಿವೃದ್ಧಿ ಮಾಡಿದರೆ ಇಲ್ಲಿನ ಯುವಕರಿಗೆ ಬಹುದೊಡ್ಡ ಉದ್ಯೋಗ ಲಭಿಸುತ್ತದೆ.

ಜೋಯಿಡಾದಲ್ಲಿ ಪ್ರವಾಸಿಗರಿಗಾಗಿ ರೆಸಾರ್ಟ್, ಹೋಂಸ್ಟೇಗಳು ಗಲ್ಲಿ ಗಲ್ಲಿಗೆ ಇವೆ. ಅಲ್ಲಿನ ಜನರಿಗೆ ಉದ್ಯೋಗ ಸೃಷ್ಟಿಯಾಗಿ, ಪ್ರವಾಸಿಗರನ್ನು ಸೆಳೆಯುವುದಕ್ಕೆ ಕಾರಣವಾಗಿದೆ. ಯಲ್ಲಾಪುರದಲ್ಲೂ ಇತ್ತೀಚೆಗೆ ಕೆಲ ಹೊಟೇಲ್‌ಗಳು ಆಗಿವೆಯೇ ವಿನಃ ಪ್ರವಾಸಕ್ಕೆ ಯೋಗ್ಯವಾದ ಹೋಂಸ್ಟೇಗಳು, ಮಾರ್ಗದರ್ಶಕ ತಂಡಗಳು ಯಾವುದೂ ಸರಿಯಾಗಿ ಇಲ್ಲದೇ ಇರುವುದರಿಂದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೀರಾ ಹಿಂದೆ ಬಿದ್ದಿದೆ.

ಯಲ್ಲಾಪುರದಲ್ಲಿ ಇರುವಷ್ಟು ಕಾಡು ಬೇರೆಲ್ಲೂ ಸಿಗದು. ಬೃಹತ್ ಮರದಲ್ಲಿ ಏರಿ ವೀಕ್ಷಣಾ ಗೋಪುರ, ಮರದಿಂದ ಮರಕ್ಕೆ ಹೋಗುವ ಜೋಕಾಲಿಗಳು ಹೀಗೆ ಹತ್ತಾರು, ನೂರಾರು ರೀತಿಯ ವ್ಯವಸ್ಥೆಗಳನ್ನು ಪ್ರವಾಸಿಗರಿಗಾಗಿ ಕಲ್ಪಿಸಿದರೆ ಯಲ್ಲಾಪುರವೂ ಬಹುದೊಡ್ಡ ಪ್ರವಾಸಿ ತಾಣಗಳಾಗುವುದರಲ್ಲಿ ಸಂಶಯವಿಲ್ಲ.

ಉತ್ತರ ಕನ್ನಡದಲ್ಲಿ ಕಾರ್ಖಾನೆ ಅಸಾಧ್ಯ. ಪರಿಸರಕ್ಕೆ ಪೂರಕ ಉದ್ಯಮವಾದ ಪ್ರವಾಸೋದ್ಯಮಕ್ಕೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕು. ಆಗ ದೇಶ, ವಿದೇಶಿ ಪ್ರವಾಸಿಗರು ಜ್ಞಾನ ಮತ್ತು ಮನರಂಜನೆಗಾಗಿ ಬರಲು ಸಾಧ್ಯ. ಇದು ದೇಶದ ಆರ್ಥಿಕತೆಗೆ ಪೂರಕವಾಗಲಿದೆ ಎನ್ನುತ್ತಾರೆ ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ.ಜಿಲ್ಲೆಯಲ್ಲಿ ಪರಿಸರಕ್ಕೆ ಪೂರಕ ಮತ್ತು ನೈಜ ಪ್ರವಾಸೋದ್ಯಮ ಬೀಚ್ ಟೂರಿಸಂ, ಸ್ಕಿಲ್ ಟೂರಿಸಂ, ಕಲ್ಲು, ಪಕ್ಷಿ ಹೀಗೆ ಹತ್ತಾರು ಯೋಜನೆಗಳನ್ನು ರೂಪಿಸಿದರೆ ವಿಶ್ವವನ್ನೇ ಇಲ್ಲಿ ಸೆಳೆಯಬಹುದು. ಸಹಸ್ರ ಸಂಖ್ಯೆಯಲ್ಲಿ ಯುವಕರಿಗೆ ಉದ್ಯೋಗ ಸಾಧ್ಯ. ಮಳೆಗಾಲದಲ್ಲಿ ಜಲಪಾತಕ್ಕೆ ಪ್ರವಾಸರಿಗೆ ನಿಷೇಧಿಸುವ ಕ್ರಮ ಬಂದಾಗಬೇಕು. ಬದಲಿ ವ್ಯವಸ್ಥೆ ಮಾಡಬೇಕು ಎನ್ನುತ್ತಾರೆ ಪ್ರವಾಸೋದ್ಯಮ ಜಿಲ್ಲಾ ಅಭಿವೃದ್ಧಿ- ಅಧ್ಯಯನ ಸಮಿತಿ ಅಧ್ಯಕ್ಷ ಬೀರಣ್ಣ ನಾಯಕ ಮೊಗಟ.