ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಅಧಿಕಾರ ಅವಧಿಯಲ್ಲಿ ಮಂಜೂರಾಗಿದ್ದ ಪಟ್ಟಣದ ಐದು ದೀಪದ ವೃತ್ತದಿಂದ ಹಾರೋಹಳ್ಳಿಯವರೆಗೆ ರಸ್ತೆ ಮಧ್ಯೆ ವಿದ್ಯುತ್ ಬೀದಿದೀಪ ಅಳವಡಿಸುವ ಕಾಮಗಾರಿಯನ್ನು ಶಾಸಕರು ಹಾಗೂ ಅಧಿಕಾರಿಗಳು ಬೇರೆಡೆಗೆ ವರ್ಗಾಯಿಸಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಅಧಿಕಾರ ಅವಧಿಯಲ್ಲಿ ಮಂಜೂರಾಗಿದ್ದ ಪಟ್ಟಣದ ಐದು ದೀಪದ ವೃತ್ತದಿಂದ ಹಾರೋಹಳ್ಳಿಯವರೆಗೆ ರಸ್ತೆ ಮಧ್ಯೆ ವಿದ್ಯುತ್ ಬೀದಿದೀಪ ಅಳವಡಿಸುವ ಕಾಮಗಾರಿಯನ್ನು ಶಾಸಕರು ಹಾಗೂ ಅಧಿಕಾರಿಗಳು ಬೇರೆಡೆಗೆ ವರ್ಗಾಯಿಸಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಪಟ್ಟಣದ ಲೋಕೋಪಯೋಗಿ ಕಚೇರಿಗೆ ಹಾರೋಹಳ್ಳಿ ಗ್ರಾಮದ ನಿವಾಸಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಪಟ್ಟಣದ ಲೋಕೋಪಯೋಗಿ ಇಲಾಖೆ ಎದುರು ಸೇರಿದ ಕಾರ್ಯಕರ್ತರು, ಮುಖಂಡರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಸಿ.ಎಸ್.ಪುಟ್ಟರಾಜು ಸಚಿವರಾಗಿದ್ದಾಗ ಪಟ್ಟಣದ ಐದು ದೀಪ ವೃತ್ತದಿಂದ ತಾಲೂಕಿನ ಗಡಿಭಾಗದವರೆಗೂ ಕೋಟ್ಯಂತರ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಪಡಿಸಿದ್ದಾರೆ. ಪಟ್ಟಣದಿಂದ ಹಾರೋಹಳ್ಳಿವರೆಗೂ ರಸ್ತೆ ಮಧ್ಯೆ ವಿದ್ಯುತ್ ಬೀದಿ ದೀಪ ಅಳವಡಿಕೆಗಾಗಿ 2 ಕೋಟಿ ರು. ಅನುದಾನ ಬಿಡುಗಡೆ ಮಾಡಿಸಿದ್ದಾರೆ ಎಂದರು.
ಆದರೆ, ರಸ್ತೆ ಕಾಮಗಾರಿ ಮುಗಿದರು ಈವರೆಗೂ ಲೋಕೋಪಯೋಗಿ ಇಲಾಖೆ ಬೀದಿದೀಪ ಅಳವಡಿಕೆ ಮಾಡಿಲ್ಲ. ಇದರಿಂದ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ಅನಾನೂಕೂಲ ಉಂಟಾಗುತ್ತಿದೆ. ಅಪಘಾತಗಳು ಹೆಚ್ಚುತ್ತಿದೆ. ಜತೆಗೆ ಇಲ್ಲಿಗೆ ಮಂಜೂರಾಗಿರುವ ಅನುದಾನವನ್ನು ಬೇರೆಡೆಗೆ ವರ್ಗಾಯಿಸುವ ಹುನ್ನಾರ ನಡೆಯುತ್ತಿದೆ ಎಂದು ದೂರಿದರು.ಒಂದು ವೇಳೆ ಅನುದಾನವನ್ನು ಬೇರೆಡೆಗೆ ವರ್ಗಾವಣೆ ಮಾಡಿದರೆ ಅಥವಾ 15 ದಿನದ ಒಳಗಡೆ ವಿದ್ಯುತ್ ದೀಪ ಅಳವಡಿಕೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಲ್ಲದೇ, ಲೋಕೋಪಯೋಗಿ ಇಲಾಖೆ ಸಂಪೂರ್ಣ ನಿಷ್ಕ್ರಿಯೆಗೊಂಡಿದೆ. ಸಮರ್ಪಕವಾಗಿ ಅಭಿವೃದ್ಧಿ ಹೊಂದುತ್ತಿಲ್ಲ. ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಾವುದೇ ಕಾಮಗಾರಿಗಳು ನಡೆಯುತ್ತಿಲ್ಲ. ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ರಸ್ತೆಗಳು ಗುಂಡಿಬಿದ್ದು ಅಧ್ವಾನಗೊಂಡಿವೆ. ಕನಿಷ್ಠ ಪಕ್ಷ ಗುಂಡಿ ಮುಚ್ಚುವುದಕ್ಕೂ ಸಾಧ್ಯವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ತಾಲೂಕಿನ ಶಂಭೂನಹಳ್ಳಿ ಬಳಿ ರಸ್ತೆ ಸೇತುವೆ ಕುಸಿದು ನಾಲ್ಕು ತಿಂಗಳು ಕಳೆದಿದೆ. ಸೇತುವೆ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಸಾರ್ವಜನಿಕರು ಆತಂಕದಿಂದಲೇ ಓಡಾಡುವ ಸ್ಥಿತಿ ಎದುರಾಗಿದೆ ಎಂದು ಕಿಡಿಕಾರಿದರು.
