ಕೋಟಾರನ್ನು ರಾಜಕೀಯವಾಗಿ ಮುಗಿಸುವ ಹುನ್ನಾರು: ಮಾಜಿ ಸಚಿವ ವಿನಯ ಸೊರಕೆ

| Published : Apr 03 2024, 01:32 AM IST

ಕೋಟಾರನ್ನು ರಾಜಕೀಯವಾಗಿ ಮುಗಿಸುವ ಹುನ್ನಾರು: ಮಾಜಿ ಸಚಿವ ವಿನಯ ಸೊರಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಯಕರ್ತನಿಂದ ನಾಯಕನೇ ಹೊರತು, ನಾಯಕನಿಂದ ಕಾರ್ಯಕರ್ತರಲ್ಲ. ಈ ಬಾರಿ ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ ಎಂದು ಹೆಗೆಡೆ ವಿನಂತಿಸಿಕೊಂಡರು.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿಸುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಆರೋಪಿಸಿದರು.

ತಾಲೂಕಿನ ಬಿ.ಎಚ್.ಕೈಮರದ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿ, ಕೇವಲ ಅಂಬಾನಿ, ಅದಾನಿಯಂತವರನ್ನು ಶ್ರೀಮಂತರನ್ನಾಗಿಸುವ ಬಿಜೆಪಿಗೆ ನಾನು ಬಡವ, ನನ್ನ ಬಳಿ ಹಣವಿಲ್ಲ ಎನ್ನುವ ಕೋಟಾ ಶ್ರೀನಿವಾಸ್‌ ಪೂಜಾರಿಯವರಿಗೂ ಹೊಂದಾಣಿಕೆಯೇ ಆಗುವುದಿಲ್ಲ. ಪೂಜಾರಿವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಹುನ್ನಾರ ನಡೆಸಿ, ಅವರನ್ನು ಹರಕೆ ಕುರಿಯನ್ನಾಗಿಸುತ್ತಿದೆ. ಆದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಈ ಚುನಾವಣೆಯಲ್ಲಿ ಪೂಜಾರಿಯವರನ್ನು ಸೋಲಿಸಬೇಕು ಎಂದರು.

