ಸಂಡೂರಿನಲ್ಲಿ ನೂರಾರು ಮರಗಳು ಬೆಂಕಿಗಾಹುತಿ

| Published : Mar 29 2024, 12:54 AM IST

ಸಾರಾಂಶ

ರೈತ ಹರ‍್ಯಾನಾಯ್ಕ ಬೆಂಗಳೂರಿಗೆ ಈರುಳ್ಳಿ ಮಾರಾಟ ಮಾಡಲು ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಸಂಡೂರು: ತಾಲೂಕಿನ ಸುಶೀಲಾನಗರದ ಬಳಿಯ ರಾಧಾನಗರದ ಹತ್ತಿರ ರೈತ ಹರ‍್ಯಾನಾಯ್ಕ್ ಎಂಬವರ ತೋಟದಲ್ಲಿ ಬೆಳೆದಿದ್ದ ನೂರಾರು ಗಿಡ-ಮರಗಳು ಆಕಸ್ಮಿಕ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಹಾನಿಯಾಗಿದೆ.ರೈತ ಹರ‍್ಯಾನಾಯ್ಕ ಬೆಂಗಳೂರಿಗೆ ಈರುಳ್ಳಿ ಮಾರಾಟ ಮಾಡಲು ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸುದ್ದಿ ತಿಳಿದು ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರಾದರೂ, ಅಷ್ಟೊತ್ತಿಗೆ ೨೦೦ ಹೆಬ್ಬೇವು, ೩೦ ಸಪೋಟ, ೨೦ ಮಾವು, ೨೦ ನೇರಳೆ, ೫ ಬಾದಾಮಿ, ೫ ನಿಂಬೆ, ೫ ತೆಂಗು, ೧೫ ರಕ್ತಚಂದನ, ೨೦ ಹಲಸು, ೧೦ ಬಿದುರು ಮತ್ತು ೩೦ ತೇಗ ಮರಗಳು ಸುಟ್ಟಿವೆ. ಇವುಗಳ ಜೊತೆಗೆ ಕೊಳವೆಬಾವಿಯ ವಿದ್ಯುತ್ ಸಂಪರ್ಕ ಮತ್ತು ತೋಟಗಾರಿಕೆ ಇಲಾಖೆ ಹಾಕಿದ ಪೈಪ್ ಲೈನ್ ಕೂಡ ಸುಟ್ಟಿವೆ.ಈ ಕುರಿತು ರೈತ ಹೀರಾನಾಯ್ಕ್ ಮಾತನಾಡಿ, ನಾಲ್ಕು ಎಕರೆ ಪಟ್ಟಾ ಜಮೀನಿನಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆದಿದ್ದ ಮತ್ತು ಫಲ ಕೊಡುತ್ತಿದ್ದ ನೂರಾರು ಗಿಡ ಮರಗಳು ಆಕಸ್ಮಿಕ ಬೆಂಕಿಗೆ ಆಹುತಿಯಾಗಿವೆ. ಅರಣ್ಯ ಇಲಾಖೆಯ ಸಿಬ್ಬಂದಿಗೆ ತಿಳಿಸಿದರೂ ಸ್ಪಂದನೆ ದೊರಕಲಿಲ್ಲ. ನಂತರ ಅಗ್ನಿಶಾಮಕ ಠಾಣೆಯವರು ಬಂದು ಅಗ್ನಿ ನಂದಿಸಿದ್ದಾರೆ. ಲಕ್ಷಾಂತರ ಮೌಲ್ಯದ ಗಿಡಮರಗಳು, ವಿದ್ಯುತ್ ಉಪಕರಣಗಳು, ಹನಿ ನೀರಾವರಿ ವ್ಯವಸ್ಥೆಗೆ ಅಳವಡಿಸಿದ್ದ ಪೈಪ್‌ಗಳು ಬೆಂಕಿಗೆ ಆಹುತಿಯಾಗಿವೆ. ಗ್ರಾಮ ಲೆಕ್ಕಿಗ ದೇವರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ಅಳಲು ತೋಡಿಕೊಂಡರು.