ಹಾನಗಲ್ಲ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರತಿಭಾವಂತ ಬಡ ಮಕ್ಕಳ ಅವಕಾಶ ಕಳಸಿದುಕೊಳ್ಳುವ ಹುನ್ನಾರ, ೨೧ ವಿದ್ಯಾರ್ಥಿಗಳು ಆತ್ಮಹತ್ಯೆಗೊಳಗಾಗಿದ್ದು ಕೇಂದ್ರ ಸರ್ಕಾರದ ವೈಫಲ್ಯದ ದುಷ್ಪಲ, ಪ್ರತಿಭಟನಾಕಾರರ ಮೇಲೆ ಪೊಲೀಸ್ ಕ್ರಮ ಖಂಡನೀಯ ಎಂದು ಹಾನಗಲ್ಲ ತಾಲೂಕು ಶೈಕ್ಷಣಿಕ ಹೋರಾಟ ಸಮಿತಿ ಉಪವಾಸ ಸತ್ಯಾಗಹ ನಡೆಸಿತು.
ಗುರುವಾರ ಇಲ್ಲಿನ ಮಹಾತ್ಮಾಗಾಂಧಿ ವೃತ್ತದ ಸಂತ ಕವಿ ಕನಕದಾಸರ ಪುತ್ಥಳಿಯ ಬಳಿ ೨೧ಕ್ಕೂ ಅಧಿಕ ಜನರು ಬೆಳಗಿನ ೧೦ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ಉಪವಾಸ ಸತ್ಯಾಗ್ರಹ ನಡೆಸಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗಾದ ಅನ್ಯಾಯವನ್ನು ಖಂಡಿಸಿದರು.ಈ ಪ್ರಶ್ನೆ ಪತ್ರಿಕೆ ಸೋರಿಕೆ ಇಡೀ ದೇಶವೇ ತಲೆತಗ್ಗಿಸುವಂತಹ ಆಘಾತಕಾರಿ ಘಟನೆಯಾಗಿದೆ. ಇಷ್ಟೆಲ್ಲ ಘಟನೆಗಳು ಸಂಭವಿಸಿದರೂ ಕೂಡ ಕೇಂದ್ರ ಶಿಕ್ಷಣ ಸಚಿವರು ರಾಜಿನಾಮೆ ನೀಡದಿರುವುದು, ಇದರ ಸಮಗ್ರ ತನಿಖೆಗೆ ಮುಂದಾಗದಿರುವುದು ಖಂಡನೀಯ. ನವದೆಹಲಿಯಲ್ಲಿ ವಿದ್ಯಾರ್ಥಿಗಳ ಹಿತರಕ್ಷಣೆಗಾಗಿ ೨೫ ದಿನಗಳಿಂದ ಅಹಿಂಸಾತ್ಮಕ ಹೋರಾಟ ಅಮರಣ ಉಪವಾಸ ಸತ್ಯಾಗ್ರಹ ನಡೆಸುತ್ತಿರುವವರ ಮೇಲೆ ಪೊಲೀಸ್ ಬಲಪ್ರಯೋಗ ದೌರ್ಜನ್ಯ ನಡೆದಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ತರುವಂತಹದ್ದಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಶಿಕ್ಷಣ ಸಚಿವರು ರಾಜಿನಾಮೆ ನೀಡಬೇಕು, ಸೋನಂವಾಗ್ಚುಕ್ ಅವರು ಹೇಳಿದ ಎಲ್ಲ ಬೇಡಿಕೆಗಳು ಈಡೇರಬೇಕು. ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಆತ್ಮಹತ್ಯೆ ಮಾಡಿಕೊಂಡ ಎಲ್ಲ ವಿದ್ಯಾರ್ಥಿಗಳಿಗೆ ತಲಾ ಒಂದು ಕೋಟಿ ಪರಿಹಾರ ನೀಡಬೇಕು ಎಂದು ತಾಲೂಕು ತಹಸೀಲ್ದಾರ್ ಮೂಲಕ ಪ್ರತಿಭಟನಾಕಾರರು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಮುಚ್ಚಂಡಿ, ಮಂಜುನಾಥ ಕರ್ಜಗಿ, ವಿಜಯಕುಮಾರ ದೊಡ್ಡಮನಿ, ಸಿ.ಮಂಜುನಾಥ, ಫೈರೋಜ ಶಿರಬಡಗಿ, ಮಾರುತಿ ಹಂಜಗಿ, ಶಿಕಂದರ ವಾಲಿಕಾರ, ಎಂ.ಎಂ. ಮುಲ್ಲಾ, ಗುರುರಾಜ ನಿಂಗೋಜಿ, ಅಣ್ಣಪ್ಪ ಚಿಕ್ಕಣ್ಣನವರ, ಆರ್.ಎಫ್. ತಿರುಮಲೆ, ಅಶೋಕ ದಾಸರ, ಶಿವು ಭದ್ರಾವತಿ, ಶಿವು ತಳವಾರ, ಸುರೇಶ ನಾಗಣ್ಣನವರ, ರಾಜಕುಮಾರ ಶಿರಪಂಥಿ, ವಿನಯ ಬಂಕನಾಳ, ಲಿಂಗರಾಜ ಮಡಿವಾಳರ, ಜಿಲಾನಿಖಾನ ಮುಲ್ಲಾ, ಮುಕ್ತಾನಂದ ಹಿರೇಮನಿ, ಫಕ್ಕೀರೇಶ ಗೌಡಳ್ಳಿ, ಜಮೀರ ಶೇಖ್ ಉಪವಾಸ ಸತ್ಯಾಗ್ರಹದಲ್ಲಿದ್ದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರೊಂದಿಗೆ ಮಾತನಾಡಿದ ಶಾಸಕ ಶ್ರೀನಿವಾಸ್ ಮಾನೆ, ದೇಶದ ಪ್ರತಿಭಾವಂತರಿಗಾಗಿ ಇರುವ ನೀಟ್ ಪರೀಕ್ಷೆ ಗೌಪ್ಯತೆ ಕಾಯದೇ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವುದು ಪ್ರತಿಭಾವಂತ ವಿದ್ಯಾರ್ಥಿಗಳಿಗಾದ ಅನ್ಯಾಯ. ಉತ್ತರ ಭಾರದ ಕೆಲವು ದಲ್ಲಾಳಿಗಳ ಕೈವಾಡ ಇದರಲ್ಲಿದೆ. ಹಣಕ್ಕಾಗಿ ಹುಟ್ಟಿಕೊಂಡ ಶಿಕ್ಷಣ ಸಂಸ್ಥೆಗಳು ಇದರಲ್ಲಿ ಶಾಮೀಲಾಗಿವೆ. ಕೇಂದ್ರ ಸರ್ಕಾರ ಪರೀಕ್ಷೆ ನಡೆಸುವಲ್ಲಿ ವಿಫಲವಾಗಿದೆ. ಇದು ಪಾರದರ್ಶಕ ಪರೀಕ್ಷೆ ಆಗುತ್ತಿಲ್ಲ. ವಿಶೇಷವಾಗಿ ಗ್ರಾಮೀಣ ಪ್ರತಿಭಾವಂತ ಮಕ್ಕಳಿಗೆ ಇದರಿಂದ ಅನ್ಯಾಯವಾಗಿದೆ ಎಂದು ಪ್ರತಿಭಟಿಸಿದರು.
ಬೆಳಗ್ಗೆ ೧೦ ಗಂಟೆಗೆ ಆರಂಭವಾದ ಉಪವಾಸ ಸತ್ಯಾಗ್ರಹ ಸಂಜೆ ೬ ಗಂಟೆಗೆ ತಾಲೂಕು ತಹಶೀಲ್ದಾರ ವಿಠ್ಠಲ್ ಚೌಗುಲಾ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುವ ಮೂಲಕ ಪ್ರತಿಭಟನೆ ಮುಕ್ತಾಯವಾಯಿತು.