ಧಾರವಾಡ:

ಕೆಲವೇ ಹೊತ್ತು ಸುರಿದ ಭಾರೀ ಪ್ರಮಾಣದ ಗಾಳಿ ಸಹಿತ ಮಳೆಗೆ ನಗರದಲ್ಲಿ ವಿವಿಧೆಡೆ ನೂರಾರು ಮರಗಳು ಧರೆಗೆ ಉರುಳಿದ್ದು, ಸಾಕಷ್ಟು ಪ್ರಮಾಣದಲ್ಲಿ ಹಾನಿ ಉಂಟಾಗಿದೆ.

ಸಂಜೆ 6ರ ಸುಮಾರಿಗೆ ವಿಪರೀತ ಗಾಳಿಯೊಂದಿಗೆ ಶುರುವಾದ ಮಳೆಯಿಂದ ಗಿಡಗಳು ಹಾಗೂ ಅವುಗಳ ಕೊಂಬೆ ಮುರಿದು ಬಿದ್ದವು. ಇಲ್ಲಿಯ ಉಪ ನಗರ ಪೊಲೀಸ್‌ ಠಾಣೆ ಎದುರು ಹಾಗೂ ಅರಣ್ಯ ಇಲಾಖೆ ಆವರಣದಲ್ಲಿ ಮರಗಳು ಕಾರುಗಳ ಮೇಲೆ ಬಿದ್ದು ಜಖಂ ಆಗಿವೆ. ಸಾಧನಕೇರಿ ಹುಬ್ಳೀಕರ ಪ್ಲಾಟ್‌ನ ಭಟ್‌ ಎಂಬುವರ ಕಾರಿನ ಮೇಲೆ ಮರದ ಕೊಂಬೆ ಬಿದ್ದು ಕಾರು ಜಖಂಗೊಂಡಿದೆ.

ವಿದ್ಯುತ್‌ ತಂತಿ ಮೇಲೂ ಮರ:

ಅದೇ ರೀತಿ ನಾರಾಯಣಪೂರದ ಹಲವು ಮನೆ, ವಿದ್ಯುತ್‌ ಕಂಬಗಳ ಮೇಲೆ ದೊಡ್ಡ ದೊಡ್ಡ ಮರಗಳು ಬಿದ್ದಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿಯಾಗಿಲ್ಲ. ತೆಂಗಿನ ಮರ, ಅವುಗಳ ಗರಿಗಳು ಸೇರಿದಂತೆ ತರಹೇವಾರಿ ಗಿಡಗಳು ಮತ್ತು ಅವುಗಳ ರೆಂಬೆಗಳು ರಸ್ತೆ, ಮನೆ ಆವರಣ, ವಿದ್ಯುತ್‌ ತಂತಿ ಸೇರಿದಂತೆ ಎಲ್ಲೆಡೆ ಬಿದ್ದಿದ್ದು, ಸುರಕ್ಷತಾ ಕ್ರಮವಾಗಿ ವಿದ್ಯುತ್‌ ವ್ಯತ್ಯಯ ಮಾಡಲಾಗಿದೆ.ಎಂದಿನಂತೆ ಬುಧವಾರ ಸಹ ಬಿಸಿಲಿನ ವಾತಾವರಣವಿದ್ದು, ಸಂಜೆ 5ರ ನಂತರ ಏಕಾಏಕಿ ಗುಡುಗು ಸಿಡಿಲಿನೊಂದಿಗೆ ಮಳೆ ಶುರುವಾಗಿದೆ. ಈ ಗಾಳಿ- ಮಳೆಯಿಂದಾಗಿ ಮರ ಬಿದ್ದು ರಸ್ತೆಗಳು ಬಂದ್ ಆಗಿದ್ದರಿಂದ ಜನರು ತತ್ತರಿಸಿ ಹೋಗಿದ್ದು, ಕೆಲಸ-ಕಾರ್ಯಗಳಿಗೆ ಹೋಗಿದ್ದವರು ಮನೆ ತಲುಪಲು ತೀವ್ರ ಪರದಾಡಬೇಕಾಯಿತು. ರಾತ್ರಿಯಾಗಿದ್ದರಿಂದ ಮರಗಳ ತೆರವು ಕಾರ್ಯಾಚರಣೆ ಮಾಡದೆ ಇರುವುದರಿಂದ ಜನರು ವಿದ್ಯುತ್‌ ಇಲ್ಲದೇ ಪರದಾಡಬೇಕಾಯಿತು.