ಪಟ್ಟಣದಲ್ಲಿ ಕುಡಿಯುವ ನೀರಿನ ಪೈಪ್ ಅಳವಡಿಕೆಗಾಗಿ ತೆಗೆದಿರುವ ಗುಂಡಿಗಳಿಂದ ಅವಾಂತರ ಸೃಷ್ಟಿಯಾಗಿದೆ. ಯಾವ ರಸ್ತೆ ನೋಡಿದರು ಬರೀ ಗುಂಡಿಗಳೇ ಕಾಣುತ್ತಿವೆ. ತ್ವರಿತವಾಗಿ ಮುಚ್ಚಿಸಿ ಅಪಘಾತ ವಲಯಗಳನ್ನು ಗುರುತಿಸಿ ನಾಮಫಲಕ ಅಳವಡಿಸಿಬೇಕು ಎಂದು ಆಗ್ರಹಿಸಿದರು.ಪಟ್ಟಣದ ಇಂಡಿಯನ್ ಆಯಿಲ್ ಬಂಕ್ ಬಳಿ ರಸ್ತೆಯಲ್ಲಿ ಬಳಿ ಅಪಘಾತಗಳು ಸಂಖ್ಯೆ ಹೆಚ್ಚುತ್ತಿರುವುದರಿಂದ ಪೊಲೀಸ್ ಇಲಾಖೆ ನೆರವುನೊಂದಿಗೆ ಬ್ಯಾರಿಗೇಟ್ ಅಥವಾ ರಸ್ತೆ ಹಂಪ್ ಗಳನ್ನು ಹಾಕಿಸಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ಎಇ ಚಿದಾನಂದ್ ಅವರೊಂದಿಗೆ ಮಾತನಾಡಿ, ಪಟ್ಟಣದಿಂದ ಹಾರೋಹಳ್ಳಿ ಗ್ರಾಮದ ವರೆಗೂ ರಸ್ತೆಗೆ ಬೀದಿದೀಪ ಅಳವಡಿಕೆ ಕಾಮಗಾರಿಯನ್ನು ಕೆಲವು ತಾಂತ್ರಿಕ ಕಾರಣದಿಂದ ತಡವಾಗಿದೆ. ಶೀಘ್ರವೇ ರಸ್ತೆಗೆ ಬೀದಿ ದೀಪ ಅಳವಡಿಸಲಾಗುವುದು ಎಂದು ಭರವಸೆ ನೀಡಿದರು.ಪ್ರತಿಭಟನೆಯಲ್ಲಿ ಪುರಸಭೆ ಮಾಜಿ ಸದಸ್ಯರಾದ ಆರ್.ಸೋಮಶೇಖರ್, ಗಿರೀಶ್, ಚಂದ್ರು, ಶಿವಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ಆದರ್ಶ, ಮಾಜಿ ಅಧ್ಯಕ್ಷ ಹಾರೋಹಳ್ಳಿ ಸತೀಶ್, ಮುಖಂಡರಾದ ಸಗಾಯಂ, ಚಿಕ್ಕಾಡೆ ಚೇತನ್, ಹಾರೋಹಳ್ಳಿ ಉಮೇಶ್, ಪ.ಕೃಷ್ಣೇಗೌಡ, ಸೋಮಣ್ಣ, ಬಿ.ಎಸ್.ಜಯರಾಜ್, ರಾಜೇಶ್, ಜಯರಾಮು, ಬೊಮ್ಮರಾಜು, ಕುಮರೇಶನ್, ಆರುಮುಗಂ, ವಾಹಿದ್, ಪ್ರಭಾಕರ್, ಗುರು, ಶೋಭಾ, ಶಶಿಕಲಾ, ಸುನಂದಮ್ಮ, ಚೈತ್ರ, ಮಂಗಳ, ರಾಜಮ್ಮ, ಸುದಾ, ಐಶ್ವರ್ಯ ಸೇರಿದಂತೆ ಹಲವರು ಇದ್ದರು.