ಕಳಪೆ ಕಾಮಗಾರಿ ಆರೋಪ: ತಾತನಹಳ್ಳಿಯಲ್ಲಿ ಅಹೋರಾತ್ರಿ ಉಪವಾಸ ಸತ್ಯಾಗ್ರಹ

| Published : Feb 13 2024, 12:46 AM IST

ಕಳಪೆ ಕಾಮಗಾರಿ ಆರೋಪ: ತಾತನಹಳ್ಳಿಯಲ್ಲಿ ಅಹೋರಾತ್ರಿ ಉಪವಾಸ ಸತ್ಯಾಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಹೊಳೆನರಸೀಪುರ ತಾಲೂಕಿನ ತಾತನಹಳ್ಳಿ ಗ್ರಾಮದ ಗ್ರಾಪಂ ಮುಂಭಾಗದಲ್ಲಿ ಸೋಮವಾರ ಜಲ ಜೀವನ್ ಮಿಷನ್ ಯೋಜನೆಯ ಕಳಪೆ ಕಾಮಗಾರಿ ವಿರುದ್ಧ ಆಹೋರಾತ್ರಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದರು.

ಜಲಜೀವನ್‌ ಮಿಷನ್‌ ಅಡಿ ಕಾರ್ಯ । ಮಾಜಿ ಅದ್ಯಕ್ಷ, ಹಾಲಿ ಸದಸ್ಯರಿಂದ ಪ್ರತಿಭಟನೆ । ಪಿಡಿಒ ಭಾನುಪ್ರಕಾಶ್‌ ವಿರುದ್ಧ ಆಕ್ರೋಶ

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ತಾಲೂಕಿನ ತಾತನಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಸೋಮವಾರ ಜಲ ಜೀವನ್ ಮಿಷನ್ ಯೋಜನೆಯಡಿ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಕಳಪೆಯಾಗಿದ್ದರೂ ಸಹ ಅಧ್ಯಕ್ಷರು ಹಾಗೂ ಸದಸ್ಯರ ಗಮನಕ್ಕೆ ತಾರದೆ ಪಿಡಿಒ ಭಾನುಪ್ರಕಾಶ್ ಸ್ಪಷ್ಟೀಕರಣ ಪ್ರಮಾಣಪತ್ರ ನೀಡಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಹೇಮಂತಗೌಡ ದೂರಿದರು.

ತಾಲೂಕಿನ ತಾತನಹಳ್ಳಿ ಗ್ರಾಮದ ಗ್ರಾಪಂ ಮುಂಭಾಗದಲ್ಲಿ ಸೋಮವಾರ ಜಲ ಜೀವನ್ ಮಿಷನ್ ಯೋಜನೆಯ ಕಳಪೆ ಕಾಮಗಾರಿ ವಿರುದ್ಧ ಆಹೋರಾತ್ರಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿ ಮಾತನಾಡಿದರು.

