ನೂರಾರು ವರ್ಷಗಳ ಹಿಂದಿನ ಎತ್ತಿನ ಬಂಡಿಯಲ್ಲಿ ಸಮ್ಮೇಳನಕ್ಕೆ ರೈತ..!

| Published : Dec 20 2024, 12:45 AM IST

ಸಾರಾಂಶ

ನಾಗಮಂಗಲ ತಾಲೂಕಿನ ಮರಡೀಪುರ ಗ್ರಾಮದ ಪ್ರಗತಿಪರ ರೈತ ಸಂತೋಷ್ ತಮ್ಮ ಕುಟುಂಬಸ್ಥರೊಂದಿಗೆ ಅಲಂಕರಿಸಿದ ನೂರಾರು ವರ್ಷಗಳ ಹಿಂದಿನ ಎತ್ತಿನ ಬಂಡಿಗಾಡಿಯಲ್ಲಿ ಮಂಡ್ಯದಲ್ಲಿ ಮೂರು ದಿನಗಳ ಕಾಲ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಸೀತಾರಾಮು ಕರಡಹಳ್ಳಿ

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಮರಡೀಪುರ ಗ್ರಾಮದ ಪ್ರಗತಿಪರ ರೈತ ಸಂತೋಷ್ ತಮ್ಮ ಕುಟುಂಬಸ್ಥರೊಂದಿಗೆ ಅಲಂಕರಿಸಿದ ನೂರಾರು ವರ್ಷಗಳ ಹಿಂದಿನ ಎತ್ತಿನ ಬಂಡಿಗಾಡಿಯಲ್ಲಿ ಮಂಡ್ಯದಲ್ಲಿ ಮೂರು ದಿನಗಳ ಕಾಲ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ನಮ್ಮ ಪೂರ್ವಿಕರು ಹಬ್ಬ ಹರಿದಿನ, ಜಾತ್ರೆಗಳ ವೇಳೆ ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗಲು ಎತ್ತಿನ ಬಂಡಿಗಾಡಿಯಲ್ಲಿ ತೆರಳುವ ಸಂಪ್ರದಾಯ ರೂಢಿಸಿಕೊಂಡಿದ್ದರು. ಅಂತಹ ಗ್ರಾಮೀಣ ಸೊಗಡಿನ ರೈತ ಪರಂಪರೆಯನ್ನು ಮರುಕಳಿಸಬೇಕೆಂಬ ಉದ್ದೇಶದಿಂದ ಸಂತೋಷ್ ಅವರ ಅಜ್ಜ ಬಳಸುತ್ತಿದ್ದ ನೂರಾರು ವರ್ಷಗಳ ಹಿಂದಿನ ಎತ್ತಿನ ಬಂಡಿಗಾಡಿಗೆ ಧ್ವನಿ ಬಂಡಿ ಎಂದು ಹೆಸರಿಟ್ಟು ಮಧುವಣಗಿತ್ತಿಯಂತೆ ಅಲಂಕರಿಸಿಕೊಂಡು ಸ್ವಗ್ರಾಮದಿಂದ 45 ಕಿ.ಮೀ. ದೂರದ ಮಂಡ್ಯ ನಗರಕ್ಕೆ ತೆರಳಿದರು.

ಹಳೇ ಕಾಲದ ಎತ್ತಿನ ಬಂಡಿಗಾಡಿಯನ್ನು ಬಹಳ ಜೋಪಾನವಾಗಿಟ್ಟುಕೊಂಡಿರುವ ಪ್ರಗತಿಪರ ರೈತ ಸಂತೋಷ್, ನವೀಕರಿಸಿದ ಬಂಡಿಗಾಡಿಗೆ ವಡಕೆಯಲ್ಲಿ ಮೇಲ್ಚಾವಣಿ ನಿರ್ಮಿಸಿ, ಚಾವಟಿಕೋಲು, ಸೀಮೆಎಣ್ಣೆ ಲ್ಯಾಟಿಲ್, ರೇಡಿಯೋ, ಕಬ್ಬಿಣದ ಪೆಟ್ಟಿಗೆ, ಗಾಲಿಗೆ ಹಾಕುವ ಆಯಿಲ್, ಕಂಬಳಿ, ಎತ್ತುಗಳಿಗೆ ಆಹಾರ, ಜೊತೆಯಲ್ಲಿ ತೆಗೆದುಕೊಂಡು ಹೋಗುವ ಸಾಮಗ್ರಿ ಇಡಲು ಹಟ್ಟಣೆ ಸೇರಿದಂತೆ ಪೂರ್ವಿಕರು ಬಂಡಿಗಾಡಿಗೆ ಏನೆಲ್ಲಾ ಬಳಸುತ್ತಿದ್ದರೋ ಅದೆಲ್ಲದರ ಜೊತೆಗೆ ತಮ್ಮ ಕುಟುಂಬಸ್ಥರೊಂದಿಗೆ ನುಡಿ ಹಬ್ಬಕ್ಕೆ ಒಂದು ದಿನ ಮುಂಚೆಯೇ ಗ್ರಾಮದಿಂದ ಹೊರಟರು.