ಕಾಂಗ್ರೆಸ್ ಪಕ್ಷದ ಮುಖಂಡ ಆಯನೂರು ಮಂಜುನಾಥ್ ಮಾತನಾಡಿ, ಜಯಪ್ರಕಾಶ್‌ ಹೆಗ್ಡೆಯವರಿಗೆ ಹಿಂದಿ, ಇಂಗ್ಲಿಷ್ ಭಾಷೆ ಅರಿವಿದೆ. ಅವರಿಗೆ ಸಂಸದರಾಗುವ ಎಲ್ಲಾ ಅರ್ಹತೆ ಇದೆ. ಅ‍ವರು ಜನಪರ, ರೈತರ ಪರವಾಗಿ ಸಂಸತ್‌ನಲ್ಲಿ ಧ್ವನಿ ಎತ್ತುತ್ತಾರೆ. ಹಿಂದುಳಿದ ವರ್ಗದವರ ಸಮಸ್ಯೆ ಅರಿವಿದೆ. ಈಗಾಗಲೇ ಜಾತಿ ಗಣತಿ ವರದಿ ಸಲ್ಲಿಸಿದ್ದು, ಸಂಸದರಾಗಿ ಗೆದ್ದ ನಂತರ ಎಲ್ಲಾ ಹಿಂದುಳಿದ ವರ್ಗಗಳಿಗೆ ಏನು ಆಗಬೇಕು ಎಂಬುವುದನ್ನು ಅಧ್ಯಯನ ಮಾಡಿರುವ ಜಯಪ್ರಕಾಶ್‌ ಹೆಗ್ಡೆ ಉಡುಪಿ, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಬೇಕಿದೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ ಮಾತನಾಡಿ, ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಿಜೆಪಿ ಮುಖಂಡರು ನನ್ನನ್ನು ಏಕೆ ಪಕ್ಷಕ್ಕೆ ಸೇರಿಕೊಂಡರು ಹಾಗೂ ಏಕೆ ಪಕ್ಷದಿಂದ ತೆಗೆದರು ಎಂದು ಹೇಳಲಿ. ಗೋರಕ್‌ಸಿಂಗ್ ವರದಿ, ಹುಲಿ ಯೋಜನೆ ಬಗ್ಗೆ ಅನೇಕ ಪ್ರತಿಭಟನೆಗಳಾದವು. ಆದರೆ 10 ವರ್ಷ ಕೇಂದ್ರದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಏನು ಮಾಡಿದೆ? ನಾಯಕನ ಹೆಸರೇಳಿ ಚುನಾವಣೆಗೆ ಸ್ಪರ್ಧಿಸುವುದಲ್ಲ. ನಾವು ಒಮ್ಮೆ ಆಯ್ಕೆಯಾದ ನಂತರ ತಮ್ಮ ಅಧಿಕಾರದ ಅವಧಿಯಲ್ಲಿ ಏನೇನು ಅಭಿವೃದ್ಧಿ ಕೆಲಸ ಮಾಡಿದ್ದೇವೆ ಎಂದು ಜನರ ಬಳಿ ಹೇಳಿ ಚುನಾವಣೆ ಎದುರಿಸಬೇಕು. ಕೇವಲ ಚುನಾವಣೆಯಲ್ಲಿ ಗೆದ್ದರೆ ಸಾಲದು. ಕ್ಷೇತ್ರದ ರೈತರ, ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಬೇಕು. ಕೆಲಸ ಮಾಡುವುದು ನಮ್ಮ ಮೊದಲ ಆದ್ಯತೆ ಆಗಬೇಕು. ನಾನು ಸೋತರೂ, ಗೆದ್ದರೂ ಜನರ ಮಧ್ಯೆಯೇ ಇದ್ದು, ಕ್ಷೇತ್ರದ ಜನರ ಸಂಕಷ್ಟ ಆಲಿಸಿದ್ದೇನೆ. ಕೊಳೆ ರೋಗ ಬಂದಾಗ ಅಡಿಕೆ ತೋಟಗಳಿಗೆ ಭೇಟಿ ನೀಡಿ, ರೈತರಿಗೆ ಆತ್ಮಸ್ಥೆರ್ಯ ತುಂಬುವ ಕಾರ್ಯ ಮಾಡಿದ್ದೇನೆ. ಈ ಭಾಗದಲ್ಲಿ ಹಾವು ಗೊಲ್ಲ ಹಾಗೂ ಹೇಮರೆಡ್ಡಿ ಮಲ್ಲಮ್ಮ ಜನಾಂಗದವರಿಗೆ ಜಾತಿ ನೋಂದಣಿ ಬಗ್ಗೆ ಗೊಂದಲವಿದೆ. ಈಗಾಗಲೇ ನಾನು ಸಲ್ಲಿಸಿರುವ ವರದಿಯಲ್ಲಿ ಮುಂದೆ ಇವರಿಗೆ ಅನುಕೂಲವಾಗಲಿದೆ. ಹಾವುಗೊಲ್ಲರಿಗೆ ಜಾತಿ ಸಮಸ್ಯೆಯಿಂದಾಗಿ ನಿವೇಶನ, ಮನೆ ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ನೀಡಿರುವ ಭಾಗ್ಯಗಳ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಜನವರಿಗೆ ಮಾಡಿಕೊಡಬೇಕು. ಕಾರ್ಯಕರ್ತನಿಂದ ನಾಯಕನೇ ಹೊರತು, ನಾಯಕನಿಂದ ಕಾರ್ಯಕರ್ತರಲ್ಲ. ಈ ಬಾರಿ ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ. 5 ವರ್ಷ ಸಂಸದನಾಗಿ ಆಯ್ಕೆಯಾದರೆ ಕ್ಷೇತ್ರದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಮಾಡಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.