ತಾತನಹಳ್ಳಿ ಗ್ರಾಪಂ ವ್ಯಾಪ್ತಿಯ ತಾತನಹಳ್ಳಿ, ಟಿ.ಮಾಯಗೋಡನಹಳ್ಳಿ, ಶೆಟ್ಟರಕೊಪ್ಪಲು, ತೇಜೂರು, ಲಕ್ಕೂರು, ದೇವಿಪುರ ಹಾಗೂ ಮಹದೇಶ್ವರ ಕಾಲೋನಿ ಗ್ರಾಮ ಸೇರಿದಂತೆ ಒಟ್ಟು ೧೪೬೦ ಮನೆಗಳಿಗೆ ೨೭೦.೮೬ ಲಕ್ಷ ರು. ವೆಚ್ಚದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ಮಾಡಲಾಗಿದೆ. ಮನೆ ಮನೆಗೆ ಗಂಗೆ ಶುದ್ಧ ಕುಡಿಯುವ ನೀರು ಎಂಬ ಸಂಕಲ್ಪದೊಂದಿಗೆ ಪ್ರಾರಂಭಗೊಂಡ ಯೋಜನೆಯ ಕಳಪೆ ಕಾಮಗಾರಿಯ ಬಗ್ಗೆ ಹತ್ತಾರು ಸಲ ತಿಳಿಸಿದ್ದರೂ ಕ್ರಮಕೈಗೊಳ್ಳದೇ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದಾಗಿ ಬೇಸಿಗೆಯ ಈ ಬಿರು ಬಿಸಿಲಿನಲ್ಲಿ ಗ್ರಾಮಸ್ಥರಿಗೆ ನೀರು ದೊರೆಯದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಫೆ.೧೨ರ ಸೋಮವಾರ ಸತ್ಯಗ್ರಹ ನಡೆಸಲು ಅನುಮತಿ ಕೋರಿದ ನಂತರ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಟಿ.ಮಾಯಗೋಡನಹಳ್ಳಿ, ಶೆಟ್ಟರಕೊಪ್ಪಲು, ತೇಜೂರು ಗ್ರಾಮದ ಗುತ್ತಿಗೆದಾರ ಉತ್ತಮ ರೀತಿಯಲ್ಲಿ ಕಾಮಗಾರಿ ಮಾಡಿದ್ದಾರೆ, ಆದರೆ ತಾತನಹಳ್ಳಿ ಹಾಗೂ ಲಕ್ಕೂರು ಗ್ರಾಮದಲ್ಲಿ ಕಳಪೆ ಕಾಮಗಾರಿ ಮಾಡಿದ್ದಾರೆ. ಹಳೆಯ ಪಿವಿಸಿ ಪೈಪ್‌ಲೈನ್‌ಗೆ ಸಂಪರ್ಕ ಕಲ್ಪಿಸಿದ್ದಾರೆ, ಹಲವಾರು ಕಡೆಗಳಲ್ಲಿ ನೀರು ಸೋರುತ್ತಿದೆ, ಹತ್ತಾರು ಕಡೆಗಳ ನಲ್ಲಿಗಳಲ್ಲಿ ನೀರು ಬರುತ್ತಿಲ್ಲ, ಈ ರೀತಿಯ ಹಲವಾರು ಸಮಸ್ಯೆಗಳು ಕಳಪೆ ಕಾಮಗಾರಿಯಿಂದ ನಡೆದಿದ್ದರೂ, ಈ ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದರೂ, ಪಿಡಿಒ ಭಾನುಪ್ರಕಾಶ್ ಸದಸ್ಯರ ಗಮನಕ್ಕೆ ತಾರದೆ ಸ್ಪಷ್ಟೀಕರಣ ಪ್ರಮಾಣಪತ್ರ ನೀಡಿದ್ದಾರೆ ಎಂದು ಕಿಡಿಕಾರಿದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಕೂರು ಬಸವರಾಜು ಸಮಸ್ಯೆ ಕುರಿತು ಮಾತನಾಡಿದರು. ತಾತನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗದೀಶ್, ಕೆಟ್ಟಿರುವ ಕೊಳಾಯಿ ಮತ್ತು ಪೈಪ್‌ಲೈನ್ ಸರಿಪಡಿಸಲಾಗುತ್ತಿದ್ದು, ಸಮಸ್ಯೆ ಕೆಲ ದಿನಗಳಲ್ಲಿ ಬಗೆಹರಿಯಲಿದೆ ಎಂದರು.

ಪಿಡಿಒ ಸವಿತಾ ಬಿ.ಎಸ್. ಮಾತನಾಡಿ, ಒಂದು ವಾರದಲ್ಲಿ ನೀರು ಪೂರೈಕೆ ಸರಿ ಪಡಿಸುತ್ತೇವೆ. ಕೆಲವು ವಾಟರ್ ಮ್ಯಾನ್‌ ತೋರಿದ ನಿರ್ಲಕ್ಷ್ಯದಿಂದ ಸಮಸ್ಯೆ ಉಂಟಾಗಿದ್ದು, ಕಾಮಗಾರಿ ಮುಗಿದಾಗ ನೀರು ಸರಬರಾಜು ಮಾಡಿದ್ದರೆ ಈ ರೀತಿಯ ಸಮಸ್ಯೆ ಬರುತ್ತಿರಲ್ಲಿಲ್ಲ ಎಂದರು.

ಸತ್ಯಾಗ್ರಹದಲ್ಲಿ ಪ್ರದೀಪ್, ಸುರೇಶ್, ಚಿಕ್ಕೇಗೌಡ, ಪ್ರವೀಣ್ ಕುಮಾರ್, ರೇವಣ್ಣ, ವಿಶ್ವ, ಬಸವರಾಜು, ಮೋಹನ್, ಮಂಜಣ್ಣ, ಕುಮಾರ್ ಇದ್ದರು. ಗ್ರಾ.ಪಂ. ಸದಸ್ಯರಾದ ಲಿಂಗರಾಜು, ಗುರುಮೂರ್ತಿ ಸತ್ಯಗ್ರಾಹಕ್ಕೆ ಬೆಂಬಲ ಸೂಚಿಸಿ, ತೆರಳಿದರು.

ಹೊಳೆನರಸೀಪುರ ತಾಲೂಕಿನ ತಾತನಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಹೇಮಂತಗೌಡ ನಡೆಸುತ್ತಿದ್ದ ಕಾಮಗಾರಿ ವಿರುದ್ಧ ಗ್ರಾಮಸ್ಥರು ಆಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸಿದರು. ಲಕ್ಕೂರು ಬಸವರಾಜು, ಪ್ರದೀಪ್, ಸುರೇಶ್, ಪ್ರವೀಣ್ ಕುಮಾರ್ ಇದ್ದರು.