ಈ ಎತ್ತಿನ ಬಂಡಿಗಾಡಿ ಸಮ್ಮೇಳನದಲ್ಲಿ ಮುಖ್ಯ ಆಕರ್ಷಣೆಯಾಗಬೇಕೆಂದು ಸಮ್ಮೇಳನದ ಆಯೋಜಕರು ತಿಳಿಸಿರುವ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿಂದಲೇ ಸಿದ್ಧತೆ ಮಾಡಿಕೊಂಡಿರುವ ಸಂತೋಷ್ ಕನ್ನಡದ ತೇರನ್ನು ತಮ್ಮ ಬಂಡಿಗಾಡಿ ಮೂಲಕವೇ ಎಳೆಸುವ ಖುಷಿಯಲ್ಲಿ, ಎತ್ತು ಮತ್ತು ಗಾಡಿಯನ್ನು ವಿಶೇಷ ರೀತಿಯಲ್ಲಿ ಅಲಂಕರಿಸಿದ್ದಾರೆ.

ಅಲಂಕರಿಸಿದ ಬಂಡಿಗಾಡಿಗೆ ಸಂತೋಷ್ ಅವರ ತಂದೆ ಕುಚೇಲೇಗೌಡ ಪೂಜೆ ಸಲ್ಲಿಸಿ ಮಗ ಸಂತೋಷ್ ಸೊಸೆ ಪವಿತ್ರ ಮತ್ತು ಮೊಮ್ಮಗಳನ್ನು ಆಶೀರ್ವದಿಸಿ ಸಮ್ಮೇಳನ ಯಶಸ್ವಿಯಾಗಲೆಂದು ಹಾರೈಸಿ ಕಳುಹಿಸಿಕೊಟ್ಟರು.

ಈ ವೇಳೆ ಮಾತನಾಡಿದ ಸಂತೋಷ್, ಸಮ್ಮೇಳನದ ಮುಖ್ಯ ಆಕರ್ಷಣೆಯಾಗಿ ನಮ್ಮ ಎತ್ತಿನ ಬಂಡಿಗಾಡಿಯನ್ನು ಆಯೋಜಕರು ಆಯ್ಕೆ ಮಾಡಿರುವುದು ಬಹಳ ಖುಷಿಯ ವಿಚಾರ. ರೈತ ಪರಂಪರೆ ಮುಂದಿನ ಪೀಳಿಗೆಗೆ ಉಳಿಯಬೇಕು. ನಮ್ಮ ಪೂರ್ವಿಕರು ಬಳಸುತ್ತಿದ್ದ ಅನೇಕ ವಸ್ತುಗಳು ಪಳೆಯುಳಿಕೆಗಳನ್ನು ನಾವು ಇಂದಿಗೂ ಉಳಿಸಿಕೊಂಡು ಬಂದಿದ್ದೇವೆ ಎಂದರು.

ಈ ನುಡಿ ಹಬ್ಬಕ್ಕೆ ನಾವು ಕುಟುಂಬ ಸಮೇತ ತೆರಳುತ್ತಿದ್ದೇವೆ. ಅದೇ ರೀತಿ ನಾಡಿನ ಪ್ರತಿಯೊಬ್ಬ ಕನ್ನಡಾಭಿಮಾನಿಗಳು ಸಮ್ಮೇಳನಕ್ಕೆ ಬರಬೇಕು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥಶ್ರೀಗಳ ಸಾನಿಧ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಮೂರು ದಿನಗಳ ಈ ಸಮ್ಮೇಳನ ಹೊಸ ಇತಿಹಾಸಕ್ಕೆ ನಾಂದಿಯಾಡಲಿ ಎಂದು ತಿಳಿಸಿದರು.

ಎತ್ತಿನ ಬಂಡಿಗಾಡಿಯಲ್ಲಿ ಕುಟುಂಬ ಸಮೇತ ಸಮ್ಮೇಳನಕ್ಕೆ ಒಂದು ದಿನ ಮುಂಚೆ ತೆರಳುತ್ತಿರುವ ಪ್ರಗತಿಪರ ರೈತ ಸಂತೋಷ್‌ಗೆ ತಾಲೂಕು ಕಸಾಪ ಅಧ್ಯಕ್ಷ ಸಿ.ಆರ್. ಚಂದ್ರಶೇಖರ್ ಕನ್ನಡ ಶಾಲು ಹಾಕಿ ಸನ್ಮಾಸಿ ಶುಭಹಾರೈಸಿದರು. ಸಂತೋಷ್ ತೆರಳುತ್ತಿದ್ದ ಎತ್ತಿನ ಬಂಡಿಗಾಡಿಗೆ ತಾಲೂಕಿನ ಬ್ರಹ್ಮದೇವರಹಳ್ಳಿ ಗ್ರಾಪಂ ವತಿಯಿಂದ ಪೂಜೆ ಸಲ್ಲಿಸಿ ಶುಭಹಾರೈಸಲಾಯಿತು.

ಈ ವೇಳೆ ತಾಲೂಕು ಕಸಾಪ ಅಧ್ಯಕ್ಷ ಸಿ.ಆರ್.ಚಂದ್ರಶೇಖರ್, ಗೌರವ ಕಾರ್ಯದರ್ಶಿಗಳಾದ ಕೊಣನೂರು ಧನಂಜಯ, ಸಚ್ಚಿನ್‌ಕುಮಾರ್, ತಾಲೂಕು ಕಸಾಪ ಕೋಶಾಧ್ಯಕ್ಷ ಕೆಂಪೇಗೌಡ, ಪ್ರಗತಿಪರ ರೈತ ಪರಮೇಶ್ ಸೇರಿದಂತೆ ಹಲವರು ಇದ್ದರು.