ರಾಜ್ಯ ಕಿಸಾನ್ ಸೆಲ್ ಘಟಕದ ಅಧ್ಯಕ್ಷ ಸಚಿನ್‌ಮೀಗಾ ಮಾತನಾಡಿ, ದೇಶದ ಜನರಿಗೆ ಸುಳ್ಳು ಹೇಳಿ, ಮೋಡಿ ಮಾಡುವುದೇ ಬಿಜೆಪಿ ಕೆಲಸವಾಗಿದೆ. ಬಿಜೆಪಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 400 ಕ್ಕೂ ಅಧಿಕ ಸ್ಥಾನಗಳನ್ನು ಗಳಿಸುತ್ತೇವೆ ಎಂದು ಮೆರೆಯುತ್ತಿದೆ. ಆದರೆ, ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಕಾರಣಕ್ಕಾಗಿಯೇ 2 ರಾಜ್ಯದ ಸಿಎಂ ಬಂಧಿಸಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ಈಗಾಗಲೇ ಜಿಲ್ಲೆಯನ್ನು ಬಿಜೆಪಿ ಮುಕ್ತ ಮಾಡಿದ್ದೇವೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲೂ ಕೂಡ ಬಿಜೆಪಿ ಮುಕ್ತ ಕ್ಷೇತ್ರ ಮಾಡೋಣ. ಗ್ಯಾರಂಟಿ ಈಡೇರಿಸುವುದರ ಮೂಲಕ ಕಾಂಗ್ರೆಸ್‌ ನುಡಿದಂತೆ ನಡೆದಿದೆ. ರಾಜ್ಯದ ಮಣ್ಣಿನ ಮಗ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಈ ಬಾರಿ ಲೋಕಸಭಾ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಖರ್ಗೆ ಅವರಿಗೆ ಶಕ್ತಿ ತುಂಬುವ ಕಾರ್ಯ ನೀವೆಲ್ಲರೂ ಮಾಡಬೇಕೆಂದು ಕರೆ ನೀಡಿದರು.

ಶಾಸಕ ಡಿ.ಟಿ.ರಾಜೇಗೌಡ ಮಾತನಾಡಿ, ಈ ಚುನಾವಣೆ ಅತ್ಯಂತ ಮಹತ್ತರವಾದ ಚುನಾವಣೆ ಆಗಿದೆ. ಭಾವನೆ ಕೆರಳಿಸುವ ಮತ್ತು ಬದುಕನ್ನು ಕಟ್ಟಿಕೊಡುವ ಪಕ್ಷಗಳ ಮಧ್ಯೆ ಯುದ್ಧ ನಡೆಯುತ್ತಿದೆ. ಕಾಂಗ್ರೆಸ್ ದೇಶದ ಜನರಿಗೆ ಬದುಕನ್ನು ಕಟ್ಟಿಕೊಡುವ ಕಾರ್ಯ ಮಾಡಿದರೆ, ಬಿಜೆಪಿ ಜಾತಿ, ಧರ್ಮದ ಹೆಸರಿನಲ್ಲಿ ಜನರ ಭಾವನೆ ಕೆರಳಿಸುವ ಕಾರ್ಯ ಮಾಡುತ್ತಿದೆ. ಈ ಕ್ಷೇತ್ರದ ಜನರು ತಮ್ಮ ಬದುಕನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ವೇಳೆ ಭಾಗ್ಯಗಳ ಸಮಿತಿ ಅಧ್ಯಕ್ಷ ಶಿವಾನಂದಸ್ವಾಮಿ, ಮುಖಂಡ ಸುಧೀರ್‌ಕುಮಾರ್‌ ಮುರಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್‌ಬೈಲ್‌ನಟರಾಜ್, ಕೆಪಿಸಿಸಿ ಸದಸ್ಯರುಗಳಾದ ಇಫ್ತಿಕಾರ್‌ಆದಿಲ್, ಪಿ.ಆರ್.ಸದಾಶಿವ, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಬಿ.ಎಸ್.ಸುಬ್ರಮಣ್ಯ, ಚಂದ್ರಮ್ಮ, ಆಶಾ, ಮೀನಾಕ್ಷಿಕಾಂತರಾಜ್, ಸತೀಶ್, ಈ.ಸಿ.ಜೋಯಿ, ಸುನೀಲ್‌ಕುಮಾರ್, ಈಚಿಕೆರೆಸುಂದರೇಶ್, ಕೆ.ಎ.ಅಬೂಬೇಕರ್, ಹನೀಫ್, ಬಿಳಾಲುಮನೆಉಪೇಂದ್ರ, ಬಿನು, ಎಲ್ದೋ ಮತ್ತಿತರರಿದ್ದರು.